
ತಿಪಟೂರು, ಏ.೩- ತಾಲ್ಲೂಕಿನ ಕೊಬ್ಬರಿ ಬೆಳೆಗಾರರ ಹೋರಾಟ ಸಮಿತಿಯ ಅನಿರ್ಧಿಷ್ಠಾವಧಿ ಧರಣಿಯ ನಂತರದಲ್ಲಿ ‘ನಮ್ಮ ನಡೆ ಹಳ್ಳಿ ಕಡೆ’ ಎಂಬ ನೂತನ ಕಾರ್ಯಕ್ರಮದೊಂದಿಗೆ ಗ್ರಾಮೀಣ ಭಾಗದ ರೈತರಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕೊಬ್ಬರಿ ಬೆಳೆಗಾರರ ಹೋರಾಟ ಸಮಿತಿ ಅಧ್ಯಕ್ಷ ಬಿ.ಯೋಗೀಶ್ವರಸ್ವಾಮಿ ತಿಳಿಸಿದರು.
ನಗರದಲ್ಲಿ ಕೊಬ್ಬರಿ ಬೆಳೆಗಾರರ ಹೋರಾಟ ಸಮಿತಿಯ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮೆಲ್ಲರ ಬದುಕಿನ ಬೆಳೆ ಕೊಬ್ಬರಿಯ ಬೆಲೆ ತೀವ್ರ ಕುಸಿತಗೊಂಡು ನಾವೆಲ್ಲರೂ ಆಘಾತಕ್ಕೆ ಒಳಗಾಗಿದ್ದೇವೆ. ಕೊಬ್ಬರಿಯ ಕನಿಷ್ಟ ಬೆಂಬಲ ಬೆಲೆ ೨೦ ಸಾವಿರ ರೂ. ಪ್ರೋತ್ಸಾಹ ಧನ, ೫ ಸಾವಿರ ರೂ.ಗಳಿಗೆ ಮನವಿ ಸಲ್ಲಿಸಿ ೩೩ ದಿನಗಳು ಪ್ರತಿಭಟನೆ, ಉಪವಾಸ ಮಾಡಿ, ಸರ್ಕಾರಕ್ಕೆ ಮನವಿ ಸಲ್ಲಿಸಿ ೩೩ ದಿನಗಳು ಪ್ರತಿಭಟನೆ, ಉಪವಾಸ ಮಾಡಿ ಮಾ. ೨೪ ರಂದು ತೆಂಗು ಬೆಳೆಯುವ ರೈತರೆಲ್ಲರೂ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಸ್ವಾಭಿಮಾನಿ ಸಮಾವೇಶ ನಡೆಸಿ ಸರ್ಕಾರಕ್ಕೆ ಆಗ್ರಹಿಸಿದರೂ ಕೇಂದ್ರ ಮತ್ತು ರಾಜ್ಯದ ಆಡಳಿತಾರೂಢ ಬಿಜೆಪಿ ಸರ್ಕಾರ ನಿರ್ಲಕ್ಷ ತೋರಿದೆ ಎಂದು ದೂರಿದರು.
ನಮ್ಮೆಲ್ಲರ ಉಳಿವಿಗಾಗಿ ‘ನಮ್ಮ ನಡೆ ಹಳ್ಳಿಯ ಕಡೆ’ ಎಂಬ ಆಶಯದೊಂದಿಗೆ ಹಳ್ಳಿಗಳ ಕಡೆಗೆ ಹೊರಟಿದ್ದು ಗ್ರಾಮೀಣ ಭಾಗದ ಜನರಿಗೆ ಚುನಾವಣೆಯ ಸಂದರ್ಭದಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಲಾಗುವುದು. ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳನ್ನು ರೈತರ ಸಮಸ್ಯೆ, ಸ್ಥಳೀಯ ಸಮಸ್ಯೆಗಳ ಬಗ್ಗೆ ಪ್ರಶ್ನೆ ಮಾಡುವಂತಹ ಕಾರ್ಯವನ್ನು ಮಾಡಲು ಜನರನ್ನು ಜಾಗೃತಿಗೊಳಿಸುವ ಕಾರ್ಯವನ್ನು ಮಾಡಲಾಗುವುದು ಎಂದರು.
ಚುನಾವಣೆಗೆ ರೈತ ಸಂಘದ ಅಭ್ಯರ್ಥಿ ಇಲ್ಲ
ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಸಾಮೂಹಿಕ ನಾಯಕತ್ವದಿಂದ ಚುನಾವಣೆಗೆ ಯಾರೂ ಸ್ಪರ್ಧೆ ಮಾಡುವುದಿಲ್ಲ. ಅಲ್ಲದೇ ಯಾವುದೇ ಪಕ್ಷಕ್ಕೂ ಬೆಂಬಲವನ್ನು ನೀಡಿಲ್ಲ. ರೈತ ಸಂಘದ ಹೆಸರಿನಲ್ಲಿ ಚುನಾವಣೆಗೆ ನಿಲ್ಲಲ್ಲು ಮುಂದಾಗಿರವ ಅಭ್ಯರ್ಥಿಯೂ ಬೇರೆ ಬಣದವರಾಗಿದ್ದು ನಮ್ಮ ಸಂಘಕ್ಕೂ ಇವರಿಗೂ ಯಾವುದೇ ಸಂಬಂಧವಾಗಲಿ, ಬೆಂಬಲವಾಗಲಿ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ನೂತನ ಪದಾಧಿಕಾರಿಗಳ ಆಯ್ಕೆ
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಪ್ರೊ..ಜಯನಂದಯ್ಯ, ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಜಯಚಂದ್ರ ಶರ್ಮಾ, ಕಾರ್ಯದರ್ಶಿಯಾಗಿ ಹರ್ಷ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷರಾಗಿ ತಿಮ್ಲಾಪುರ ದೇವರಾಜು ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕೊಬ್ಬರಿ ಹೋರಾಟ ಸಮಿತಿಯ ಕಾರ್ಯದರ್ಶಿ ಎಸ್.ಎನ್.ಸ್ವಾಮಿ, ಶ್ರೀಕಾಂತ್ ಕೆಳಹಟ್ಟಿ, ಮನೋಹರ್ ಪಟೇಲ್, ಹಳೇಪಾಳ್ಯ ರಂಗಧಾಮಯ್ಯ ಮತ್ತಿತರರು ಉಪಸ್ಥಿತರಿದ್ದರು.