ಕೊಬ್ಬರಿ ಖರೀದಿ ವಿಳಂಬ: ರೈತರ ಪ್ರತಿಭಟನೆ

ತುರುವೇಕೆರೆ, ಜೂ. ೧೭- ರೈತರ ಕೊಬ್ಬರಿ ಖರೀದಿಸಲು ನಾಫೆಡ್ ಕೇಂದ್ರದ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಆರೋಪಿಸಿ ತಾಲ್ಲೂಕು ತೆಂಗು ಮತ್ತು ಅಡಿಕೆ ಬೆಳೆಗಾರರ ಸಂಘದ ಪದಾಧಿಕಾರಿಗಳು ಹಾಗೂ ರೈತರು ಪಟ್ಟಣದ ಎಪಿಎಂಸಿ ಆವರಣದ ನಫೆಡ್ ಕೇಂದ್ರದ ಬಳಿ ಪ್ರತಿಭಟನೆ ನಡೆಸಿದರು.
ತೆಂಗು ಮತ್ತು ಅಡಿಕೆ ಬೆಳೆಗಾರರ ಸಂಘದ ತಾಲ್ಲೂಕು ಅಧ್ಯಕ್ಷ ಎನ್.ಆರ್.ಜಯರಾಂ ಮಾತನಾಡಿ, ನಾಲ್ಕೈದು ದಿನಗಳಿಂದ ರೈತರು ತಂದಿರುವ ಕೊಬ್ಬರಿಯನ್ನು ಅಧಿಕಾರಿಗಳು ಸಮಪರ್ಕವಾಗಿ ಖರೀದಿಸುತ್ತಿಲ್ಲ. ಇದರಿಂದ ೨೦೦ಕ್ಕೂ ಹೆಚ್ಚು ಕೊಬ್ಬರಿ ಚೀಲ ತುಂಬಿದ ಟ್ರ್ಯಾಕ್ಟರ್‌ಗಳು ಎಪಿಎಂಸಿ ಆವರಣದಲ್ಲಿ ನಿಂತು ರೈತರು ಪರದಾಡುತ್ತಿದ್ದಾರೆ. ಅಧಿಕಾರಿಗಳು ಬೇಜವಾಬ್ದಾರಿ ತೋರಿದ್ದಾರೆ ಎಂದು ದೂರಿದರು.
ಒಂದು ಚೀಲ ಕೊಬ್ಬರಿ ತೂಕ ಹಾಕುವ ಹಮಾಲಿಗೆ ೨೫ ರೂ., ವ್ಯವಸ್ಥಾಪಕರಿಗೆ ೫೦೦ ಸೇರಿದಂತೆ ಒಂದು ಚೀಲಕ್ಕೆ ೧ ಸಾವಿರ ರೂ. ಲಂಚ ನೀಡಬೇಕಿದೆ. ಒಂದು ಟ್ರ್ಯಾಕ್ಟರ್ ಕೊಬ್ಬರಿಯನ್ನು ನಫೆಡ್‌ಗೆ ತಂದು ಬಿಡುವುದರೊಳಗೆ ೧೨ ರಿಂದ ೧೫ ಸಾವಿರ ಖರ್ಚಾಗುತ್ತದೆ ಎಂದು ರೈತರು ಆರೋಪಿಸಿದರು.
ಹಣ ಕೊಡದಿದ್ದರೆ ಸಿಬ್ಬಂದಿ ಕೊಬ್ಬರಿ ಉಂಡೆ ಸರಿ ಇಲ್ಲವೆಂದು ಸುಮ್ಮನೆ ಒಡೆದು ಹಾಕುತ್ತಾರೆ. ದುಡ್ಡು ಕೊಟ್ಟರೆ ಹಾಗೆ ಹಾಕುತ್ತಾರೆ. ಇಲ್ಲಿ ಅವ್ಯವಹಾರ ಹೆಚ್ಚಿದೆ. ಈ ಬಗ್ಗೆ ಮೇಲಾಧಿಕಾರಿಗಳು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಸಂಘದ ಕಾರ್ಯದರ್ಶಿ ಕಾಂತರಾಜು, ರೇವಣ್ಣ, ನಿರ್ದೇಶಕರಾದ ಕೆಂಪರಾಜು, ಮೂಡಲಗಿರಿಗೌಡ, ಸುರೇಶ್, ರೇವಣ್ಣ, ಮಾಚೇನಹಳ್ಳಿ ಮಲ್ಲಿಕಾರ್ಜುನ, ಮಹಾಲಿಂಗಯ್ಯ, ಪ್ರಸನ್ನ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.