
(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು, ಜು. ೧೨- ರಾಜ್ಯದಲ್ಲಿ ಕೊಬ್ಬರಿಯನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಸುವ ಅವಧಿ ವಿಸ್ತರಿಸುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಅವಧಿ ವಿಸ್ತರಣೆ ನಂತರ ಖರೀದಿಸಲಾಗುವ ಉಂಡೆ ಕೊಬ್ಬರಿಗೆ ಕೇಂದ್ರದ ಬೆಂಬಲ ಬೆಲೆ ಜತೆಗೆ ರಾಜ್ಯ ಸರ್ಕಾರ ಪ್ರತಿ ಕ್ವಿಂಟಾಲ್‌ಗೆ ೧೨೫೦ ರೂ. ಪ್ರೋತ್ಸಾಹ ಧನ ನೀಡುತ್ತದೆ ಎಂದು ಜವಳಿ, ಸಕ್ಕರೆ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ವಿಧಾನಸಭೆಯಲ್ಲಿಂದು ಪ್ರಕಟಿಸಿದರು.
ವಿಧಾನಸಭೆಯಲ್ಲಿ ನಿಯಮ-೬೯ ರಡಿಯಲ್ಲಿ ಉಂಡೆ ಕೊಬ್ಬರಿ ಖರೀದಿಗೆ ಸಂಬಂಧಿಸಿದಂತೆ ನಡೆದ ಚರ್ಚೆಗೆ ಇಂದು ಉತ್ತರ ನೀಡಿದ ಅವರು, ದಿನಾಂಕ ೧೧-೦೭-೨೦೨೩ರ ಅಂತ್ಯಕ್ಕೆ ೪೫೦೩೮ ಮೆಟ್ರಿಕ್ ಟನ್ ಉಂಡೆ ಕೊಬ್ಬರಿಯನ್ನು ಬೆಂಬಲ ಬೆಲೆ ಯೋಜನೆಯಡಿ ಕೇಂದ್ರ ಸರ್ಕಾರ ಖರೀದಿ ಏಜೆನ್ಸಿ ನಫೆಡ್ ಮೂಲಕ, ರಾಜ್ಯ ಏಜೆನ್ಸಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಾಹಮಂಡಳದ ಮೂಲಕ ಖರೀದಿಯಾಗಿದ್ದು, ಇನ್ನು ಮುಂದೆ ಅಂದರೆ ಇಂದಿನಿಂದ ಜಾರಿಗೆ ಬರುವಂತೆ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಪ್ರತಿ ಕ್ವಿಂಟಾಲ್‌ಗೆ ೧,೧೭೫೦ ರೂ.ಗಳ ಜತೆಗೆ ರಾಜ್ಯ ಸರ್ಕಾರದಿಂದ ಪ್ರತಿ ಕ್ವಿಟಾಂಲ್‌ಗೆ ೧೨೫೦ ರೂ. ಪ್ರೋತ್ಸಾಹ ಧನ ನೀಡುವ ತೀರ್ಮಾನ ಮಾಡಿದ್ದೇವೆ ಎಂದರು.
ಈ ಹಿಂದೆ ಯಾವ ಸರ್ಕಾರವೂ ಕೊಬ್ಬರಿಗೆ ಇಷ್ಟು ಹೆಚ್ಚಿನ ಪ್ರಮಾಣದಲ್ಲಿ ಪ್ರೋತ್ಸಾಹ ಧನ ನೀಡಿರಲಿಲ್ಲ. ತಾವು ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಅವರನ್ನು ಒಪ್ಪಿಸಿ ಪ್ರತಿ ಕ್ವಿಂಟಾಲ್ ಕೊಬ್ಬರಿಗೆ ೧೨೫೦ ರೂ. ಪ್ರೋತ್ಸಾಹ ಧನ ನೀಡುವ ತೀರ್ಮಾನ ಮಾಡಲಾಗಿದೆ ಎಂದು ಅವರು ಹೇಳಿದರು.
ರಾಜ್ಯ ಸರ್ಕಾರ ಕೊಬ್ಬರಿ ಉಂಡೆ ಖರೀದಿ ಪ್ರಮಾಣ ಹೆಚ್ಚಳ ಹಾಗೂ ಖರೀದಿ ಅವಧಿ ವಿಸ್ತರಣೆ ಈಗಾಗಲೇ ೨ ಬಾರಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಕೇಂದ್ರ ಸರ್ಕಾರ ಅವಧಿಯನ್ನು ವಿಸ್ತರಿಸುವ ವಿಶ್ವಾಸವಿದೆ. ಅವಧಿ ವಿಸ್ತರಣೆಯಾದರೆ ಸುಮಾರು ೮೦ ಮೆಟ್ರಿಕ್ ಟನ್ ಉಂಡೆ ಕೊಬ್ಬರಿಯನ್ನು ಖರೀದಿಸಲಾಗುವುದು ಎಂದರು.
ಇನ್ನು ಮುಂದೆ ಖರೀದಿಯಾಗುವ ಉಂಡೆ ಕೊಬ್ಬರಿಗೆ ರಾಜ್ಯ ಸರ್ಕಾರದ ಪ್ರೋತ್ಸಾಹ ಧನ ಸಿಗುತ್ತದೆ. ಈ ಹಿಂದೆಯೇ ಖರೀದಿಯಾಗಿರುವ ಕೊಬ್ಬರಿಗೆ ಪ್ರೋತ್ಸಾಹ ಧನ ನೀಡಲು ಆಗುವುದಿಲ್ಲ ಎಂದರು ಕೊಬ್ಬರಿ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ನಿರ್ಧರಿಸುತ್ತದೆ. ಬೆಂಬಲ ಬೆಲೆ ಹೆಚ್ಚಳ ಮಾಡಬೇಕು ಎಂದು ಕೇಂದ್ರದ ಮೇಲೆ ಬಿಜೆಪಿ ಪಕ್ಷ ಒತ್ತಡ ಹೇರಲಿ. ಕ್ವಾಂಟಿಟಿ ಮತ್ತು ದರವನ್ನು ಹೆಚ್ಚಳ ಮಾಡಿಸಲು ಡಬ್ಬಲ್ ಎಂಜಿನ್ ಸದನದಲ್ಲಿ ಕಾಣಿಸುತ್ತಿಲ್ಲ ಎಂದು ಖಾಲಿ ಇದ್ದ ಬಿಜೆಪಿ ಸದಸ್ಯರ ಆಸಗಳನ್ನು ಗಮನಿಸಿ ಅವರು ವ್ಯಂಗ್ಯವಾಗಿ ಹೇಳಿದರು.ಕೇಂದ್ರಕ್ಕೆ ಕೊಬ್ಬರಿ ಖರೀದಿ ಅವಧಿ ವಿಸ್ತರಿಸುವಂತೆ ಈಗಾಗಲೇ ಎರಡು ಬಾರಿ ಮನವಿ ಮಾಡಿದ್ದೇವೆ. ಕೇಂದ್ರ ಸರ್ಕಾರ ಶೇ. ೨೫ ರಷ್ಟು ಕೊಬ್ಬರಿಯನ್ನು ಖರೀದಿ ಮಾಡುತ್ತದೆ. ಇದರ ಬದಲು ಶೇ. ೪೦-೫೦ ರಷ್ಟು ಕೊಬ್ಬರಿ ಖರೀದ ಮಾಡಬೇಕು ಎಂದು ಕೇಳಿದ್ದೇವೆ ಎಂದರು
ಇದುವರೆಗೂ ಕೊಬ್ಬರಿಯನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಸುವ ಯೋಜನೆಯ ೩೧,೪೬೪೧ ರೈದತರು ಪ್ರಯೋಜನ ಪಡೆದುಕೊಂಡಿದ್ದಾರೆ. ೪೫,೩೦೮ ಮೆಟ್ರಿಕ್ ಟನ್ ಕೊಬಬ್ರ ಖರೀದಿಯಾಗಿದೆ ಪ್ರಸ್ತುತ ವಿವಿಧ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್‌ಗೆ ೭, ೭೦೦ ರೂ.ಗಳಿಂದ ೮೦೨೦ ಧಾರಣೆಯಲ್ಲಿ ಕೊಬ್ಬರಿ ಮಾರಾಟವಾಗುತ್ತಿದೆ ಎಂಬ ಮಾಹಿತಿಯನ್ನು ಸದನಕ್ಕೆ ನೀಡಿದರು.