ಕೊಬ್ಬರಿ ಖರೀದಿಗೆ 6 ತಿಂಗಳು ಕಾಲಾವಕಾಶ

(ಸಂಜೆವಾಣಿ ಪ್ರತಿನಿಧಿಯಿಂದ)


ಬೆಂಗಳೂರು, ಜು. ೨೧- ರಾಜ್ಯ ಸರ್ಕಾರದ ಕೋರಿಕೆ ಮೇರೆಗೆ ಕೇಂದ್ರ ಸರ್ಕಾರ ಗರಿಷ್ಟ ೫೪,೭೫೦ ಮೆಟ್ರಿಕ್ ಟನ್ ಕೊಬ್ಬರಿ ಖರೀದಿ ಪ್ರಮಾಣ ನಿಗದಿಪಡಿಸಿ ಖರೀದಿಗೆ ಆರು ತಿಂಗಳ ಕಾಲಾವಕಾಶ ನೀಡಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ್ ಎಸ್. ಪಾಟೀಲ್ ವಿಧಾನಪರಿಷತ್‌ನಲ್ಲಿಂದು ತಿಳಿಸಿದರು.
ಇದುವರೆಗೂ ೫೪ ಸಾವಿರ ಮಂದಿ ಕೊಬ್ಬರಿ ಬೆಳೆಗಾರರು ಮಾತ್ರ ನೋಂದಣಿ ಮಾಡಿಕೊಂಡಿದ್ದಾರೆ. ಇನ್ನೂ ೧.೫೪ ಲಕ್ಷ ರೈತರು ನೋಂದಣಿ ಮಾಡಿಕೊಳ್ಳಬೇಕಾಗಿದೆ. ಹೀಗಾಗಿ ಈ ನೋಂದಣಿಸಮಯವನ್ನು ವಿಸ್ತರಿಸಿ ಹೆಚ್ಚು ಮಂದಿ ನೋಂದಣಿಗೆ ಅವಕಾಶ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದರು.
ಎಸ್. ರವಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೇಂದ್ರ ಸರ್ಕಾರದ ನೀಡಿದ ಕಾಲಾವಕಾಶದ ಹಿನ್ನೆಲೆಯಲ್ಲಿ ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ಬೆಲೆ ಸ್ತೀರಿಕರಣ ಸಚಿವ ಸಂಪುಟ ಉಪಸಮಿತಿ ಕೊಬ್ಬರಿ ಬೆಳೆಯುವ ಜಿಲ್ಲೆಗಳಾದ ತುಮಕೂರು, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ, ಮಂಡ್ಯ, ಮೈಸೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ರೈತರಿಂದ ಕೊಬ್ಬರಿ ಖರೀದಿಗೆ ಮುಂದಾಗಿದೆ ಎಂದು ಹೇಳಿದರು
ಕೇಂದ್ರ ಸರ್ಕಾರದ ಖರೀದಿ ಸಂಸ್ಥೆಯಾದ ನಫೆಡ್ ಹಾಗೂ ರಾಜ್ಯ ಸರ್ಕಾರದ ಖ ರೀದಿ ಸಂಸ್ಥೆ ಕರ್ನಾಟಕ ಸಹಕಾರ ಮಾರಾಟ ಮಂಡಳಿ ಮೂಲಕ ೮ ಕೇಂದ್ರಗಳನ್ನು ತೆರೆದು ಖರೀದಿ ಪ್ರಕ್ರಿಯೆ ಆರಂಭಿಸಲಾಗಿದೆ ಎಂದರು.
ರಾಜ್ಯ ಸರ್ಕಾರಪ್ರತಿ ಕ್ವಿಂಟಾಲ್ ಕೊಬ್ಬರಿಗೆ ೧೨೫೦ ರೂ. ಪ್ರೋತ್ಸಾಹ ಧನ ನೀಡುತ್ತಿದೆ. ಇದು ಸೇರಿದಂತೆ ೨೦೨೩-೨೪ನೇ ಸಾಲಿನಲ್ಲಿ ಕೇಂದ್ರ ಸರ್ಕಾರ ಉಂಡೆ ಕೊಬ್ಬರಿ ಪ್ರತಿ ಕ್ವಿಂಟಾಲ್ ೧೧,೭೫೦ ರೂ. ಘೋಷಿಸಿದೆ. ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಕೊಬ್ಬರಿ ಧಾರಣೆಯು ಬೆಂಬಲ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಮಾರಾಟವಾದ ಹಿನ್ನೆಲೆಯಲ್ಲಿ ಸರ್ಕಾರ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಶಿಫಾರಸ್ಸಿನ ಮೇರೆಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಮತ್ತೊಮ್ಮೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಸದ್ಯ ವಿವಿಧ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ಕೊಬ್ಬರಿಗೆ ೭,೭೦೦ ರೂ.ಗಳಿಂದ ೮೦೨೦ ರೂ. ಧಾರಣೆಯಲ್ಲಿ ಮಾರಾಟವಾಗುತ್ತಿದೆ. ಹೆಚ್ಚಿನ ನೆರವು ನೀಡುವಂತೆ ಬಿಜೆಪಿ ಸದಸ್ಯರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಆದರೆ, ಸದನದಲ್ಲಿ ಅವರೇ ಹಾಜರಿಲ್ಲ ಎಂದರು.