ಕೊನೆ ಹಂತಕ್ಕೆ ಹಾಸನ ಟಿಕೆಟ್ ಗೊಂದಲ ಹೆಚ್‌ಡಿಕೆ, ರೇವಣ್ಣ ಸಂಧಾನ ಇಂದು

ಹಾಸನ,ಏ.೨-ಹಾಸನ ಟಿಕೆಟ್ ದಂಗಲ್ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ್ದು, ಇಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು, ಹೆಚ್.ಡಿ ಕುಮಾರಸ್ವಾಮಿ ಹಾಗೂ ಹೆಚ್.ಡಿ ರೇವಣ್ಣ ಅವರ ಜೊತೆ ಮಾತನಾಡಿ ಸಂಧಾನ ಮಾಡಲಿದ್ದಾರೆ.
ಸೋಮವಾರ ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗಲಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ದಂಪತಿ ಕೊನೆ ಕ್ಷಣದ ಕಸರತ್ತನ್ನು ನಡೆಸುತ್ತಿದ್ದಾರೆ. ಜೆಡಿಎಸ್ ವರಿಷ್ಠ ದೇವೇಗೌಡರನ್ನು ಭೇಟಿಯಾಗಿ ಅವರ ಮನವೊಲಿಸುವ ಸಲುವಾಗಿ ರೇವಣ್ಣ ಹಾಗೂ ಅವರ ಪತ್ನಿ ಭವಾನಿ ರೇವಣ್ಣ ಇಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ಈ ಮೂಲಕ ಕಟ್ಟ ಕಡೆಯ ಪ್ರಯತ್ನಕ್ಕೆ ರೇವಣ್ಣ ದಂಪತಿ ಮುಂದಾಗಿದ್ದಾರೆ.
ಸೋಮವಾರ ಎರಡನೇ ಪಟ್ಟಿ ಬಿಡುಗಡೆ ಎಂದು ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ದೇವೇಗೌಡರು ಹೆಚ್‌ಡಿಕೆ ಹಾಗೂ ರೇವಣ್ಣ ಅವರೊಂದಿಗೆ ಮಾತುಕತೆ ನಡೆಸಿ ಸಂಧಾನ ಮಾಡುವ ಸಾಧ್ಯತೆಯಿದೆ. ಇಬ್ಬರೂ ಒಮ್ಮತಕ್ಕೆ ಬಂದಲ್ಲಿ ನಾಳೆ ಹಾಸನ ಟಿಕೆಟ್ ಘೋಷಣೆಯಾಗುವ ಸಾಧ್ಯತೆಯಿದೆ. ರೇವಣ್ಣ ತಮ್ಮ ಪತ್ನಿ ಭವಾನಿಗೆ ಟಿಕೆಟ್ ಕೊಡಿಸುವ ಪ್ರಯತ್ನ ನಡೆಸುತ್ತಿದ್ದರೆ ಇತ್ತ ಕುಮಾರಸ್ವಾಮಿ ಹೆಚ್‌ಪಿ ಸ್ವರೂಪ್ ಬೆನ್ನಿಗೆ ನಿಂತಿದ್ದಾರೆ.