ಕೊನೆ ಎಸೆತದಲ್ಲಿ ಜಡೇಜಾ ಕಮಾಲ್ ಸಿಎಸ್‌ಕೆಗೆ ಐಪಿಎಲ್ ಕಿರೀಟ

ಅಹಮದಾಬಾದ್, ಮೇ ೩೦- ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಸ್ಪರ್ಧಾತ್ಮಕ ಟೂರ್ನಿ ಎಂದೇ ಕ್ರಿಕೆಟ್ ಪಂಡಿತರಿಂದ ಪ್ರಶಂಸೆಗೆ ಒಳಗಾದ ಪ್ರಸಕ್ತ ವರ್ಷದ ಆವೃತ್ತಿಗೆ, ಅದೇ ರೀತಿಯ ರೋಮಾಂಚಕ ಅಂತ್ಯಬಿದ್ದಿದೆ. ಅಗ್ರಕ್ರಮಾಂಕದ ದಾಂಡಿಗರ ಹೋರಾಟದ ಜೊತೆಗೆ ಅಂತಿಮ ಓವರ್‌ನ ಮಾಡು ಇಲ್ಲವೇ ಮಡಿ ಹಂತದಲ್ಲಿ ರವೀಂದ್ರ ಜಡೇಜಾ ಪ್ರದರ್ಶಿಸಿದ ಕೆಚ್ಚೆದೆಯ ಬ್ಯಾಟಿಂಗ್ ನೆರವಿನಿಂದ ಇಲ್ಲಿನ ಮೊಟೇರಾದ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಗುಜರಾತ್ ಜಾಯಂಟ್ಸ್ ವಿರುದ್ಧ ರೋಚಕ ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಡಕ್‌ವರ್ಥ್-ಲೂಹಿಸ್ ನಿಯಮದನ್ವಯ ಐದು ವಿಕೆಟ್‌ಗಳ ಜಯ ಸಾಧಿಸಿ, ದಾಖಲೆಯ ಸಮಬಲದ ಐದನೇ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಅತ್ತ ಗುಜರಾತ್ ಪರ ಚೆನ್ನೈ ಮೂಲದ ಸಾಯಿ ಸುದರ್ಶನ್ ಪ್ರದರ್ಶಿಸಿದ ಅಬ್ಬರದ ೯೬ ರನ್‌ಗಳ ಆಟ ವ್ಯರ್ಥವಾಯಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಗುಜರಾತ್ ನಿಗದಿತ ೨೦ ಓವರ್‌ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೨೧೪ ರನ್‌ಗಳ ಭರ್ಜರಿ ಮೊತ್ತವನ್ನೇ ಪೇರಿಸಿತು. ಇನ್ನು ಗುರಿ ಬೆನ್ನತ್ತಿದ ಚೆನ್ನೈ ಇನ್ನಿಂಗ್ಸ್ ಆರಂಭದಲ್ಲೇ ವರುಣನ ಕಾಟ ಆರಂಭಗೊಂಡಿತು. ಬಹಳ ಸಮಯದ ಬಳಿಕ ಪಂದ್ಯ ಆರಂಭಗೊಂಡಾಗ ಡಕ್‌ವರ್ಥ್-ಲೂಯಿಸ್ ನಿಯಮದನ್ವಯ ೧೫ ಓವರ್‌ಗಳಲ್ಲಿ ೧೭೧ ರನ್‌ಗಳ ಗುರಿಯನ್ನು ನಿಗದಿಪಡಿಸಲಾಯಿತು. ಇನ್ನು ಗುರಿ ಬೆನ್ನತ್ತಿದ ಚೆನ್ನೈಗೆ ಗಾಯಕ್ವಾಡ್ ಹಾಗೂ ಕಾನ್ವೆ ಅಮೋಘ ಆರಂಭವನ್ನೇ ನೀಡಿದರು. ಬೌಂಡರಿ ಸಿಕ್ಸರ್‌ಗಳ ಮೂಲಕ ಈ ಜೋಡಿ ಗುಜರಾತ್ ಬೌಲರ್ಸ್‌ಗಳ ಬೆವರಿಳಿಸಿದರು. ಈ ಹಂತದಲ್ಲಿ ೨೬ ರನ್ ಗಳಿಸಿದ್ದ ಗಾಯಕ್ವಾಡ್ ನಿರ್ಗಮಿಸಿದರೆ ಅರ್ಧಶತಕಕ್ಕೆ ಮೂರು ರನ್ ಬಾಕಿ ಉಳಿದಿದ್ದಾಗ ಕಾನ್ವೆ ಕೂಡ ಔಟಾದರು. ಈ ಎರಡೂ ವಿಕೆಟ್‌ಗಳನ್ನು ಗುಜರಾತ್‌ನ ನೂರ್ ಅಹ್ಮದ್ ಪಡೆದುಕೊಂಡರು. ಮಧ್ಯಮ ಕ್ರಮಾಂಕದಲ್ಲಿ ಅಜಿಂಕ್ಯಾ ರಹಾನೆ ಕೇವಲ ೧೩ ಎಸೆತಗಳಲ್ಲಿ ತಲಾ ಎರಡು ಬೌಂಡರಿ ಹಾಗೂ ಸಿಕ್ಸರ್‌ಗಳ ನೆರವಿನಿಂದ ೨೭ ರನ್ ಗಳಿಸಿದ್ದು, ಚೆನ್ನೈಗೆ ದೊಡ್ಡ ಮುನ್ನಡೆ ಒದಗಿಸಿತು. ಜೊತೆಗೆ ಶಿವಂ ದೂಬೆ (ಅಜೇಯ ೩೨) ಕೂಡ ತನ್ನ ಹೋರಾಟ ಮುಂದುವರೆಸಿದ್ದರು. ರಹಾನೆ ನಿರ್ಗಮನ ಬಳಿಕ ಆಗಮಿಸಿದ, ತನ್ನ ಅಂತಿಮ ಐಪಿಎಲ್ ಪಂದ್ಯವಾಡುತ್ತಿರುವ ಅಂಬಾಟಿ ರಾಯುಡು ಕೇವಲ ೮ ಎಸೆತಗಳಲ್ಲಿ ೧೯ ರನ್ ಗಳಿಸಿ ನಿರ್ಗಮಿಸಿದರೆ ಧೋನಿ ಮೊದಲ ಎಸೆತದಲ್ಲೇ ಔಟಾದಾಗ ಇಡೀ ಮೈದಾನದಲ್ಲೇ ಬಹುತೇಕ ಮೌನದ ವಾತಾವರಣ ನಿರ್ಮಾಣವಾಯಿತು. ಇನ್ನು ಅಂತಿಮ ಓವರ್‌ನಲ್ಲಿ ಗೆಲುವಿಗೆ ೧೩ ರನ್ ಬೇಕಿದ್ದ ವೇಳೆ ಕ್ರೀಸ್‌ನಲ್ಲಿದ್ದ ಜಡೇಜಾ (೧೫), ಅಂತಿಮ ಎರಡು ಎಸೆತಗಳಲ್ಲಿ ಸಿಕ್ಸರ್ ಹಾಗೂ ಬೌಂಡರಿ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಗುಜರಾತ್ ಪರ ಮೋಹಿತ್ ಶರ್ಮಾ ಮೂರು ವಿಕೆಟ್ ಪಡೆದರು.
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ್ದ ಗುಜರಾತ್‌ಗೆ ಗಿಲ್ ಹಾಗೂ ಸಹಾ ಉತ್ತಮ ಆರಂಭವನ್ನೇ ನೀಡಿದ್ದರು. ಈ ಜೋಡಿ ಮೊದಲ ವಿಕೆಟ್‌ಗೆ ೬೭ ರನ್‌ಗಳ ಜೊತೆಯಾಟ ನಡೆಸಿದ್ದರು. ಈ ವೇಳೆ ೩೯ ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಗಿಲ್, ಧೋನಿಯ ಚಾಕಚಕ್ಯತೆಯ ಸ್ಟಂಪಿಂಗ್‌ಗೆ ಔಟಾಗಿ ನಿರ್ಗಮಿಸಿದರು. ಅರ್ಧಶತಕ ದಾಖಲಿಸಿದ್ದ ಸಹಾ (೫೪) ಕೂಡ ಬಳಿಕ ಹೆಚ್ಚು ಹೊತ್ತು ನಿಲ್ಲಲಿಲ್ಲ. ಬಳಿಕ ಆರಂಭವಾದದ್ದೇ ಸಾಯಿ ಸುದರ್ಶನ್ ಎಂಬ ಚೆನ್ನೈ ಮೂಲದ ಆಟಗಾರನ ಮೋಡಿ. ಕೇವಲ ೨೧ರ ಹರೆಯದ ಸಾಯಿ ಆರಂಭದಲ್ಲೇ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದರೆ ಬಳಿಕ ಅಬ್ಬರದ ಆಟಕ್ಕೆ ಮೊರೆಹೋದರು. ಎದುರು ಯಾವ ಬೌಲರ್ ಎಂಬುದನ್ನು ನೋಡದೆ ಹೊಡಿ-ಬಡಿ ಆಟದ ಮೂಲಕ ಚೆನ್ನೈ ಪಾಳಯಕ್ಕೆ ಭಯ ಮೂಡಿಸಿದರು. ಅಂತಿಮವಾಗಿ ಸಾಯಿ ಸುದರ್ಶನ್ ೪೭ ಎಸೆತಗಳಲ್ಲಿ ೮ ಬೌಂಡರಿ ಹಾಗೂ ಆರು ಸಿಕ್ಸರ್ ನೆರವಿನಿಂದ ೯೬ ರನ್ ಗಳಿಸಿದ್ದ ವೇಳೆ ಪತಿರಾಣಾಗೆ ವಿಕೆಟ್ ಒಪ್ಪಿಸುವ ಮೂಲಕ ಅರ್ಹ ಶತಕದಿಂದ ವಂಚಿತರಾದರು. ಅತ್ತ ನಾಯಕ ಹಾರ್ದಿಕ್ ಅಜೇಯ ೨೧ ರನ್ ಗಳಿಸಿದರು. ಚೆನ್ನೈ ಪರ ಪತಿರಾನಾ ಎರಡು ವಿಕೆಟ್ ಪಡೆದರು.

ರೋಮಾಂಚಕ ಅಂತಿಮ ಓವರ್!
ಒಂದು ಹಂತದಲ್ಲಿ ಮೋಹಿತ್ ಎಸೆದ ೧೩ನೇ ಓವರ್‌ನಲ್ಲಿ ಅಂಬಟಿ ರಾಯುಡು ಬೌಂಡರಿ-ಸಿಕ್ಸರ್ ಸಿಡಿಸುತ್ತಿದ್ದಾಗ ಚೆನ್ನೈ ಗೆಲುವು ಸುಲಭ ಎಂಬಂತಿತ್ತು. ಆದರೆ ಬಳಿಕ ಅದೇ ಓವರ್‌ನಲ್ಲಿ ಕ್ರಮಾವಾಗಿ ಅಂಬಟಿ ಹಾಗೂ ಧೋನಿ ನಿರ್ಗಮಿಸಿದ್ದು, ಚೆನ್ನೈಗೆ ಆಘಾತ ಮೂಡಿಸಿತು. ಅದರಲ್ಲೂ ಮೋಹಿತ್ ಅವರ ೧೫ನೇ ಹಾಗೂ ಅಂತಿಮ ಓವರ್‌ನಲ್ಲಿ ಚೆನ್ನೈ ಗೆಲುವಿಗೆ ೧೩ ರನ್ ಬೇಕಿದ್ದಾಗ ಮೊದಲ ನಾಲ್ಕು ಎಸೆತಗಳಲ್ಲಿ ಬಂದಿದ್ದು, ಕೇವಲ ಮೂರು ರನ್. ಇನ್ನು ಅಂತಿಮ ಎರಡು ಎಸೆತಗಳಲ್ಲಿ ೧೦ ರನ್ ಬೇಕಿದ್ದಾಗ ಜಡೇಜಾ (೧೫) ಸಿಕ್ಸರ್ ಹಾಗೂ ಬೌಂಡರಿ ಸಿಡಿಸುವ ಮೂಲಕ ಚೆನ್ನೈಗೆ ಅಮೋಘ ಗೆಲುವು ತಂದುಕೊಟ್ಟರು.

ಮುಂದಿನ ಆವೃತ್ತಿಗೂ ಧೋನಿ
ಪ್ರಸಕ್ತ ಐಪಿಎಲ್ ಋತು ಧೋನಿ ಪಾಲಿನ ಕೊನೆಯ ಆವೃತ್ತಿ ಎಂದೇ ಬಣ್ಣಿಸಲಾಗಿತ್ತು. ಆದರೆ ಇದೀಗ ಸ್ವತಹ ಧೋನಿಯೇ ಇದಕ್ಕೆ ಸ್ಪಷ್ಟನೆ ನೀಡಿದ್ದು, ಒಂದು ವೇಳೆ ಉತ್ತಮ ಫಿಟ್ನೆಸ್ ಕಾಯ್ದುಕೊಂಡರೆ ಮುಂದಿನ ಋತುವಿನಲ್ಲೂ ಆಡುತ್ತೇನೆ ಎಂದು ತಿಳಿಸುವ ಮೂಲಕ ಅಭಿಮಾನಿಗಳಿಗೆ ಸಂತಸ ಮೂಡಿಸಿದ್ದಾರೆ. ಸಂದರ್ಭಗನುಸಾರವಾದರೆ ಇದು ನಿವೃತ್ತಿ ತೆಗೆದುಕೊಳ್ಳುವ ಉತ್ತಮ ಸಮಯ. ಆದರೆ ದೇಶದ ಉದ್ದಕ್ಕೂ ನನಗೆ ಅಭಿಮಾನಿಗಳು ನೀಡಿದ ಪ್ರೀತಿ ಹಾಗೂ ವಾತ್ಸಲ್ಯಕ್ಕೆ ನಾನು ಚಿರುಋಣಿ. ಹಾಗಾಗಿ ಅಭಿಮಾನಿಗಳಿಗೋಸ್ಕರವಾದರೂ ಕಡಿಮೆ ಪಕ್ಷ ಮತ್ತೊಂದು ಬಾರಿಯಾದರೂ ಐಪಿಎಲ್‌ನಲ್ಲಿ ಆಡಬೇಕಿದೆ. ಮುಂದಿನ ೯ ತಿಂಗಳು ಕಠಿಣ ಅಭ್ಯಾಸದಲ್ಲಿ ತೊಡಗಿ, ಟೂರ್ನಿಯ ವಾಪಸ್ಸಾಗುವುದು ಕಠಿಣ ಕೆಲಸ. ದೇಹದ ಪರಿಸ್ಥಿತಿ ಒಗ್ಗಿಕೊಂಡರೆ ಖಂಡಿತವಾಗಿಯೂ ಮುಂದಿನ ಐಪಿಎಲ್‌ನಲ್ಲಿ ಆಡುತ್ತೇನೆ. ಇದು ನಾನು ಅಭಿಮಾನಿಗಳಿಗೆ ನೀಡುವ ಉಡುಗೊರೆ ಎಂದು ಧೋನಿ ತಿಳಿಸಿದರು.

ಭರ್ಜರಿ ಪ್ರಶಸ್ತಿ ಮೊತ್ತ
ಇನ್ನು ಮುಂಬೈ ರೀತಿ ದಾಖಲೆಯ ಐದನೇ ಬಾರಿ ಪ್ರಶಸ್ತಿ ಗೆದ್ದುಕೊಂಡಿರುವ ಚೆನ್ನೈ ೨೦ ಕೋಟಿ ರೂ.ಗಳ ಪ್ರಶಸ್ತಿ ಮೊತ್ತ ಜೀಬಿಗಿಳಿಸಿದರೆ ರನ್ನರ್‌ಅಪ್ ಗುಜರಾತ್ ೧೩ ಕೋಟಿ ರೂ. ಪಡೆದುಕೊಂಡಿದೆ. ಇನ್ನು ಟೂರ್ನಿಯಲ್ಲಿ ಮೂರನೇ ಸ್ಥಾನ ಪಡೆದ ಮುಂಬೈ ೭ ಕೋಟಿ ರೂ. ಹಾಗೂ ನಾಲ್ಕನೇ ಸ್ಥಾನ ಪಡೆದ ಲಖನೌ ಸೂಪರ್ ಜಾಯಂಟ್ಸ್ ೬.೫ ಕೋಟಿ ರೂ. ಮೊತ್ತ ಪಡೆದಿದೆ. ಟೂರ್ನಿಯಲ್ಲಿ ೮೯೦ ರನ್ ಗಳಿಸಿದ ಶುಭ್ಮನ್ ಗಿಲ್ ಅರ್ಹರಾಗಿಯೇ ಆರೆಂಜ್ ಕ್ಯಾಪ್ ಪಡೆದುಕೊಂಡರೆ ೨೮ ವಿಕೆಟ್ ಪಡೆದ ಮುಹಮ್ಮದ್ ಶಮಿ ಪರ್ಪಲ್ ಕ್ಯಾಪ್ ಗಿಟ್ಟಿಸಿಕೊಂಡರು.