
ಕಲಬುರಗಿ,ಮಾ 23: ತಾವು ಬಿಜೆಪಿ ಬಿಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ್ ಸ್ಪಷ್ಟಪಡಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು,
ಬಾಬುರಾವ್ ಚಿಂಚನ್ಸೂರ್ ಬಿಜೆಪಿ ತೊರೆದ ರೀತಿ ಸರಿಯಿಲ್ಲ. ಇದರಿಂದಾಗಿ ಚಿಂಚನ್ಸೂರ್ ರಾಜಕೀಯ ಭವಿಷ್ಯ ಪತನ ಆದಂತಾಗಿದೆ ಎಂದು ವ್ಯಾಖ್ಯಾನಿಸಿದರು.
ನಾನು ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಸೇರ್ಪಡೆ ಆಗುವುದಾಗಿ ಕೆಲವರು ವದಂತಿ ಹಬ್ಬಿಸಿದ್ದಾರೆ. ಕಾಂಗ್ರೆಸ್ ಸೇರ್ಪಡೆ ಆಗುವುದಾಗಿ ಉದ್ದೇಶಪೂರ್ವಕವಾಗಿಯೇ ಹೀಗೆ ಕೆಲವರು ವದಂತಿ ಹಬ್ಬಿಸುತ್ತಿದ್ದಾರೆ. ಕಾಂಗ್ರೆಸ್ ಸೇರ್ಪಡೆ ಆಗುವಂತಹ ಪರಿಸ್ಥಿತಿ ತಮಗೆ ಬಂದಿಲ್ಲ ಎಂದರು.
ಅಫಜಲಪುರ ಕ್ಷೇತ್ರದಲ್ಲಿ ಬಿಜೆಪಿ ಅತ್ಯಂತ ಬಲಿಷ್ಠವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶ ಸದೃಢ ಸ್ಥಿತಿಯಲ್ಲಿದೆ. ಹಾಗಾಗಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ತವರು ಜಿಲ್ಲೆಯ ಎಲ್ಲ ಒಂಬತ್ತು ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲಿಸುವುದು ತಮ್ಮ ಮುಂದಿರುವ ಏಕೈಕ ಗುರಿ ಎಂದರು.
ಕೊನೆಯ ಉಸಿರು ಇರುವವರೆಗೂ ಬಿಜೆಪಿಯಲ್ಲೇ ಇರುವುದಾಗಿ ಒತ್ತಿ ಹೇಳಿದ ಅವರು, ಬೇರೆ ಪಕ್ಷದವರು ಮುಖ್ಯಮಂತ್ರಿ ಮಾಡುವ ಆಮಿಷ ಒಡ್ಡಿದರೂ ತಾವು ಬಿಜೆಪಿ ತೊರೆಯುವುದಿಲ್ಲ ಎಂದು ಭರವಸೆ ನೀಡಿದರು.
ದೇಶದಲ್ಲಿ ಭ್ರಷ್ಟಾಚಾರ ಹುಟ್ಟಿದ್ದೇ ಕಾಂಗ್ರೆಸ್ ಅವಧಿಯಲ್ಲಿ ಎಂಬುದನ್ನು ಮರೆಮಾಚಲು ಬಿಜೆಪಿ ಮೇಲೆ ಗೂಬೆ ಕೂರಿಸಲಾಗುತ್ತಿದೆ. ಹಾಗೆ ನೋಡಿದರೆ ಅರ್ಕಾವತಿ ಬಡಾವಣೆಯ ಹಗರಣದ ಸೂಕ್ತ ತನಿಖೆಯಾದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಜೇಲು ಪಾಲಾಗುತ್ತಾರೆ ಎಂದು ನುಡಿದರು.
ಅಫಜಲಪುರ ಕ್ಷೇತ್ರದಲ್ಲಿ ನಿತಿನ್ ಗುತ್ತೇದಾರ್ ಚುನಾವಣೆಗೆ ನಿಲ್ಲುವುದು ಬಿಡುವುದು ಅವರಿಗೆ ಬಿಟ್ಟಿದ್ದು. ಒಂದುವೇಳೆ ತಮಗೆ ಟಿಕೆಟ್ ಸಿಗದೆ ಅವರಿಗೆ ಸಿಕ್ಕರೂ ಅವರ ಪರವಾಗಿ ಕೆಲಸ ಮಾಡುವುದಾಗಿ ಸ್ಪಷ್ಟಪಡಿಸಿದರು.
ಜಿಲ್ಲಾ ಪಂಚಾಯತಿ ಮಾಜಿ ಸದಸ್ಯೆ ಶೋಭಾ ಬಾಣಿ, ಶಿವಕಾಂತ ಮಹಾಜನ್, ವಿಜಯಕುಮಾರ್ ಹಲಕರ್ಟಿ ಇದ್ದರು.
ನಿತಿನ್ ಒಬ್ಬ ಚೈಲ್ಡಿಶ್
ನಿತಿನ್ ಗುತ್ತೇದಾರ್ ಒಬ್ಬ ಚೈಲ್ಡಿಶ್ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ್ ಟೀಕಿಸಿದರು.
ಆತ ತಾನೊಬ್ಬ ಚೈಲ್ಡಿಶ್ ಎಂಬುದನ್ನು ಮರೆತು ತಮಗೆ ನಾಲಿಗೆ ಮತ್ತು ತಲೆಗೆ ಕನೆಕ್ಷನ್ ಇಲ್ಲ ಎನ್ನುತ್ತಿರುವುದು ಬೇಸರ ಮೂಡಿಸಿದೆ ಎಂದರು.