ಕೊನೆಯ ಅವಕಾಶವನ್ನು ಹಾಳು ಮಾಡಿಕೊಳ್ಳಬೇಡಿ

ವಿಜಯಪುರ, ಏ. ೨೭-ದೊರೆತ ಅವಕಾಶವನ್ನು ಹಾಳು ಮಾಡಿಕೊಂಡ ಕಾರಣ ವಿಜಯಪುರ ಪುರಸಭೆ ಕಳೆದ ೮ ವರ್ಷಗಳಿಂದ ಯಾವುದೇ ಅಭಿವೃದ್ದಿ ಕಾಣದೇ, ಪ್ರಜಾಪ್ರತಿನಿಧಿಗಳ ಆಡಳಿತ ಇಲ್ಲದೇ, ನರಳುವಂತಹ ಪರಿಸ್ಥಿತಿಯನ್ನು ಕಾಂಗ್ರೆಸ್ ಪಕ್ಷದ ಸದಸ್ಯರುಗಳು ನಿರ್ಮಾಣ ಮಾಡಿದ್ದರು. ಆದರೆ ಜನತೆ ಮತ್ತದೇ ತಪ್ಪು ಮಾಡದೇ, ದೊರೆತಿರುವ ಕೊನೆಯ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು, ಜೆ.ಡಿ.ಎಸ್ ಪಕ್ಷದ ಅಭ್ಯರ್ಥಿಗಳನ್ನು ಹೆಚ್ಚಾಗಿ ಗೆಲ್ಲಿಸುವ ಮೂಲಕ ಪುರಸಭೆಯಲ್ಲಿ ಜೆ.ಡಿ.ಎಸ್ ಆಡಳಿತ ಪುನಃಸ್ಥಾಪಿಸಿ, ಪ್ರಜಾಪ್ರಭುತ್ವವನ್ನು ಪುರಸಭೆಯಲ್ಲಿ ಮತ್ತೆ ಸ್ಥಾಪನೆಗೊಳ್ಳುವಂತೆ ಮಾಡಬೇಕೆಂದು, ಶಾಸಕ ನಿಸರ್ಗ ನಾರಾಯಣಸ್ವಾಮಿ ತಿಳಿಸಿದರು. ಅವರು ಇಲ್ಲಿನ ಬಸವೇಶ್ವರ ನಗರದಲ್ಲಿ ವರದಿಗಾರರೊಂದಿಗೆ ಮಾತನಾಡಿ, ಉತ್ತಮ ಅವಕಾಶವನ್ನು ಒಮ್ಮೆ ಹಾಳುಮಾಡಿಕೊಂಡರೆ ಮತ್ತೆ ಅಂತಹ ಸುಸಂದರ್ಭ ಬರುವುದು ಯಾವಾಗಲೋ ಗೊತ್ತಾಗುವುದಿಲ್ಲ. ಹಿಂದಿನ ಪುರಸಭೆ ಆಡಳಿತದಲ್ಲಿ ಅತಿ ಹೆಚ್ಚಿನ ೨೦ ಮಂದಿ ಕಾಂಗ್ರೆಸ್ ಸದಸ್ಯರಿದ್ದು, ಅಧಿಕಾರಕ್ಕಾಗಿ ಕಿತ್ತಾಡಿಕೊಂಡು, ಪುರಸಭೆಯ ಆಡಳಿತವನ್ನು ನ್ಯಾಯಾಲಯಕ್ಕೆ ಕೊಂಡೊಯ್ದು, ಕೇವಲ ಆಡಳಿತಾಧಿಕಾರಿಗಳ ಆಡಳಿತದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಎದುರಿಸುತ್ತಾ, ನರಳಿದುದನ್ನು ಯಾರು ಮರೆಯಬಾರದೆಂದು ದೊರೆತ ಕೊನೆಯ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು, ಕಾಂಗ್ರೆಸ್ ಪಕ್ಷಕ್ಕೆ ಉತ್ತರ ನೀಡಬೇಕೆಂದು, ತಿಳಿಸಿದರು.