ಕೊನೆಯುಸಿರಿನವರೆಗೂ ಜನಸೇವೆ:ಬಿಎಸ್‌ವೈ

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಇದು ಕೊನೆಯ ಅಧಿವೇಶನವಾಗಿದ್ದು, ಈ ಸಂದರ್ಭದಲ್ಲಿ ಸಚಿವ ಮುನಿರತ್ನ ಹಾಗೂ ಸರ್ಕಾರಿ ಮುಖ್ಯ ಸಚೇತಕ, ಶಾಸಕ ಎಂ. ಸತೀಶ್ ರೆಡ್ಡಿರವರು ಸಮಾಲೋಚನೆ ನಡೆಸುತ್ತಿರುವುದು.

ಬೆಂಗಳೂರು, ಫೆ. ೨೪- ಈ ತಿಂಗಳ ೨೭ಕ್ಕೆ ನನಗೆ ೮೦ ವರ್ಷ ತುಂಬುತ್ತದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾನು ನಿಲ್ಲಲ್ಲ. ಆದರೆ ನನ್ನ ಕೊನೆಯ ಉಸಿರಿರುವವರೆಗೂ ಜನ ಸೇವೆ ಮಾಡುತ್ತೇನೆ. ಬಿಜೆಪಿ ಪಕ್ಷವನ್ನು ಬಲಪಡಿಸಿ ಮತ್ತೆ ಅಧಿಕಾರಕ್ಕೆ ತರುವುದು ನನ್ನ ಗುರಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಧಾನಸಭೆಯಲ್ಲಿಂದು ಹೇಳಿದರು.
೧೫ನೇ ವಿಧಾನಸಭೆಯ ಕೊನೆಯ ಅಧಿವೇಶನದ ಕೊನೆಯ ದಿನವಾದ ಇಂದು ವಿದಾಯ ಭಾಷಣ ಮಾಡಿದ ಅವರು, ಬಿಜೆಪಿ ನನಗೆ ಎಲ್ಲವನ್ನು ಕೊಟ್ಟಿದೆ. ಶಿಕಾರಿಪುರದ ಪುರಸಭಾ ಸದಸ್ಯನಾಗಿ ಮುಖ್ಯಮಂತ್ರಿ ಹುದ್ದೆವರೆಗೂ ಬಂದಿದ್ದೇನೆ ಎಂದು ತಮ್ಮ ಹೋರಾಟದ ದಿನಗಳನ್ನು ನೆನಪು ಮಾಡಿಕೊಂಡ ಯಡಿಯೂರಪ್ಪನವರು ಶಿಕಾರಿಪುರದ ಜನರಿಗೆ ನಾನು ಚಿರಋಣಿ. ಅವರ ಆಶೀರ್ವಾದದಿಂದಲೇ ನನಗೆ ಎಲ್ಲವೂ ಸಿಕ್ಕಿದೆ. ಜನರ ಋಣ ತೀರಿಸುವ ಕೆಲಸ ಮುಂದುವರೆಸುತ್ತೇನೆ ಎಂದರು.
ರಾಜ್ಯದಲ್ಲಿ ಸರಿಯಾದ ರಸ್ತೆಗಳು ಇಲ್ಲದಿದ್ದ ಕಾಲದಲ್ಲಿ ಅಟಲ್ ಬಿಹಾರಿ ವಾಜಪೇಯಿ, ಅಡ್ವಾಣಿ, ಮುರುಳಿ ಮನೋಹರ ಜೋಷಿಯವರಂತಹ ಹಿರಿಯರ ಜತೆ ಸೇರಿ ಪಕ್ಷ ಕಟ್ಟಿದ್ದೇನೆ. ಆಗ ಪಕ್ಷದಲ್ಲಿ ಯಾರೂ ಇರಲಿಲ್ಲ ಎಂದು ಕಡುಕಷ್ಟದಲ್ಲಿ ಪಕ್ಷ ಕಟ್ಟಿದ್ದನ್ನು ಯಡಿಯೂರಪ್ಪ ನೆನಪು ಮಾಡಿಕೊಂಡರು.
ವಿಧಾನಸಭೆಗೆ ಬಿಜೆಪಿಯಿಂದ ಇಬ್ಬರು ಸದಸ್ಯರು ಆಯ್ಕೆಯಾಗಿ ರೈತರ ಪರವಾಗಿ ಹೋರಾಟ ಮಾಡಿದ ಕ್ಷಣಗಳು, ಬಗರ್ ಹುಕುಂ ಸಾಗುವಳಿದಾರರಿಗೆ ನ್ಯಾಯ ಕೊಡಿಸಲು ಮಾಡಿದ ಹೋರಾಟ ಎಲ್ಲವನ್ನೂ ಯಡಿಯೂರಪ್ಪ ನೆನಪು ಮಾಡಿಕೊಂಡರು.
ಬಿಜೆಪಿ ನನಗೆ ಸಾಕಷ್ಟು ಅವಕಾಶ ಕೊಟ್ಟಿದೆ. ಪ್ರಧಾನಿ ನರೇಂದ್ರ ಮೋದಿಯವರು ನನಗೆ ೮೦ ವರ್ಷ ತುಂಬುವ ಫೆ. ೨೭ ರಂದು ಶಿವಮೊಗ್ಗಕ್ಕೆ ಬಂದು ವಿಮಾನ ನಿಲ್ದಾಣ ಉದ್ಘಾಟನೆ ಮಾಡುವುದಾಗಿ ಹೇಳಿದ್ದಾರೆ. ಇದು ನನಗೆ ಅತ್ಯಂತ ಸಮಾಧಾನ, ತೃಪ್ತಿ ತಂದಿದೆ ಎಂದರು.
ನಾನು ಇಷ್ಟು ಎತ್ತರಕ್ಕೆ ಬೆಳೆಯಲು ಕಾರಣ ಆರ್‌ಎಸ್‌ಎಸ್. ಆರ್‌ಎಸ್‌ಎಸ್ ತರಬೇತಿ, ಅವಕಾಶಗಳಿಂದಲೇ ನನಗೆ ಇಷ್ಟೆಲ್ಲಾ ಸ್ಥಾನಮಾನಗಳು ಸಿಕ್ಕಿವೆ. ಇದನ್ನು ನಾನು ಮರೆಯಲು ಸಾಧ್ಯವಿಲ್ಲ ಎಂದು ಅವರು ತಮ್ಮ ಬದುಕಿನಲ್ಲಿ ಆರ್‌ಎಸ್‌ಎಸ್ ಪ್ರಮುಖ ಪಾತ್ರ ವಹಿಸಿದ್ದನ್ನು ಸದನದಲ್ಲಿ ಹೇಳಿದರು.
ರಾಜಕಾರಣದಲ್ಲಿ ದೇವೇಗೌಡರು ನಮಗೆ ಆದರ್ಶ. ಅವರು ಈ ವಯಸ್ಸಿನಲ್ಲೂ ಮಾರ್ಗದರ್ಶನ ಮಾಡುತ್ತಿರುವುದು ನಿಜಕ್ಕೂ ದೊಡ್ಡದು. ಮಾಜಿ ಪ್ರಧಾನಿ ದೇವೇಗೌಡರಿಂದ ನಾವೆಲ್ಲ ಕಲಿಯುವುದು ಬಹಳಷ್ಟಿದೆ ಎಂದು ದೇವೇಗೌಡರ ಗುಣಗಾನ ಮಾಡಿದರು.
ವಿಧಾನಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ಮುಂದೆ ಮಂತ್ರಿ ಮಾಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವಿನಂತಿಸಿದ ಯಡಿಯೂರಪ್ಪನವರು, ಬದುಕಿನ ಕೊನೆ ಉಸಿರು ಇರುವವರೆಗೂ ಸೇವೆ ಮಾಡುತ್ತೇನೆ. ರಾಜ್ಯದ ಉದ್ದಗಲಕ್ಕೂ ಓಡಾಡಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುತ್ತೇನೆ ಎಂದು ಹೇಳಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಕಾರ್ಯವನ್ನು ಶ್ಲಾಘಿಸಿ, ಪರಿಶಿಷ್ಟ ಜಾತಿ, ಪಂಗಡದವರ ಅಭಿವೃದ್ಧಿಗೆ ನಮ್ಮ ಸರ್ಕಾರ ಒಳ್ಳೆಯ ಕೆಲಸ ಮಾಡಿದೆ. ಮೀಸಲಾತಿಯನ್ನು ಹೆಚ್ಚಿಸಿದೆ ಎಂದು ಹೇಳಿ, ಇದರ ಫಲ ನಮಗೆ ಸಿಗಲಿದೆ ಎಂದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರ ಸಹಕಾರ ಹಾಗೂ ಸದಸ್ಯರೆಲ್ಲರ ಸಹಕಾರವನ್ನು ನೆನೆದು ಎಲ್ಲರಿಗೂ ಧನ್ಯವಾದ ಹೇಳಿದ ಯಡಿಯೂರಪ್ಪನವರು, ಎಲ್ಲರಿಗೂ ಭಗವಂತ ಒಳ್ಳೆಯದು ಮಾಡಲಿ. ನೀವೆಲ್ಲಾ ಮತ್ತೆ ವಿಧಾನಸಭೆಗೆ ಆಯ್ಕೆಯಾಗಿ ಬನ್ನಿ ಎಂದು ಹೇಳಿ ತಮ್ಮ ಮಾತು ಮುಗಿಸಿದರು.
ಸದನಕ್ಕೆ ಹೆಚ್ಚಿನ ಮಹಿಳೆಯರು ಬರಬೇಕಾದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಚುನಾವಣೆಯಲ್ಲಿ ಮಹಿಳೆಯರನ್ನು ಆಯ್ಕೆ ಮಾಡಲು ಎಲ್ಲರೂ ಸಹಕಾರಿಸಬೇಕು ಎಂದು ಮನವಿ ಮಾಡಿದರು.
ಪುಷ್ಪ ನಮನ
ವಿಧಾನಸಭೆಯಲ್ಲಿ ವಿದಾಯ ಭಾಷಣ ಮಾಡಿದ ನಂತರ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಹಲವು ಶಾಸಕರ ಜತೆಗೂಡಿ ವಿಧಾನಸೌಧದ ಆವರಣದಲ್ಲಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್, ಮಹಾತ್ಮಗಾಂಧಿ ಪುತ್ಥಳಿಗಳಿಗೆ ಪುಷ್ಪನಮನ ಸಲ್ಲಿಸಿ, ಚುನಾವಣಾ ರಾಜಕಾರಣಕ್ಕೆ ವಿದಾಯ ಹೇಳಿದರು.