ಕೊನೆಗೂ ಸಿಸಿಬಿಗೆ ಸಿಕ್ಕಿಬಿದ್ದ ಆದಿತ್ಯ ಅಳ್ವಾ

Accused Aditya Alva who was detained in Sandalwood drug case, brought back to CCB after the medical check up on Tuesday

ಬೆಂಗಳೂರು,ಜ.೧೨- ಡ್ರಗ್ಸ್ ಜಾಲ ಪ್ರಕರಣದ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದ ಮಾಜಿ ಸಚಿವ ಜೀವರಾಜ್ ಆಳ್ವ ಪುತ್ರ ಆದಿತ್ಯ ಆಳ್ವನನ್ನು ಕೊನೆಗೂ ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ನಾಲ್ಕು ತಿಂಗಳಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ ಆದಿತ್ಯ ಆಳ್ವನನ್ನು ಖಚಿತ ಮಾಹಿತಿ ಆಧರಿಸಿ ನಿನ್ನೆ ತಡರಾತ್ರಿ ಚೆನ್ನೈನಲ್ಲಿ ಬಂಧಿಸಿ ನಗರಕ್ಕೆ ಕರೆತಂದು ತೀವ್ರ ವಿಚಾರಣೆ ನಡೆಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಡ್ರಗ್ಸ್ ಜಾಲ ಪ್ರಕರಣದಲ್ಲಿ ಆದಿತ್ಯ ಆಳ್ವ ೬ನೇ ಆರೋಪಿಯಾಗಿದ್ದು ಕಾಟನ್ ಪೇಟೆ ಠಾಣೆಯಲ್ಲಿ ಎಫ್‌ಐಆರ್ ದಾಖಲಾದ ಬೆನ್ನಲ್ಲೇ ತಲೆಮರೆಸಿಕೊಂಡಿದ್ದನು. ಅಲ್ಲಿಂದ ಆದಿತ್ಯ ಆಳ್ವಗೆ ಸಿಸಿಬಿ ಪೊಲೀಸರು ಶೋಧ ನಡೆಸಿದ್ದು ಕಳೆದ ಸೆ. ೨೧ ರಂದು ಲುಕ್‌ಔಟ್ ನೋಟಿ? ಜಾರಿ ಮಾಡಿದ್ದರು.
ಓಬರಾಯ್ ಮನೆ ಶೋಧ:
ಅಲ್ಲದೆ, ವಿಶೇಷ ತಂಡವು ಮುಂಬೈನಲ್ಲಿರುವ ಆತನ ಬಾವ ನಟ ವಿವೇಕ್ ಓಬರಾಯ್ ಮನೆ ಮೇಲೆಯೂ ದಾಳಿ ನಡೆಸಿದ್ದರು. ಸಹೋದರಿ ಪ್ರಿಯಾಂಕ ಆಳ್ವಾನನ್ನು ವಿಚಾರಣೆ ನಡೆಸಿದ್ದರು. ಈ ನಡುವೆ,ಆದಿತ್ಯ ಜಾಮೀನು ಅರ್ಜಿ ಸಲ್ಲಿಸುವುದನ್ನು ಬಿಟ್ಟು, ತನ್ನ ವಿರುದ್ಧದ ಎಫ್‌ಐಆರ್ ರದ್ದು ಮಾಡುವಂತೆ ಆದಿತ್ಯ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು ಕೋರ್ಟ್ ಅರ್ಜಿ ವಜಾಗೊಳಿಸಿತ್ತು. ಪ್ರಕರಣ ಬೆಳಕಿಗೆ ಬಂದು ಆದಿತ್ಯ ಆಳ್ವ ಪಾತ್ರ ಇರುವುದು ಖಚಿತವಾದ ಬೆನ್ನಲ್ಲೇ ಹೆಬ್ಬಾಳದಲ್ಲಿರುವ ಮನೆ ಹಾಗೂ ರೆಸಾರ್ಟ್ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು.
ಡ್ರಗ್ಸ್ ಪತ್ತೆ:
ದಾಳಿಯಲ್ಲಿ ಗಾಂಜಾ ಸೇರಿ ಇನ್ನಿತರ ಡ್ರಗ್ಸ್ ಪತ್ತೆಯಾಗಿತ್ತು. ರೆಸಾರ್ಟ್ ಮ್ಯಾನೇಜರ್ ರಾಮ್ ದಾಸ್‌ನನ್ನು ವಶಕ್ಕೆ ಪಡೆದು ವಿಚಾರಣೆಯನ್ನು ನಡೆಸಲಾಗಿದೆ. ಆರೋಪಿ ಆದಿತ್ಯ, ನಟಿ ರಾಗಿಣಿ ಸಂಜನಾ, ವಿರೇನ್ ಖನ್ನ ಸೇರಿ ಇನ್ನಿತರ ಆರೋಪಿಗಳ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದ. ತನ್ನ ಹೌಸ್ ಆಫ್ ಲೈವ್ಸ್ ಮನೆಯಲ್ಲಿ ಪೇಜ್ ೩ ಪಾರ್ಟಿ ನಡೆಸುತ್ತಿದ್ದು ಕರೊನಾ ಲಾಕ್‌ಡೌನ್ ಅಮಯದಲ್ಲೂ ಸೆಲೆಬ್ರಿಟಿಗಳನ್ನು ಕರೆಸಿ ಪಾರ್ಟಿ ನಡೆಸುತ್ತಿದ್ದ. ಖ್ಯಾತ ಉದ್ಯಮಿಗಳು ಹಾಗೂ ಟೆಕ್ಕಿಗಳನ್ನು ಪಾರ್ಟಿಗೆ ಸೆಳೆಯುತ್ತಿರುವುದು ತನಿಖೆಯಲ್ಲಿ ಪತ್ತೆಯಾಗಿತ್ತು.
ಪಾರ್ಟಿಯಲ್ಲಿ ಡ್ರಗ್ಸ್:
ವಿರೇನ್ ಖನ್ನಾನ ಜತೆಗೂಡಿ ಪೇಜ್ ೩ ಪಾರ್ಟಿ ನಡೆಸಲಾಗುತ್ತಿತ್ತು. ಪಾರ್ಟಿಯಲ್ಲಿ ಎಕ್ಸ್ ಟಸಿ ಮಾತ್ರೆ, ಎಲ್‌ಎಲ್‌ಟಿ ಸ್ಟಿಪ್ಸ್ ಬಳಕೆಯಾಗುತ್ತಿತ್ತು. ಲೂಮ್ ಪೆಪ್ಪರ್ ಸಾಂಬನ ಬಳಿ ವಿರೇನ್ ಖನ್ನ ಡ್ರಗ್ಸ್ ತರಿಸಿಕೊಳ್ಳುತ್ತಿದ್ದ. ಡ್ರಗ್ಸ್ ಅನ್ನು ಪಾರ್ಟಿಯಲ್ಲಿ ಆರೋಪಿಗಳು ಬಳಕೆ ಮಾಡುತ್ತಿದ್ದರು
ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಡ್ರಗ್ಸ್ ಮಾಫಿಯಾ ಕೇಸಿನಲ್ಲಿ ಈಗಾಗಲೇ ಸ್ಯಾಂಡಲ್‌ವುಡ್‌ನ ’ಮಾದಕ’ ನಟಿ ರಾಗಿಣಿ ದ್ವಿವೇದಿ, ಬಹುಭಾಷಾ ನಟಿ ಸಂಜನಾ ಗಲ್ರಾನಿ ಜತೆಗೆ ಹಲವು ಡ್ರಗ್ಸ್ ಪೆಡ್ಲರ್‌ಗಳು ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿದ್ದು, ಸಂಜನಾ ಜಾಮೀನಿನ ಮೇಲೆ ಹೊರಬಂದಿದ್ದಾರೆ.