ಕೊನೆಗೂ ರೇಣುಕಮ್ಮ ಭೀಮರಾಯ ನಗರಸಭೆ ಸದಸ್ಯತ್ವ ರದ್ದು

ರಾಯಚೂರು.ಅ.30- ಜಿಲ್ಲಾ ಮಟ್ಟದ ಜಾತಿ ಪರಿಶೀಲನಾ ಸಭೆಯ ಆದೇಶ ಅಂಗೀಕರಿಸಿ, ಪ್ರಾದೇಶಿಕ ಆಯುಕ್ತರು ನಿನ್ನೆ ಮಧ್ಯಾಹ್ನ ವಾರ್ಡ್ 31 ರ ನಗರಸಭೆ ಸದಸ್ಯರಾದ ರೇಣುಕಮ್ಮ ಭೀಮರಾಯ ಅವರ ನಗರಸಭೆ ಸದಸ್ಯತ್ವವನ್ನು ರದ್ದು ಮಾಡಿ ಆದೇಶಿಸಿದ್ದಾರೆ.
ನಿನ್ನೆ ಮಧ್ಯಾಹ್ನ ಪ್ರಾದೇಶಿಕ ಆಯುಕ್ತರಾದ ಡಾ.ಎನ್.ವಿ.ಪ್ರಸಾದ ಅವರು ಈ ಕುರಿತು ವಾದ, ವಿವಾದ ಆಲಿಸಿದ ನಂತರ ಅ.20 ರ ಜಿಲ್ಲಾ ಮಟ್ಟದ ಜಾತಿ ಪರಿಶೀಲನಾ ಸಭೆಯ ಆದೇಶ ಅಂಗೀಕರಿಸುವುದಾಗಿ ಇದನ್ನಾಧರಿಸಿ ಸುಳ್ಳು ಜಾತಿ ಪ್ರಮಾಣ ಪತ್ರ ಮೇರೆಗೆ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಆಯ್ಕೆಯಾದ ರೇಣುಕಮ್ಮ ಭೀಮರಾಯ ಅವರು ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇವರ ನಗರಸಭೆ ಸದಸ್ಯತ್ವವನ್ನು ಮುಂದುವರೆಸಲು ಅರ್ಹತೆ ಇರುವುದಿಲ್ಲ. ಕಾರಣ ಪುರಸಭೆ ಕಾಯ್ದೆ 1964 ಕಲಂ 41 (1) ಹಾಗೂ ಸರ್ಕಾರದ ಅಧಿಸೂಚನೆ ಸಂಖ್ಯೆ ಯುಬಿಡಿ/104/ಟಿಎಂಎಸ್/2014 ದಿನಾಂಕ 9-1-2015 ರಂತೆ ಪ್ರದತ್ತವಾದ ಅಧಿಕಾರದನ್ವಯ ರೇಣುಕಮ್ಮ ಭೀಮರಾಯ ಅವರು ಸಿಳ್ಳೆಕ್ಯಾತ ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿ, ಆಯ್ಕೆಯಾಗಿದ್ದು, ಸದರಿ ಜಾತಿ ಪ್ರಮಾಣ ಪತ್ರವನ್ನು ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ಅ.20 ರಂದು ಮತ್ತು ತಹಶೀಲ್ದಾರ್ ರಾಯಚೂರು ಇವರ ಆದೇಶ ಅ.21 ರಂದು ರದ್ದು ಪಡಿಸಿರುವ ಕಾರಣ ಸದರಿಯವರ ನಗರಸಭೆ ಸದಸ್ಯತ್ವವನ್ನು ರದ್ದು ಪಡಿಸಿ ಆದೇಶಿಸಿದ್ದಾರೆ.
ಕಳೆದ ಒಂದು ವಾರದಿಂದ ಅತ್ಯಂತ ಕುತೂಹಲಕಾರಿ ಚರ್ಚೆಯ ತಿರುವು ಪಡೆದುಕೊಂಡಿದ್ದ ರೇಣುಕಮ್ಮ ಭೀಮರಾಯ ಅವರ ನಗರಸಭೆ ಸದಸ್ಯತ್ವ ಪ್ರಕರಣ ಕೊನೆಗೂ ರದ್ದಾಗುವುದರೊಂದಿಗೆ ಮುಕ್ತಾಯಗೊಂಡಿದೆ. ಪ್ರಸ್ತುತ 35 ಸಂಖ್ಯಾಬಲ ಹೊಂದಿದ ನಗರಸಭೆ ಸದಸ್ಯರ ಬಲ ಈಗ 33 ಕ್ಕಿಳಿದಿದೆ. ವಾರ್ಡ್ 8 ರ ಮಹ್ಮದ್ ಮಕ್ಬೂಲ್ ಅವರ ಕೊಲೆ ನಂತರ ಈಗ ರೇಣುಕಮ್ಮ ಭೀಮರಾಯ ಅವರ ಸದಸ್ಯತ್ವ ರದ್ದು ಪ್ರಕರಣದಿಂದ ಎರಡು ಕ್ಷೇತ್ರಗಳು ಖಾಲಿಯಾಗಿದ್ದರಿಂದ 33 ಸಂಖ್ಯಾಬಲ ನಗರಸಭೆ ಹೊಂದಿದೆ.