ಕೊನೆಗೂ ಮಲ್ಲಿಭಾವಿ ಗ್ರಾಮಕ್ಕೆ ಬಂತು ಸಾರಿಗೆ ಬಸ್

ಸುರಪುರ: ನ.12:ತಾಲ್ಲೂಕು ಕೇಂದ್ರಕ್ಕೆ ಸಮೀಪವಿರುವ ಮಲ್ಲಿಭಾವಿ ಗ್ರಾಮಕ್ಕೆ ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಬಸ್ ಸಂಚಾರ ಆರಂಭಿಸಿದೆ.

ಅನೇಕ ವರ್ಷಗಳಿಂದ ವಿದ್ಯಾರ್ಥಿಗಳು ಗ್ರಾಮಸ್ಥರು ಹೋರಾಟ ಮಾಡಿದ್ದರ ಫಲವಾಗಿ ಇಂದು ಗ್ರಾಮಕ್ಕೆ ಸಾರಿಗೆ ಸೇವೆ ಪ್ರಾರಂಭವಾಗಿದ್ದು ಗ್ರಾಮಸ್ಥರಲ್ಲಿ ಸಂತಸ ಮನೆ ಮಾಡಿದೆ. ಇಂದು ಬೆಳಗ್ಗೆ ಗ್ರಾಮಕ್ಕೆ ಬಂದ ಬಸ್ಸಿಗೆ ಗ್ರಾಮಸ್ಥರು ಹೂ ಮಾಲೆ ಹಾಕಿ, ಆರತಿ ಎತ್ತಿ ಪೂಜೆ ಸಲ್ಲಿಸಿ ಸ್ವಾಗತಿಸಿಕೊಂಡರು. ಚಾಲಕ ಮತ್ತು ನಿರ್ವಾಹಕರನ್ನು ಸನ್ಮಾನಿಸಿ ಅಭಿನಂದಿಸಿದರು.

ಕಳೆದ ಹಲವು ವರ್ಷಗಳಿಂದ ಬಸ್ ಸೌಲಭ್ಯವಿಲ್ಲದೆ ಅನೇಕ ತೊಂದರೆಗಳನ್ನು ಅನುಭವಿಸುತ್ತಿದ್ದ ಗ್ರಾಮಸ್ಥರು, ಬಸ್ ಸೇವೆ ಪ್ರಾರಂಭವಾದ ಹಿನ್ನೆಲೆಯಲ್ಲಿ ಹರ್ಷ ವ್ಯಕ್ತಪಡಿಸಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗೆ ಧನ್ಯವಾದಗಳನ್ನು ತಿಳಿಸಿದರು.