ಕೊನೆಗೂ ಕೂಡಿ ಬಂತು ಮುಹೂರ್ತ : ನ.24ರಂದು ಮೈಸೂರು ನಗರ ಪೊಲೀಸ್ ಆಯುಕ್ತರ ಕಛೇರಿ ಕಟ್ಟಡ ಬಿಎಸ್ ವೈ ರಿಂದ ಉದ್ಘಾಟನೆ

ಮೈಸೂರು . ನ.21- ಅರಮನೆ ನಗರಿ ಮೈಸೂರಿನಲ್ಲಿ ಅರಮನೆಯ ಮಾದರಿಯಲ್ಲಿಯೇ ಮತ್ತೊಂದು ಸರ್ಕಾರಿ ಕಟ್ಟಡ ತಲೆ ಎತ್ತಿದ್ದು, ಕೊನೆಗೂ ಕಟ್ಟಡ ಉದ್ಘಾಟನೆಗೆ ಮುಹೂರ್ತ ಕೂಡಿ ಬಂದಿದೆ. ಅದು ಯಾವ ಕಟ್ಟಡ ಅಂತ ಯೋಚಿಸ್ತಿದ್ದೀರಾ? ಅದು ನಗರ ಪೊಲೀಸ್ ಆಯುಕ್ತರ ನೂತನ ಕಛೇರಿ ಕಟ್ಟಡ.
ಮೈಸೂರು ನಗರ ಪೊಲೀಸ್ ಆಯುಕ್ತರ ನೂತನ ಕಛೇರಿ ಕಟ್ಟಡವನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ನ.24ರಂದು ಸಂಜೆ 4.50ಕ್ಕೆ ಉದ್ಘಾಟನೆ ನೆರವೇರಿಸಲಿದ್ದಾರೆ. ಸುಮಾರು 19ಕೋಟಿ ರೂಐ.ವೆಚ್ಚದಲ್ಲಿ ನಗರದ ನಜರ್ ಬಾದ್ ನಲ್ಲಿ ನಗರ ಪೊಲೀಸ್ ಆಯುಕ್ತರ ಕಛೇರಿ ಕಟ್ಟಡವನ್ನು ನಿರ್ಮಿಸಲಾಗಿದೆ. ನಗರ ಪೊಲೀಸ್ ಆಯುಕ್ತರ ನೂತನ ಕಟ್ಟಡ ನಿರ್ಮಾಣಕ್ಕೆ ಸರಕಾರ 2013ರ ಡಿಸೆಂಬರ್ ನಲ್ಲಿ ಮಂಜೂರಾತಿಯನ್ನು ನೀಡಿ 16.76ಕೋಟಿರೂ. ಗಳಿಗೆಆಡಳಿತಾತ್ಮಕ ಅನುಮೋದನೆಯನ್ನು ನೀಡಿತ್ತು. 2018ರ ಜನವರಿಯಲ್ಲಿ ಈ ಕಟ್ಟಡ ನಿರ್ಮಾಣಕ್ಕೆ ಹೆಚ್ಚುವರಿಯಾಗಿ 2.60ಕೋಟಿ ರೂ.ಅನುದಾನ ಬಿಡುಗಡೆ ಮಾಡಲಾಗಿತ್ತು.
ನೂತನ ಕಟ್ಟಡದ ನೆಲಮಹಡಿಯಲ್ಲಿ ಡಿಸಿಪಿ ಕೇಂದ್ರ ಸ್ಥಾನ ಮತ್ತು ಅಪರಾಧ ಅವರ ಕೊಠಡಿ, ನಗರ ಅಪರಾಧ ದಾಖಲಾತಿಗಳ ವಿಭಾಗ, ವಿದೇಶಿಯರ ಶಾಖೆ, ಪಾಸ್ ಪೊರ್ಟ್, ಪೊಲೀಸ್ ವೆರಿಫಿಕೇಶನ್ ಒಳಗೊಂಡ ನಗರ ವಿಶೇಷ ವಿಭಾಗ ಇರಲಿದ್ದು ಕಂಪ್ಯೂಟರ್ ಪೊಟೋಗ್ರಫಿ ಶಾಖೆ, ರೆಕಾರ್ಡ್ ರೂಂ, ಕೆಫೆಟೆರಿಯಾಗಳು ಇಲ್ಲೇ ಇರಲಿವೆ.
ನೆಲಮಹಡಿಯಲ್ಲಿಯೇ ಪೊಲೀಸ್ ಆಯುಕ್ತರ ಕೊಠಡಿ, ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ, ಕಾನೂನು ಮತ್ತು ಆದೇಶ ವಿಭಾಗ, ರಿಸೆಪ್ಶನ್ ಡೆಸ್ಕ್, ಸುಸಜ್ಜಿತ ಸಭಾಂಗಣ ಇರಲಿದೆ. ಮೊದಲ ಮಹಡಿಯಲ್ಲಿ ವೈರ್ ಲೆಸ್ ವಿಭಾಗ, ಡಯಲ್ 100, ಸುರಕ್ಷಾ ಆ?ಯಪ್, ಟ್ರಾಫಿಕ್ ಆಟೋಮೇಷನ್ ಕೇಂದ್ರ, ಸಿಸಿಟಿವಿ ವಿಭಾಗ, ಡಿಸಿಪಿ ಕೊಠಡಿ, ಗ್ರಂಥಾಲಯ ಹಾಗೂ ಬೆರಳು ಮುದ್ರೆ ಘಟಕಗಳಿಗೆ ಅವಕಾಶ ಕಲ್ಪಿಸಲಾಗಿದೆ.
ನಗರ ಪೆÇಲೀಸ್ ಆಯುಕ್ತರ ನೂತನ ಕಛೇರಿ ಯೋಜನೆಯನ್ನು ಮಣಿಪಾಲ್ ಎನರ್ಜಿ ಮತ್ತು ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ವತಿಯಿಂದ ಪೂರ್ಣಗೊಳಿಸಲಾಗಿದ್ದು 19ನೇ ಶತಮಾನದ ಪಾರಂಪರಿಕ ಶೈಲಿ ಕಲೋನಿಯಲ್ ಮತ್ತು ಇಂಡೋ ಸರ್ಸನಿಕ್ ಶೈಲಿಯಲ್ಲಿ ಪರಿಸರ ಸ್ನೇಹಿ ಕಟ್ಟಡದಲ್ಲಿ ನಿರ್ಮಿಸಲಾಗಿದೆ. ಒಟ್ಟು 45ಸಾವಿರ ಚದರ ಅಡಿ ವಿಸ್ತೀರ್ಣದ ಕಟ್ಟಡವು ವಿಶಾಲವಾದ ಆವರಣವನ್ನು ಹೊಂದಿದೆ. 150 ಆಸನಗಳ ಸಾಮಥ್ರ್ಯವಿರುವ ಸಭಾಂಗಣ, ಎರಡು ಮಹಡಿ, ಲಿಫ್ಟ್ ಗಳನ್ನು ಹೊಂದಿದ್ದು ಈ ಸುಂದರ ಕಟ್ಟಡದ ವಿನ್ಯಾಸವನ್ನು ಹೆಸರಾಂತ ವಾಸ್ತುಶಿಲ್ಪ ಸಂಸ್ಥೆ ಸೈಮನ್ & ಅಸೋಸಿಯೇಟ್ ಮಾಡಿದೆ.


ನಜರ್ ಬದ್ ನಿವಾಸಿಯೋರ್ವರು 2019ರಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರಕ್ಕೆ ಮೈಸೂರಿನ ನೂತನ ಪೊಲೀಸ್ ಕಮಿಷನರ್ ಕಟ್ಟಡ ನಿರ್ಮಾಣ ಸಂಬಂಧ ದೂರು ನೀಡಿದ್ದರು. ಮೈಸೂರಿನ ಕಸ್ತೂರಿ ಬಾ ಪಾರ್ಕ್ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡುತ್ತಿರುವುದನ್ನು ಆಕ್ಷೇಪಿಸಿ ಕೋರ್ಟ್ ಮೆಟ್ಟಿಲೇರಿದ್ದರು. 2016 ಅಕ್ಟೋಬರ್ ನಲ್ಲಿ ಕಟ್ಟಡ ನಿರ್ಮಾಣಕ್ಕೆ ಹೈಕೋರ್ಟ್ ತಡೆ ನೀಡಿತ್ತು. ಹೈಕೋರ್ಟ್ ತಡೆ ಇದ್ದರೂ ವನದಲ್ಲಿ ಮತ್ತೊಂದು ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದು, ತಡೆಯುವಂತೆ ಸಿಎಂಗೆ ದೂರು ನೀಡಿದ್ದರು. ಜಿಲ್ಲಾಧಿಕಾರಿ, ಮೈಸೂರು ಮಹಾನಗರ ಪಾಲಿಕೆ ಆಯುಕ್ತರು, ಗೃಹಸಚಿವ, ಉಪ ಮುಖ್ಯಮಂತ್ರಿಗೂ ದೂರು ನೀಡಿದ್ದರು. 2018 ಮಾರ್ಚ್ ತಿಂಗಳಲ್ಲಿ ಇದೇ ಕಟ್ಟಡ ಉದ್ಘಾಟನೆ ಮಾಡಲು ಬಂದು ಕೊನೆ ಕ್ಷಣದಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಹಿಂದೆ ಸರಿದಿದ್ದರು.
ಉದ್ಘಾಟನೆಗೆ ನೂರೆಂಟು ವಿಘ್ನಗಳನ್ನು ಕಾಣುತ್ತಲೇ ಬಂದ ನೂತನ ಕಛೇರಿ ಕಟ್ಟಡ ಕೊನೆಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಅಮೃತ ಹಸ್ತದಿಂದ ನ.24ರಂದು ಸಂಜೆ ಉದ್ಘಾಟನೆಗೊಳ್ಳಲಿದೆ.
ಈ ಕುರಿತು ಡಿಸಿಪಿ ಡಾ.ಎ.ಎನ್ ಪ್ರಕಾಶ್ ಗೌಡ ಮಾತನಾಡಿ ಸಾರ್ವಜನಿಕರಿಗೆ ಪಾರ್ಕಿಂಗ್ ಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಕಛೇರಿಯ ಬಳಿ ಚಿಕ್ಕ ಚೊಕ್ಕ ಉದ್ಯಾನವನ ನಿರ್ಮಿಸಲಾಗುವುದು. ಡಿಸಿಪಿ ಕೋರ್ಟ್ ಹಾಲ್ ನಿರ್ಮಿಸಲಾಗಿದ್ದು, ಅಲ್ಲೇ ವಿಚಾರಣೆಗೊಳಪಡಿಸಲಾಗುವುದು. ವಿದೇಶದಲ್ಲಿ ನಡೆಯುವ ರೀತಿಯಲ್ಲಿಯೇ ಅಲ್ಲಿ ವಿಚಾರಣೆ ನಡೆಸಿ ಪ್ರಕರಣ ಇತ್ಯರ್ಥ ಮಾಡಲಾಗುವುದು. ವಿಡಿಯೋ ಕಾನ್ಫರೆನ್ಸಿಂಗ್ ಗೆ ಕೂಡ ವ್ಯವಸ್ಥೆ ಕಲ್ಪಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಕಛೇರಿಗೆ ಬರುವವರಿಗೆ ಸಂಪೂರ್ಣ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.