ದೇವದುರ್ಗ,ಜು.೦೮-
ತಾಲೂಕಿನಲ್ಲಿ ಕಳೆದ ಎರಡ್ಮೂರು ದಿನಗಳಿಂದ ಮೋಡ ಮುಸುಕಿದ ವಾತಾವರಣವಿದ್ದು, ಗುರುವಾರ ರಾತ್ರಿ ಹಾಗೂ ಶುಕ್ರವಾರ ಉತ್ತಮವಾಗಿ ಮಳೆ ಸುರಿದಿದೆ. ದಿನವಿಡಿ ಸೂರ್ಯ ಮೋಡದಲ್ಲಿ ಮರೆಯಾಗಿದ್ದು ದಟ್ಟವಾದ ಮೋಡ ಕವಿದಿದೆ.
ಜಾಲಹಳ್ಳಿ, ಗಬ್ಬೂರ ಹೋಬಳಿಯ ಮಳೆ ಆಶ್ರಿತ ಪ್ರದೇಶದಲ್ಲಿ ೧೫ದಿನಗಳ ಹಿಂದೆ ಬಿತ್ತನೆಯಾದ ತೊಗರಿ, ಹತ್ತಿ, ಸೂರ್ಯಕಾಂತಿ, ಸಜ್ಜೆ ಸೇರಿ ವಿವಿಧ ಮುಂಗಾರು ಬೆಳೆಗಳಿಗೆ ಈ ಮಳೆ ಆಸರೆಯಾಗಲಿದೆ. ಆದರೆ, ಹೊಸದಾಗಿ ಬೀಜಬಿತ್ತನೆ ಮಾಡಲು ಮಳೆ ಕೊರತೆಯಾಗಿದ್ದು ಹೇಳಿಕೊಳ್ಳುವ ಹಸಿಮಳೆಯಾಗಿಲ್ಲ. ಇದರಿಂದ ಬಿತ್ತನೆ ಮಾಡದೆ ಇರುವ ರೈತರು ಮಳೆಗಾಗಿ ಇನ್ನೂ ಕಾಯಬೇಕಿದೆ.
ಗಬ್ಬೂರು ಹೋಬಳಿ, ಜಾಲಹಳ್ಳಿ, ಹೂವಿನಹೆಡಗಿ, ದೇವರಗುಂಡಗುರ್ತಿ, ಗಾಣಧಾಳ ಸೇರಿ ವಿವಿಧೆಡೆ ವರುಣ ಕರುಣೆತೋರಿ ಅಲಲ್ಲಿ ಮಳೆ ಸುರಿದಿದ್ದಾನೆ. ವಂದಲಿ, ಪಲಕನಮರಡಿ, ಊಟಿ, ಗಾಣಧಾಳ, ಗಲಗ, ಮದರಕಲ್, ದೇವರಗುಡ್ಡ ಸೇರಿ ಗಬ್ಬೂರು ಹೋಬಳಿಯಲ್ಲಿ ರೈತರು ಹೀಗಾಗಲೆ ಬಿತ್ತನೆ ಮಾಡಿದ್ದಾರೆ. ಈ ಮಳೆಯಿಂದ ಆ ಬೆಳೆಗಳಿಗೆ ಅನುಕೂಲವಾಗಲಿದೆ. ಪಟ್ಟಣದಲ್ಲಿ ಗುರುವಾರ ಹಾಗೂ ಶುಕ್ರವಾರ ಸುರಿದ ಮಳೆಯಿಂದ ವಾತಾವರಣ ತಂಪಾಗಿದ್ದು, ಬಸ್ ನಿಲ್ದಾಣ ಸೇರಿ ವಿವಿಧೆಡೆ ರಸ್ತೆ ಮೇಲೆ ನೀರುನಿಂತಿವೆ.
ತಾಲೂಕಿನ ಬಹುತೇಕ ಭೂಪ್ರದೇಶ ನೀರಾವರಿಗೆ ಒಳಪಟ್ಟಿದ್ದು, ನಾರಾಯಣಪುರ ಬಲದಂಡೆ ಹಾಗೂ ಕೃಷ್ಣಾನದಿ ನೀರು ಅವಲಂಬಿಸಿದೆ. ಈ ರೈತರಿಗೆ ನಾರಾಯಣಪುರ ಜಲಾಶಯದಲ್ಲಿ ನೀರು ಬರಬೇಕಿದ್ದು, ಕಳೆದವರ್ಷಕ್ಕೆ ಹೊಲಿಸಿದರೆ ಈ ವರ್ಷ ಹೇಳಿಕೊಳ್ಳುವಂಥ ಮಳೆಯಾಗಿಲ್ಲ. ಹೀಗಾಗಿ ಕೃಷ್ಣಾನದಿ ಆಶ್ರಿತ ರೈತರು ಭತ್ತದ ಸಸಿಮಡಿ ಹಾಕಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಕೃಷ್ಣಾನದಿಗೆ ಒಂದಿಷ್ಟು ನೀರು ಹರಿದುಬಂದರೆ ಕೃಷಿ ಚಟುವಟಿಕೆ ಕೈಗೊಳ್ಳಲು ಧೈರ್ಯ ಬರಲಿದೆ. ಇಲ್ಲದಿದ್ದರೆ ನೀರು ತಳಕಂಡಿದ್ದು ಅದನ್ನೆ ನಂಬಿ ಸಸಿಮಡಿ ಹಾಕಿದರೆ ಕೈಕೊಡುವ ಆತಂಕವಿದೆ.
ಕೋಟ್=====
ಮುಂಗಾರು ತಾಲೂಕಿನಲ್ಲಿ ತಡವಾಗಿ ಆರಂಭವಾಗಿದ್ದರೂ ಹೇಳಿಕೊಳ್ಳುವಂಥ ಹಸಿಮಳೆಯಾಗಿಲ್ಲ. ಖುಷ್ಕಿ ಪ್ರದೇಶದಲ್ಲಿ ಬಿತ್ತನೆ ಮಾಡಿದ ತೊಗರಿ, ಹತ್ತಿ ಬೆಳೆಗೆ ಅನುಕೂಲವಾಗಲಿದೆ. ಹೊಸದಾಗಿ ಬೀಜ ಬಿತ್ತನೆ ಮಾಡಲು ಈ ಮಳೆ ಸಾಲುವುದಿಲ್ಲ. ಉತ್ತಮ ಮಳೆಯಾದರೆ ಕೃಷಿ ಚಟುವಟಿಕೆ ಚುರುಕುಪಡೆಯಲಿವೆ.
-ಬಸವರಾಜ ಸಿದ್ದರೆಡ್ಡಿ
ಕೃಷಿ ಇಲಾಖೆ ಸಹಾಯಕ ನಿರ್ದೇಶಕ