ಕೊನೆಗೂ ಉದ್ಘಾಟನೆಗೆ ಸಿದ್ದಗೊಂಡ ಗಾಂಧಿ ಭವನ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.22: ಸಂಫೂರ್ಣವಾಗಿ ನಿರ್ಮಾಣಗೊಂಡರೂ ಕಳೆದ ಒಂದುವರೆ ವರ್ಷಕ್ಕಿಂತಲೂ ಹೆಚ್ಚು ಕಾಲದಿಂದ ಉದ್ಘಾಟನೆಯ ಭಾಗ್ಯ ಕಾಣದೇ ಇದ್ದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿನ ಗಾಂಧಿ ಭವನ ಮುಂದಿನ ತಿಂಗಳು ಅಗಷ್ಟ್ ನಲ್ಲಿ ಉದ್ಘಾಟನೆ ಮಾಡಲು ಸಿದ್ದತೆ ನಡೆದಿದೆ.
ಗಾಂಧೀಜಿ ಅವರ ತತ್ವಾದರ್ಶಗಳನ್ನು, ಸ್ವಾತಂತ್ರ್ಯ ಹೋರಾಟದ ಬಗ್ಗೆ ಇಂದಿನ ಯುವ ಪೀಳಿಗೆಗೆ ಪರಿಚಯಿಸಲು ಅನುಕೂಲವಾಗುವಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತಲಾ ಮೂರು ಕೋಟಿ ರೂ ವೆಚ್ಚದಲ್ಲಿ ವಾರ್ತಾ ಇಲಾಖೆಯಿಂದ ಇಂತಹ ಗಾಂಧಿ ಭವನಗಳನ್ನು ನಿರ್ಮಿಸಲು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಅನುದಾನ ನೀಡಿದ್ದರು.
ರಾಜ್ಯದಲ್ಲಿ ಮೊದಲನೆಯದಾಗಿ ಕಟ್ಟಡ ಪೂರ್ಣಗೊಂಡಿದ್ದು. ಬಳ್ಳಾರಿಯಲ್ಲಿ ಆದರೆ ಉದ್ಘಾಟನೆ ಮಾತ್ರ ಆಗಲಿಲ್ಲ. ಆದರೆ ನಂತರ ಪೂರ್ಣಗೊಂಡ ದಾವಣಗೆರೆ, ಬೆಳಗಾವಿಯಲ್ಲಿ ಉದ್ಘಾಟನೆ ಮಾಡಲಾಗಿದೆ.
ಕಟ್ಟಡ ಪೂರ್ಣಗೊಂಡು ವರ್ಷಗಳೇ ಕಳೆದರೂ ಉದ್ಘಾಟನೆಯಾಗದಿದ್ದರಿಂದ ಇಲ್ಲಿನ ಕಟ್ಟಡ ನಿರ್ವಹಣೆ ಇಲ್ಲದೆ. ಕಟ್ಟಡದ ಆವರಣದಲ್ಲಿನ ಗಿಡಗಳು ಹಾಳಾಗಿದ್ದವು. ಕಟ್ಟಡ ಮಧ್ಯೆ ಭಾಗದಲ್ಲಿ ಸ್ಥಾಪಿಸಿರುವ ಗಾಂಧಿಜಿ ಪ್ರತಿಮೆ ಬಣ್ಣ ಕಳೆದುಕೊಂಡಿತ್ತು.
ಈಗ ಉದ್ಘಾಟನೆ ಮಾಡಲು ಮುಂದಿನ ತಿಂಗಳು ಮುಖ್ಯ ಮಂತ್ರಿಗಳು ಬರುತ್ತಾರೆಂದು ಇದನ್ನು ನಿರ್ಮಾಣ ಮಾಡಿದ ಭೂಸೇನಾ ನಿಗಮದ ಸಿಬ್ಬಂದಿ ಸಿದ್ದತೆಯಲ್ಲಿ ತೊಡಗಿದ್ದಾರೆ. ಆವರಣ ಸ್ವಚ್ಚಗೊಳಿಸಿದ್ದಾರೆ. ಗಾಂಧೀಜಿ ಪ್ರತಿಮೆ ಸ್ವಚ್ಚ ಮಾಡುತ್ತಿದ್ದಾರೆ. ಮಾಸಿದ ಬಣ್ಣ ಸರಿಪಡಿಸುತ್ತಿದ್ದಾರೆ.
ಇಲ್ಲು ಗಾಂಧಿಜಿ ವಿಚಾರಧಾರೆಗಳ ಬಗ್ಗೆ ಚಿಂತನ‌ ಮಂಥನ ನಡೆಸಲು ಸಭಾಂಗಣ, ಗ್ರಂಥಾಲಯ, ಕಚೇರಿ, ಶೌಚಾಲಯ, ಪ್ರದರ್ಶನಾಲಯಗಳಿವೆ. ಉತ್ತಮವಾಗಿ ನಿರ್ಮಾಣಗೊಂಡಿರುವ ಈ ಕಟ್ಟಡ ಮುಂದಿನ ದಿನಗಳಲ್ಲಿ ನಿರ್ವಹಣೆಯೂ ಉತ್ತಮವಾಗಿರಬೇಕಿದೆ. ಇದಕ್ಕಾಗಿ ಒಂದು ಸಮಿತಿ‌ ಮಾಡಲಿದೆ ಎಂಬ ಮಾಹಿತಿ ಇದೆ.
ಅಂತೂ ಈ ಕಟ್ಟಡಕ್ಕೆ ಉದ್ಘಾಟನೆಯ ಭಾಗ್ಯ ಹತ್ತಿರ ಬಂದಿರುವುದಕ್ಕೆ ಗಾಂಧಿ ಅಭಿಮಾನಿಗಳಿಗೆ ಸಂತಸ ಮೂಡಿಸಿದೆ.