ಕೊತ್ತಲಬಸವೇಶ್ವರ ಸಂಸ್ಥೆಯ ನೃಪತುಂಗ ಕಾಲೇಜನಲ್ಲಿ ಯುವೋತ್ಸವ

ಕಲಬುರಗಿ:ಮಾ.27:ಸೇಡಂನ ಶ್ರೀ ಕೊತ್ತಲಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸಂಚಾಲಿತ ಸೇಠ ಶ್ರೀ ತುಳಸಿರಾಮ ಗಿಲಡಾ ನೃಪತುಂಗ ಪದವಿ ಮಹಾವಿದ್ಯಾಲಯ ಹಾಗೂ ಎಂ.ಕಾಂ ಸ್ನಾತಕೋತ್ತರ ಕೇಂದ್ರದಲ್ಲಿ ನೃಪತುಂಗ ಕಾಮರ್ಸ ಅಸೋಸಿಯೇಶನ್‍ನ ಸಹಯೋಗದಲ್ಲಿ “ಯುವೋತ್ಸವ-2ಏ23” ಶೀರ್ಷಿಕೆಯಡಿಯಲ್ಲಿ ಆಹಾರ, ಕರಕುಶಲ ಹಾಗೂ ಸಾಂಪ್ರದಾಯಿಕ ಮೇಳ ವಾಣಿಜ್ಯ ವಿಭಾಗದ ವತಿಯಿಂದ ಆಯೋಜಿಸಲಾಗಿತ್ತು. ಯುವೋತ್ಸವವನ್ನು ಸಂಸ್ಥೆಯ ಅಧ್ಯಕ್ಷರಾದ ಪೂಜ್ಯ ಶ್ರೀ ಸದಾಶಿವ ಸ್ವಾಮೀಜಿಗಳು ಉದ್ಘಾಟಿಸಿ ಮಾತನಾಡುತ್ತ ವಿದ್ಯಾರ್ಥಿಗಳಿಗೆ ಉದ್ಯಮ ಶೀಲತೆ ಕೌಶಲ್ಯ ಹಾಗೂ ನೈಪುಣ್ಯತೆಗಳನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿ ಈಗಿನ ಪರಿಸ್ಥಿತಿಯಲ್ಲಿ ನಮ್ಮ ದೇಶದ ಆರ್ಥೀಕ ಬೆಳವಣಿಗೆಯಲ್ಲಿ ಯುವಜನರ ಪಾತ್ರ ಅತ್ಯಮೂಲ್ಯವಾಗಿದ್ದು, ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವ ವಿಕಸನಕ್ಕೆ ಒತ್ತು ನೀಡಿ ಸಮಾಜದಲ್ಲಿ ಬೇಡುವ ಕೈಗಳಾಗದೆ, ಕೊಡುವ ಕೈಗಳಾಗಬೇಕೆಂದು ತಿಳಿ ಹೇಳಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ|| ರೇವಣಸಿದ್ದಯ್ಯ ಮಠ ಪ್ರಾಸ್ತಾವಿಕವಾಗಿ ಮಾತನಾಡುತ್ತ, ಯುವೋತ್ಸವ ಮೇಳದ ಆಯೋಜನೆಯ ಉದ್ದೇಶವನ್ನು ವಿವರಿಸಿ ವಿದ್ಯಾರ್ಥಿಗಳಲ್ಲಿ ವ್ಯವಹಾರಿಕತೆ ಕೌಶಲ್ಯಗಳನ್ನು ಅಳವಡಿಸಿಕೊಳ್ಳುವಲ್ಲಿ ಈ ಕಾರ್ಯಕ್ರಮವು ಪ್ರಮುಖ ಪಾತ್ರ ನಿರ್ವಹಿಸಲಿದೆ ಎಂದು ಪ್ರತಿಪಾದಿಸುವುದರ ಜೊತೆಗೆ ಯುವೋತ್ಸವದ ಭಾಗವಾಗಿ ಏರ್ಪಡಿಸಿದ ವಿವಿಧ ಸ್ಪರ್ಧೆಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು. ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಹೈದರಾಬಾದನ ಪಲ್ಸ್ ಫಾರ್ಮಾಸ್ಯುಟಿಕಲ್ಸ್ ಲಿಮಟೆಡ್‍ನ ಮಾನವ ಸಂಪನ್ಮೂಲ ವಿಭಾಗದ ಶ್ರೀ ಕಿರಣಕುಮಾರ ಲಿಂಗಂ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಪಠ್ಯಕ್ಕೆ ಸಂಬಂಧಿಸಿದ ವಿಷಯಗಳಿಗೆ ಒತ್ತುಕೊಡದೆ, ಪಠ್ಯೇತರ ಪ್ರಾಯೋಗಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಜ್ಞಾನವನ್ನು ವೃದ್ಧಿಸಿಕೊಂಡು ಮಾರುಕಟ್ಟ್ಟೆಯ ನಿರೀಕ್ಷೆಗೆ ತಕ್ಕಂತೆ ಸನ್ನದ್ಧರಾಗಬೇಕೆಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ತಮ್ಮ ಕಾಲೇಜಿನ ಹಳೆಯ ಅನುಭವಗಳನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಡಾ|| ಉದಯಕುಮಾರ ಶಹಾ ಮಾತನಾಡಿ ಈ ತರಹದ ಪ್ರಯೋಗಾತ್ಮಕ ಚಟುವಟಿಕೆಗಳನ್ನು ನಮ್ಮ ಕಾಲೇಜು ಆಯೋಜಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿ ನಮ್ಮ ಸಂಸ್ಥೆಯು ಇಂತಹ ಹೊಸ ಪ್ರಯೋಗಗಳನ್ನು ಮುಂದುವರೆಸಲು ಬದ್ಧವಾಗಿದ್ದು, ಪ್ರತಿ ವರ್ಷವೂ ಕೂಡ ಇಂತಹ ಹೊಸ ಪ್ರಯೋಗಗಳು ನಡೆಯಬೇಕೆಂದು ಆಶಿಸಿ ಆಯೋಜಕರನ್ನು ಪ್ರಶಂಸಿದರು. ಕಾಲೇಜಿನ ಉಸ್ತುವಾರಿಗಳು ಹಾಗೂ ಸಂಸ್ಥೆಯ ಸಹಕಾರ್ಯದರ್ಶಿಗಳಾದ ಡಾ|| ಸದಾನಂದ ಬೂದಿ ಮಾತನಾಡಿ ಈ ತರಹದ ಪಠ್ಯೇತಹ ಚಟುವಟಿಕೆಗಳು ಇಂದಿನ ಪರಸ್ಥಿತಿಯಲ್ಲಿ ಅತ್ಯವಶ್ಯಕವಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ವ್ಯವಹಾರಿಕ ನೈಪುಣ್ಯೆತೆಗಳನ್ನು ಅಳವಡಿಸಿಕೊಂಡು ಯಶಸ್ಸಿನ ದಾರಿಯಲ್ಲಿ ಮನ್ನಡೆಯಬೇಕೆಂದು ಮಾರ್ಗದರ್ಶನ ನೀಡಿದರು.

ಪ್ರಾಚಾರ್ಯರಾದ ಪ್ರೋ. ಶಾಮಸುಂದರ ವ್ಹಿ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ವಾಣಿಜ್ಯ ವಿಭಾಗದ ಈ ಹೊಸ ಪ್ರಯೋಗದ ಕುರಿತು ಪ್ರಶಂಸೆ ವ್ಯಕ್ತಪಡಿಸಿ ಮುಂಬರುವ ದಿನಗಳಲ್ಲಿ ಈ ತರಹದ ಇನ್ನೂ ಹೆಚ್ಚಿನ ಪ್ರಯೋಗಾತ್ಮಕ ಕಾರ್ಯಕ್ರಮಗಳನ್ನು ನಿರಂತರವಾಗಿ ಏರ್ಪಡಿಸುವ ಭರವಸೆಯನ್ನು ವ್ಯಕ್ತ ಪಡಿಸಿದರು.

ನಂತರ, ಮೇಳದ ಭಾಗವಾಗಿ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳಾದ ಸಾಂಪ್ರದಾಯಿಕ ಉಡುಗೆ, ಆಹಾರ ತಯಾರಿಕೆ, ಗಾಯನ, ಸ್ವ-ರಚಿತ ಕವನ ವಾಚನ, ಕರಕುಶಲ ವಸ್ತುಗಳ ತಯಾರಿಕೆ, ಪೋಸ್ಟರ್ ಮೇಕಿಂಗ್ ಹಾಗೂ ಮೋಬೈಲ್ ಛಾಯಾಚಿತ್ರ ಸೆರೆ ಹಿಡಿದು ಪ್ರಸ್ತುತ ಪಡಿಸುವ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಒಂದು ದಿನದ ಈ ವಿಶೇಷ ಉತ್ಸವದಲ್ಲಿ ವಿದ್ಯಾರ್ಥಿಗಳು ತಮ್ಮ ಸ್ವಂತ ಆಹಾರ ಮಳಿಗೆಗಳನ್ನು ತೆಗೆದು ಆಹಾರ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ನೋಡುಗರ ಗಮನ ಸೇಳೆದರು. ಇದರ ಮೂಲಕ ವ್ಯವಹಾರ ನಿರ್ವಹಣೆ ಹಾಗೂ ಮಾರುಕಟ್ಟೆ ನಿರ್ವಹಣೆಯ ಪ್ರಾಯೋಗಿಕ ಅನುಭವವನ್ನು ಪಡೆದರು.

ಸ್ಥಳೀಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಸೇವಾ ಬಳಗ ಮತ್ತು ಸಾರ್ವಜನಿಕರು ಈ ಮೇಳದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳ ಆಹಾರ ಮಳಿಗೆಗಳಿಂದ ಉತ್ಪನ್ನಗಳನ್ನು ಸವಿದು, ಸಂತಸ ವ್ಯಕ್ತ ಪಡಿಸಿದರು.

ನಂತರ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಮತಿ ಅನುರಾಧಾ ಪಾಟೀಲ ಮಾತನಾಡಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಶುಭಕೋರಿದರು. ಸಮಾರೋಪದ ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಸ್ವರ್ಣ ಜಯಂತಿ ಕಾರ್ಯಕ್ರಮದ ಪ್ರಮುಖರಾದ ಶ್ರೀ ವಿಶ್ವನಾಥ ಕೋರಿ ಮಾತನಾಡಿ ವ್ಯವಹಾರಗಳಲ್ಲಿ ಗ್ರಾಹಕರನ್ನು ಸೆಳೆಯುವ ತಂತ್ರ, ಮಾರ್ಕೇಟಂಗ್ ತಂತ್ರಗಳ ಕುರಿತು ಪ್ರಸ್ತಾಪಿಸಿ ಮುಂದೆ ಬರುವ ನಮ್ಮ ಸಂಸ್ಥೆಯ ಸ್ವರ್ಣ ಜಯಂತಿ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನರು ಸೇರಲಿದ್ದು, ಅದರಲ್ಲಿ ಸ್ಥಳೀಯ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುವ ಅವಕಾಶವಿದ್ದು, ವಿದ್ಯಾರ್ಥಿಗಳು ಅದರ ಸದುಪಯೋಗ ಪಡೆದುಕೊಳ್ಳುವಲ್ಲಿ ಆಲೋಚಿಸಬೇಕೆಂದು ಕರೆ ನೀಡಿದರು. ನಂತರ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕುಮಾರಿ ಅನನ್ಯಾ ಮಠ ಪ್ರಾರ್ಥಿಸಿದರು, ಕುಮಾರಿ ಸಬಾ ಬೇಗಂ ಸ್ವಾಗತಿಸಿದರು ಹಾಗೂ ಕುಮಾರಿ ಖುಷ್ಬು ಕುಮಾರಿ ವಂದಿಸಿದರು, ಕುಮಾರಿ ಭಾಗ್ಯಶ್ರೀ, ಕುಮಾರಿ ಮೇರಿಲೀಹಾ ಹಾಗೂ ಕುಮಾರಿ ರಾಜಶ್ರೀ ದಯಾಮಾ ರವರು ಕಾರ್ಯಕ್ರಮವನ್ನು ನಿರ್ವಹಿಸಿದರು.

ವಾಣಿಜ್ಯ ವಿಭಾಗ ಆಯೋಜಿತ ಈ ರಂಗು-ರಂಗಿನ ಮೇಳದಲ್ಲಿ ಕಾಲೇಜಿನ ಸರ್ವ ಸೇವಾ ಬಳಗ, ಸ್ಥಳೀಯ ಕಾಲೇಜುಗಳ ಸೇವಾ ಬಳಗ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.