ಕೊಡವರ ಬಗ್ಗೆ ಹಗುರವಾಗಿ ಮಾತನಾಡಬೇಡಿ

ಮೈಸೂರು: ಡಿ.25: ನೀವು ಗೋಮಾಂಸ ತಿನ್ನುತ್ತೀರಿ ಅಂತ ಇಡೀ ಕುರುಬ ಸಮಾಜದವರು ಬೀಫ್ ತಿನ್ನುತ್ತಾರೆ ಅನ್ನೋಕೆ ಆಗುತ್ತಾ ಎಂದು ಸಿದ್ದರಾಮಯ್ಯ ವಿರುದ್ಧ ಸಂಸದ ಪ್ರತಾಪಸಿಂಹ ಗುಡುಗಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ವಿವೇಚನೆ ಇಲ್ಲದೆ ಯಾಕೆ ಹೀಗೆ ಮಾತನಾಡುತ್ತಿದ್ದಾರೆ ಎನ್ನುವದೇ ನನಗೆ ಅರ್ಥ ಆಗ್ತಿಲ್ಲ. ಆತ್ಮದ್ರೋಹದ ಮಾತುಗಳನ್ನು ಕಾಂಗ್ರೆಸ್‍ನವರು ಮಾತ್ರ ಮಾತನಾಡೋಕೆ ಸಾಧ್ಯ. ಕೊಡವರ ಬಗ್ಗೆ ಹಗುರವಾಗಿ ಮಾತನಾಡಬೇಡಿ. ಅವರು ಗೋವನ್ನು ಎರಡನೇ ತಾಯಿಯಾಗಿ ನೋಡುತ್ತಾರೆ. ಕೋಟ್ಯಂತರ ಜನರ ಭಾವನೆಗೆ ಧಕ್ಕೆ ತರುವ, ಕೊಡವರಿಗೆ ನೋವಾಗುವಂತಹ ಮಾತುಗಳನ್ನಾಡಬೇಡಿ ಎಂದು ತಿಳಿಸಿದರು.
ಮಾಸ್ಕ್ ಹೆಸರಿನಲ್ಲಿ ಹಣ ವಸೂಲಿಯಾಗುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ನಾನು ದೆಹಲಿ ಸೇರಿದಂತೆ ಹಲವು ಪ್ರದೇಶಗಳಿಗೆ ಹೋಗಿ ಬಂದಿದ್ದೇನೆ. ಎಲ್ಲ ಕಡೆ ರೂಪಾಂತರಗೊಂಡ ಕೊರೊನಾ ಬಗ್ಗೆ ಚರ್ಚೆ ಆಗುತ್ತಿದೆ. ಆದರೆ, ಜನರನ್ನ ಹೆಚ್ಚು ದಿನ ನಿರ್ಬಂಧಿಸಲು ಸಾಧ್ಯವಿಲ್ಲ. ಉದ್ಯಮ ಹಾಗೂ ಜನರ ಅವರ ದೈನಂದಿನ ಚಟುವಟಿಕೆಗಳಿಗೆ ಅವಕಾಶ ಕೊಡಬೇಕು. ಮಾಸ್ಕ್ ಕಡ್ಡಾಯ ಮಾಡಿ, ಆದರೆ ಮಾಸ್ಕ್ ಹೆಸರಿನಲ್ಲಿ ಕಾರು, ಬೈಕ್ ನಿಲ್ಲಿಸಿ ಜನರಿಗೆ ತೊಂದರೆ ಕೊಡಬೇಡಿ ಎಂದು ಸಲಹೆ ನೀಡಿದರು.