ಕೊಡಗಿನ ತರಬೇತಿನಿರತ ಪೈಲೆಟ್ ಗುಜರಾತ್ ನಲ್ಲಿ ಆತ್ಮಹತ್ಯೆ


ಬೆಂಗಳೂರು,ಜೂ.೫-ಭವಿಷ್ಯದಲ್ಲಿ ಪೈಲೆಟ್ ಆಗಿ ಆಕಾಶದಲ್ಲಿ ಹಾರಾಡಬೇಕು ಎನ್ನುವ ಕನಸು ಕಂಡು ತರಬೇತಿ ಪಡೆಯುತ್ತಿದ್ದ ಕೊಡಗಿನ ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗುಜರಾತಿನ ಅಹಮದಾಬಾದ್??ನಲ್ಲಿ ನಡೆದಿದೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಜಂಬೂರುವಿನ ಶಿಬಿ ಬೋಪಯ್ಯ ಆತ್ಮಹತ್ಯೆ ಮಾಡಿಕೊಂಡವರು.
ಅಹಮದಾಬಾದ್ ನ ಏರೋನಾಟಿಕಲ್ ಟ್ರೈನಿಂಗ್ ಸೆಂಟರ್?ನಲ್ಲಿ ಪೈಲೆಟ್ ತರಬೇತಿ ಪಡೆಯುತ್ತಿದ್ದ ಶಿಬಿ ಬೋಪಯ್ಯ ಕಳೆದ ಮೇ ತಿಂಗಳಲ್ಲೇ ತರಬೇತಿ ಅಂತ್ಯವಾಗಿ ಈತ ಪೈಲೆಟ್ ಆಗಿ ಹೊರ ಬರಬೇಕಿತ್ತು.
ಆದರೆ ಲಾಕ್?ಡೌನ್? ಕಾರಣದಿಂದಾಗಿ ತರಬೇತಿ ಅವಧಿ ಮುಂದೂಡಿಕೆ ಯಾಗಿದ್ದರಿಂದ ತರಬೇತಿ ಮುಗಿಯಲೂ ಇನ್ನೂ ಎರಡು ತಿಂಗಳಷ್ಟೇ ಬಾಕಿ ಉಳಿದಿತ್ತು. ತರಬೇತಿ ಮುಗಿಸಿ ಆದಷ್ಟು ಶೀಘ್ರವಾಗಿ ಬರುವುದಾಗಿ ಪೋಷಕರ ಜೊತೆ ಹೇಳುತ್ತಿದ್ದು ಪ್ರತಿದಿನ ರಾತ್ರಿ ಊಟದ ಬಳಿಕ ತಂದೆ ತಾಯಿ ಜೊತೆ ವೀಡಿಯೋಕಾಲ್ ಮಾಡಿ ಮಾತನಾಡಿಯೇ ಮಲಗುತ್ತಿದ್ದ.
ಆದರೆ ಮೊನ್ನೆ ರಾತ್ರಿ ಆತನ ಕರೆ ಬಂದಿರಲಿಲ್ಲ. ಪೋಷಕರು ಕರೆ ಮಾಡಿದರೂ ಸ್ವೀಕರಿಸಲಿಲ್ಲವಂತೆ. ಇದೇ ವೇಳೆ ಅಹಮದಾಬಾದ್ ಪೊಲೀಸರು ಬೆಂಗಳೂರಿನಲ್ಲಿರುವ ಶಿಬಿಯ ಸಹೋದರಿಗೆ ಕರೆ ಮಾಡಿ ಶಿಬಿ ಮರಕ್ಕೆ ನೇಣು ಹಾಕಿಕೊಂಡಿರುವ ಸುದ್ದಿಯನ್ನು ಹೇಳಿದ್ದಾರೆ. ಸಹೋದರನ ಸಾವಿನ ಸುದ್ದಿ ಬರಸಿಡಿಲಿನಂತೆ ಬಂದಪ್ಪಳಿಸಿದೆ. ತಕ್ಷಣವೇ ತಂದೆ ತಾಯಿಗೆ ವಿಷಯ ತಿಳಿಸಿರುವ ಸಹೋದರಿ ಅಹಮದಾಬಾದ್ ಗೆ ತೆರಳಿದ್ದಾರೆ. ತಮ್ಮ ಮಗನ ಸಾವಿನ ಸುದ್ದಿ ಸುಳ್ಳಾಗಿರಲಿ ಎಂದು ಮನೆಯವರು ಪ್ರಾರ್ಥಿಸುತ್ತಿದ್ದಾರೆ. ಶಿಬಿ ಮೊನ್ನೆಯವರೆಗೂ ಸಹಜವಾಗಿಯೇ ಇದ್ದನಂತೆ. ಹಾಗಾಗಿ ಈತನ ಸಾವಿನ ಸುತ್ತ ಇದೀಗ ಹಲವು ಅನುಮಾನಗಳು ಕಾಡುತ್ತಿವೆ. ಸದ್ಯ ಅಹಮದಾಬಾದ್ ಪೊಲೀಸರು ತನಿಖೆ ನಡೆಸುತ್ತಿದ್ದು, ಸತ್ಯ ಹೊರಬರಬೇಕಿದೆ.