ಕೊಡಗಿನಲ್ಲಿ ಭಾರೀ ಮಳೆ ಮತ್ತೆ ಪ್ರವಾಹದ ಭೀತಿ

ಮಡಿಕೇರಿ,ಜೂ.9-ಮಹಾಮಾರಿ‌ ಕೊರೊನಾ‌ ನಡುವೆ ಭಾರೀ‌ ಪ್ರಮಾಣದ ಮುಂಗಾರು ಮಳೆಯಿಂದ ಕೊಡಗು ಜಿಲ್ಲೆಯಲ್ಲಿ ಮತ್ತೆ ಪ್ರವಾಹದ ಭೀತಿ ಶುರುವಾಗಿದೆ.
ಕೊಡಗು ಜಿಲ್ಲೆಯ ಹತ್ತಾರು ಹಳ್ಳಿಗಳಲ್ಲಿ ಕಳೆದ ಮೂರು ವರ್ಷಗಳಿಂದ ಪ್ರವಾಹ ಹಾಗೂ ಭೂ ಕುಸಿತದ ಭೀತಿ ಇದೆ. ಈಗಾಗಲೇ ಮಳೆಗಾಲ ಆರಂಭವಾಗಿದ್ದು, ಈ ಬಾರಿಯೂ ಪ್ರವಾಹ ಉದ್ಭವಿಸುವುದಿಲ್ಲ ಎನ್ನುವ ಯಾವ ಖಾತರಿಯೂ ಇಲ್ಲ. ಇದರ ನಡುವೆ ಕೋವಿಡ್ ಸೋಂಕಿನ ಭೀತಿ ತೀವ್ರವಾಗಿ ಕಾಡುತ್ತಿದೆ. ಜಿಲ್ಲೆಯಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆ ಇಲ್ಲಿನ ಜನರಿಗೆ ಆತಂಕ ಶುರುವಾಗಿದೆ.
ಮಳೆ ಹೆಚ್ಚಾಯಿತೆಂದರೆ ಕೊಡಗಿನ ಭಾಗಮಂಡಲದಿಂದ ಆರಂಭವಾಗಿ ಇತ್ತ ಕಣಿವೆ ಗ್ರಾಮದವರೆಗೂ ಕಾವೇರಿ ನದಿ ದಂಡೆಯಿಂದ 80ಕ್ಕೂ ಹೆಚ್ಚು ಗ್ರಾಮಗಳು ಪ್ರವಾಹ ಪೀಡಿತವಾಗುತ್ತವೆ. ವಿರಾಜಪೇಟೆ ತಾಲೂಕಿನ ಕರಡಿಗೋಡು, ಗುಹ್ಯ, ಕಕ್ಕಟ್ಟು ಕಾಡು ಸೋಮವಾರಪೇಟೆ ತಾಲೂಕಿನ ನೆಲ್ಯಹುದಿಕೇರಿ, ಕುಂಬಾರ ಗುಂಡಿ ಬರಡಿ ಸೇರಿದಂತೆ ಹಲವು ಗ್ರಾಮಗಳು ತೀವ್ರ
ಸಂಕಷ್ಟಕ್ಕೆ ಸಿಲುಕುತ್ತವೆ.
ಈ ಗ್ರಾಮಗಳಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಪ್ರವಾಹದಲ್ಲಿ ಮನೆ ಕಳೆದುಕೊಂಡಿದ್ದ ಸಾಕಷ್ಟು ಕುಟುಂಬಗಳಿಗೆ ಇಂದಿಗೂ ಬದಲಿ ವಸತಿ ವ್ಯವಸ್ಥೆ ಆಗಿಲ್ಲ. ಹೀಗಾಗಿ ನದಿ ದಂಡೆಯಲ್ಲಿಯೇ ಮತ್ತೆ ಶೆಡ್‍ಗಳನ್ನು ನಿರ್ಮಿಸಿಕೊಂಡು ಬದುಕು ನಡೆಸುತ್ತಿದ್ದಾರೆ. ಆದರೆ ಈ ಬಾರಿಯೂ ಪ್ರವಾಹ ಎದುರಾಗಿದ್ದೇ ಆದಲ್ಲಿ ಇಂತಹ ಗ್ರಾಮಗಳ ಸಾವಿರಾರು ಕುಟುಂಬಗಳನ್ನು ಕಳೆದ ಮೂರು ವರ್ಷದಂತೆ ಈ ಬಾರಿಯೂ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರ ಮಾಡಬೇಕಾಗಿರುವುದು ಅಗತ್ಯ. ಹೀಗಾಗಿಯೇ ಜಿಲ್ಲಾಧಿಕಾರಿಯವರು ಈಗಾಗಲೇ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಬಂದಿದ್ದಾರೆ.
ಜಿಲ್ಲಾಡಳಿತ ಈ ಗ್ರಾಮಗಳ ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರ ಮಾಡಿದರೆ ಕೋವಿಡ್ ಸೋಂಕು ತೀವ್ರವಾಗಿ ಹರಡುವುದು ಖಚಿತ. ಈಗಾಗಲೇ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗೋಡು, ಗುಹ್ಯ, ಕಕ್ಕಟ್ಟು ಕಾಡು ಸೇರಿದಂತೆ ಹಲವು ಗ್ರಾಮಗಳಲ್ಲಿ 200ಕ್ಕೂ ಹೆಚ್ಚು ಕೋವಿಡ್ ಪಾಸಿಟಿವ್ ಪ್ರಕರಣಗಳಿವೆ.