ಕೊಟ್ಟ ಹಣ ಮರಳಿ ಕೇಳಿದಕ್ಕೆ ಎದೆಗೆ ಗುದ್ದಿ ವ್ಯಕ್ತಿ ಕೊಲೆ

ಕಲಬುರಗಿ,ಮೇ.3-ಕೊಟ್ಟ ಹಣ ಮರಳಿ ಕೇಳಿದಕ್ಕೆ ಕುತ್ತಿಗೆ ಹಿಸುಕಿ ಎದೆಗೆ ಗುದ್ದಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿರುವ ಘಟನೆ ಇಲ್ಲಿನ ಗಾಲಿಬ್ ಕಾಲೋನಿಯಲ್ಲಿ ನಡೆದಿದೆ.
ಸೈಯದ್ ಮಜರ್ ತಂದೆ ಸಯದ್ ಫಜಲ್ (38) ಕೊಲೆಯಾದವರು.
ಕೊಲೆಯಾದ ಸೈಯದ್ ಮಜರ್ ಅವರು ಆಪ್ಟಿಕಲ್‍ನಲ್ಲಿ ಕೆಲಸ ಮಾಡುತ್ತಿದ್ದರು. ಕೆಲ ವರ್ಷಗಳ ಹಿಂದೆ ಅವರ ಪತ್ನಿಯ ಸಹೋದರರಿಗೆ ಹಣ ನೀಡಿದ್ದರು ಎನ್ನಲಾಗಿದ್ದು, ಈ ಹಣ ಮರಳಿ ಕೊಡುವಂತೆ ಕೇಳಿದ್ದರು. ಇದೇ ವಿಷಯಕ್ಕೆ ಸೈಯದ್ ಮಜರ್ ಮತ್ತು ಅವರ ಪತ್ನಿಯ ಸಹೋದರರ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.
ಮೇ.2 ರಂದು ಸಹ ಇದೇ ವಿಷಯಕ್ಕೆ ಜಗಳ ನಡೆದು ಸೈಯದ್ ಮಜರ್ ಅವರನ್ನು ಅವರ ಪತ್ನಿ ಆಯಿಶಾ ಬೇಗಂ, ಸಹೋದರರಾದ ಶೇಖ್ ಸದ್ದಾಂ, ಶೇಖ್ ಯಾಹಿಯಾ, ಶೇಖ್ ಖಿಬ್ರಿಯಾ ಮತ್ತು ಇನ್ನಿಬ್ಬರು ಸೇರಿ ಕತ್ತು ಹಿಸುಕಿ, ಎದೆಯ ಮೇಲೆ ಹೊಡೆದು ಕೊಲೆ ಮಾಡಿದ್ದಾರೆ ಎಂದು ಮೃತನ ಸಹೋದರ ಸೈಯದ್ ಜಾಫರ್ ಅವರು ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಸುದ್ದಿ ತಿಳಿದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.