ಕೊಟ್ಟ ಮಾತಿನಂತೆ ಗ್ರಾರಂಟಿಗಳ ಜಾರಿ- ಡಿ.ಕೆ.ಶಿ

(ಸಂಜೆವಾಣಿ ವಾರ್ತೆ)
ರಾಯಚೂರು,ಮಾ.೧೫- ಸರ್ಕಾರದಿಂದ ಜನರ ಬದುಕನ್ನು ಸುಸ್ಥಿರಗೊಳಿಸುವ ಉದ್ದೇಶದಿಂದ ಮತ್ತು ರಾಜ್ಯದ ಜನರ ಅಭಿವೃದ್ಧಿಯ ದೃಷ್ಠಿಯಲ್ಲಿ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ, ನುಡಿದಂತೆ ನಡೆದು, ಜನಪರವಾದ ಸರ್ಕಾರ ಎಂಬ ಹೆಗ್ಗಳಿಕೆಯನ್ನು ಗಳಿಸಿದೆ ಎಂದು ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ ಅವರು ಹೇಳಿದರು.
ಅವರು ಮಾ.೧೪ರ(ಗುರುವಾರ) ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಕರ್ನಾಟಕ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಬೃಹತ್ ಸಮಾವೇಶ ಹಾಗೂ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಜನರು ಸರ್ಕಾರಕ್ಕೆ ನೀಡಿದ ಅತ್ಯಂತ ದೊಡ್ಡ ಶಕ್ತಿಯಿಂದ ಇಂದು ಸರ್ಕಾರ ರಾಜ್ಯದ ಜನರಿಗೆ ಪಂಚ ಗ್ಯಾರಂಟಿ ಯೋಜನೆಗಳನ್ನು ನೀಡುವ ಮೂಲಕ ಇನ್ನಷ್ಟು ಶಕ್ತಿಯನ್ನು ಜನರಲ್ಲಿ ತುಂಬುವ ಕಾರ್ಯವನ್ನು ರಾಜ್ಯ ಸರ್ಕಾರ ಮಾಡಿದೆ ಎಂದರು.
ಜಿಲ್ಲೆಯು ಪುರಂದದಾಸರು, ಕನಕದಾಸರು, ರಾಘವೇಂದ್ರ ಸ್ವಾಮೀಗಳು ಸೇರಿದಂತೆ ನೂರಾರು ದಾರ್ಶನಿಕರು ಓಡಾಡಿದ ಪವಿತ್ರವಾದ ಭೂಮಿಯಾಗಿದ್ದು, ಇದೊಂದು ಶಕ್ತಿಯ ಭೂಮಿಯಾಗಿದೆ. ಇಂತಹ ಪುಣ್ಯ ಭೂಮಿಯಲ್ಲಿ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಮಾಡುತ್ತಿರುವುದು ಅತ್ಯಂತ ಸಂತಸದ ವಿಚಾರವಾಗಿದೆ ಎಂದರು.
ಸರ್ಕಾರದ ಮೊದಲನೇ ಗ್ಯಾರಂಟಿ ಯೋಜನೆಯಾದ ಶಕ್ತಿ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಮಹಿಳೆಯರಿಗೆ ರಾಜ್ಯಾದಾದ್ಯಂತ ಉಚಿತ ಬಸ್ ಪ್ರಯಾಣದ ವ್ಯವಸ್ಥೆಯನ್ನು ಕಲ್ಪಿಸುವ ಐತಿಹಾಸಿಕವಾದ ತೀರ್ಮಾನವನ್ನು ಸರ್ಕಾರ ತೆಗೆದುಕೊಂಡು ಮಹಿಳೆಯರಿಗೆ ಅನುಕೂಲ ಮಾಡಿಕೊಟ್ಟಿದೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಭಾಗಕ್ಕೆ ೩೭೧ ಜೆ ಅಡಿಯಲ್ಲಿ ಮೀಸಲಾತಿ ನೀಡುವ ವಿಶೇಷವಾದ ಕಾನೂನನ್ನು ನೀಡಲಾಗಿದೆ. ಇದರಿಂದ ಈ ಭಾಗದ ಜನರ ಬದುಕಿನಲ್ಲಿ ಉತ್ತಮವಾದ ಬದಲಾವಣೆಯನ್ನು ತರಲಾಗಿದೆ. ಯೋನೆಗಳನ್ನು ಪ್ರತಿಯೊಂದು ವರ್ಗ, ಜಾತಿಗೂ ನೀಡುವ ಮೂಲಕ ರಾಜ್ಯ ಸರ್ಕಾರದಿಂದ ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬಂತೆ ಆಡಳಿತ ನಡೆಸುತ್ತಿದೆ ಎಂದರು.
ಇದೇ ವೇಳೆ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣಪ್ರಕಾಶ.ಆರ್ ಪಾಟೀಲ್ ಅವರು ಮಾತನಾಡಿ, ರಾಜ್ಯ ಸರ್ಕಾರ ಬಡವರ ಪರವಾದ ಸರ್ಕಾರವಾಗಿದ್ದು, ನುಡಿದಂತೆ ನಡೆದ ಸರ್ಕಾರವಾಗಿದೆ. ಬಡವರ ಮನೆ ಬಾಗಿಲೆಗೆ ಯೋಜನೆಗಳನ್ನು ತಲುಪಿಸಿದ ಸಕಾರವಾಗಿದೆ. ಜನಪರವಾದ ಕಾರ್ಯಕ್ರಮಗಳು, ಬಡವರಪರವಾದ ಕಾನೂನುಗಳನ್ನು ಜಾರಿಗೆ ತಂದಿರುವುದು ರಾಜ್ಯ ಸರ್ಕಾರದ ಇತಿಹಾಸವಾಗಿದೆ. ಮತ್ತು ರಾಜ್ಯದಲ್ಲಿ ಪಾರದರ್ಶಕವಾದ ಆಡಳಿತವನ್ನು ನಡೆಸುವಲ್ಲಿ ಸರ್ಕಾರ ಎಂದಿಗೂ ಶ್ರಮಿಸುತ್ತಿದೆ ಎಂದರು.
ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್ ಬೋಸರಾಜು ಅವರು ಮಾತನಾಡಿ, ರಾಜ್ಯಾದ್ಯಂತ ಸಣ್ಣ ನೀರಾವರಿ ವ್ಯಾಪ್ತಿಯ ಕೆರೆಗಳ ಅಭಿವೃದ್ದಿಗೆ ಶಾಸಕರುಗಳ ಬೇಡಿಕೆಗೆ ತಕ್ಕಂತೆ ಸರ್ಕಾರ ೧,೩೦೦ ಕೋಟಿ ಹಣ ಮಂಜೂರು ಮಾಡಿದ್ದು, ಜಿಲ್ಲೆಯಾದ್ಯಂತ ಇದುವರೆಗೂ ಗೃಹ ಜ್ಯೋತಿ ಯೋಜನೆಗೆ ೯೩ ಕೋಟಿ, ಶಕ್ತಿ ಯೋಜನೆಗೆ ೧೧೮ ಕೋಟಿ ಹಣ, ಅನ್ನಭಾಗ್ಯ ಯೋಜನೆಗೆ ೫ ಕೆಜಿ ಅಕ್ಕಿ ಬದಲಿಗೆ ೧೪೧ ಕೋಟಿ ಡಿಬಿಟಿ ಹಣ ಪಾವತಿಸಲಾಗಿದೆ. ಅದೇ ರೀತಿ ಗೃಹಲಕ್ಷ್ಮಿ ಯೋಜನೆಗೆ ೪೫೧ ಕೋಟಿ ಹಣ ಪಾವತಿಸಲಾಗಿದೆ. ಇದರ ಜತೆಗೆ ೧೩೪ ಕೋಟಿ ಯುವ ನಿಧಿ ಹಣ ಪಾವತಿಸಲಾಗಿದೆ ಈ ರೀತಿ ಒಟ್ಟಾರೆ ೮೦೦ ಕೋಟಿ ಹಣ ಗ್ಯಾರಂಟಿ ಯೋಜನೆಗಳಿಗೆ ಖರ್ಚು ಮಾಡಲಾಗಿದೆ ಎಂದು ಹೇಳಿದರು.
ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಗ್ರಾಮೀಣ ಶಾಸಕರಾದ ಬಸನಗೌಡ ದದ್ದಲ್ ಅವರು ಮಾತನಾಡಿ, ರಾಜ್ಯ ಸರ್ಕಾರದಿಂದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಇದರಿಂದ ಇಡೀ ದೇಶವೇ ರಾಜ್ಯದ ಕಡೆಗೆ ತಿರುಗಿ ನೋಡುವಂತಾಗಿದೆ. ಐದು ಗ್ಯಾರಮಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಜನರಿಗೆ ನೀಡಿದ್ದ ಭರವಸೆಯನ್ನು ಈಡೇರಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷರು ಹಾಗೂ ಮಸ್ಕಿ ಶಾಸಕ ಆರ್.ಬಸನಗೌಡ ತುರ್ವಿಹಾಳ, ಮಾನವಿ ಶಾಸಕ ಜಿ.ಹಂಪಯ್ಯ ನಾಯಕ, ಸಂಡೂರು ಶಾಸಕ ತುಕಾರಾಂ, ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ್ ಬಯ್ಯಾಪೂರ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನಗೌಡ, ಉಪಾಧ್ಯಕ್ಷ ಬಸೀರ್ ಆಹ್ಮದ್, ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಾಮ ಪಾಂಡ್ವೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಉಪಸ್ಥಿತರಿದ್ದರು.
ವಿವಿಧ ಇಲಾಖೆಗಳ ಅಭಿವೃದ್ದಿ ಕಾಮಗಾರಿಗಳ ಶಂಕು ಸ್ಥಾಪನೆ ಮತ್ತು ಉದ್ಘಾಟನೆ:
ಬೃಹತ್ ಮತ್ತು ಮಧ್ಯಮ ನೀರಾವರಿ ಯೋಜನೆಗಳು, ಜಲಸಂಪನ್ಮೂಲ ಇಲಾಖೆಯ ಅಧೀನದಲ್ಲಿ ಬರುವ ಕರ್ನಾಟಕ ನೀರಾವರಿ ನಿಗಮ ನಿಯಮಿತ ನಂ.೪ ಕಾಲುವೆ ವಿಭಾಗದ ಚಿಕ್ಕಹೊನ್ನಕುಣಿ ವಿಭಾಗದ ರೂ. ೦೭.೪೯ ಕೋಟಿ ಮತ್ತು ಕಾಲುವೆ ನಂ.೫ ರ ಯರಮರಸ್ ವಲಯ ಯರಮರಸ್‌ನ ರೂ.೩೫೯.೫೭ ಒಟ್ಟು ರೂ.೩೬೭ ಕೋಟಿ ವೆಚ್ಚದ ವಿವಿಧ ಕಾಮಗಾರಿಗಳು ಶಂಕುಸ್ಥಾಪನೆ ಮತ್ತು ಉದ್ಘಾಟಿಸಲಾಯಿತು.
ಸಣ್ಣ ನೀರಾವರಿ ಇಲಾಖೆಯಂದ ೪೮ ಕಾಮಗಾರಿಗಳ ಒಟ್ಟು ರೂ. ೧೦೯.೭೩ ಕೋಟಿ ಶಂಕುಸ್ಥಾಪನೆ ನೆರವೇರಿಸಲಾಯಿತು.
ಕೆ.ಆರ್.ಡಿ.ಸಿ.ಎಲ್. ವತಿಯಿಂದ ರಾಯಚೂರು ಬಳಿಯ ಕಲಮಲಾ ಜೆಂಕ್ಷನ ನಿಂದ ಸಿಂಧನೂರು ಬಳಿಯ ಬಳ್ಳಾರಿ, ಲಿಂಗಸೂಗೂರು ರಸ್ತೆ ವೃತ್ತ ವರೆಗಿನ ೭೮.೪೫ ಕೀ.ಮೀ.ಉದ್ದದ ರಸ್ತೆಯನ್ನು ಪಿ.ಪಿ.ಪಿ.-ಡಿ.ಬಿ.ಎಫ್.ಓ.ಎಂ.ಟಿ.-ಹೈಬ್ರಿಡ್ಜ್ ವರ್ಷಾಸನಾ ಯೋಜನೆಯಡಿ ೧೬೯೫.೮೫ ಕೋಟಿ ವೆಚ್ಚದ ಅಭಿವೃದ್ದಿ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಲಾಯಿತು.
ಆಯುಷ್ ಇಲಾಖೆಯ ೫೦ ಲಕ್ಷ, ಆರೋಗ್ಯ ಇಲಾಖೆಯ ೧೦ ಕೋಟಿ ೫೪ ಲಕ್ಷ , ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ೯ ಕೋಟಿ, ಕೆ.ಆರ್.ಐ.ಡಿ.ಎಲ್‌ನ ೭೭ ಕೋಟಿ ೫೪ ಲಕ್ಷದ ವಿವಿಧ ಕಾಮಗಾರಿಗಳು ಶಂಕುಸ್ಥಾಪನೆ ಮತ್ತು ಉದ್ಘಾಟನೆಗೊಂಡವು
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ೧ ಕೋಟಿ ೨೫ ಲಕ್ಷ, ಸಣ್ಣ ನೀರಾವರಿ ಇಲಾಖೆಯ ಒಟ್ಟು ೧೦೯ ಕೋಟಿ ೭೩ ಲಕ್ಷದ ವಿವಿಧ ಕಾಮಗಾರಿಗಳ ಶಂಕು ಸ್ಥಾಪನೆ, ಪಂಚಾಯತ್ ರಾಜ್ ಇಂಜಿನೀಯರಿಂಗ್ ವಿಭಾಗದ ೪ ಕೋಟಿ ೨೨ ಲಕ್ಷದ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಲಾಯಿತು.
ಜಿಲ್ಲಾ ನಿರ್ಮಿತಿ ಕೇಂದ್ರದ ೨೪ ಕೋಟಿ ೫೩ ಲಕ್ಷ ವೆಚ್ಚದ ಕಾಮಗಾರಿಗಳ ಶಂಕು ಸ್ಥಾಪನೆ ಮತ್ತು ಉದ್ಘಾಟನೆ, ಸಮಾಜ ಕಲ್ಯಾಣ ಇಲಾಖೆಯ ೯ ಕೋಟಿ ೨೭ ಲಕ್ಷ ವೆಚ್ಚದ ಕಾಮಗಾರಿ ಉದ್ಘಾಟನೆ ನೆರವೇರಿಸಲಾಯಿತು.
ಶಾಲಾ ಶಿಕ್ಷಣ ಇಲಾಖೆಯ ೧೦ ಕೋಟಿ ೬೫ ಲಕ್ಷ ವೆಚ್ಚದ ಕಾಮಗಾರಿಗಳ ಉದ್ಘಾಟನೆ, ಕ್ಯಾಶುಟೆಕ್‌ನ ೭ ಕೋಟಿ ೭೨ ಲಕ್ಷ ವೆಚ್ಚದ ಕಾಮಗಾರಿಗಳು, ಲೋಕೋಪಯೋಗಿ ಇಲಾಖೆಯ ೧೦ ಕೋಟಿ ೩೨ ಲಕ್ಷ ವೆಚ್ಚದ ವಿವಿಧ ಕಾಮಗಾರಿಗಳು, ಜಿಲ್ಲೆಯಲ್ಲಿ ಇಂದು ರೂ.೨೩೪೦ ಕೋಟಿ ವೆಚ್ಚದ ವಿವಿಧ ಇಲಾಖೆಗಳ ೪೭೮ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಾಯಿತು.