ಕೊಟ್ಟ ಭರವಸೆ ಈಡೇರಿಸಲು ಸರ್ಕಾರ ಬದ್ಧ: ಶಾಸಕಿ ಪೂರ್ಣಿಮಾ

ಸಿರಾ, ನ. ೧೮- ಚುನಾವಣೆಗೂ ಮುನ್ನ ಸಿರಾ ಕ್ಷೇತ್ರದ ಉಪ ಚುನಾವಣೆಯ ಸಂದರ್ಭದಲ್ಲಿ ಕ್ಷೇತ್ರದ ಜನತೆಗೆ ನೀಡಿದ ಭರವಸೆಯಂತೆ ಮದಲೂರು ಕೆರೆಯನ್ನು ತುಂಬಿಸುವ ವಿಚಾರವೂ ಸೇರಿದಂತೆ ನೀಡಿದ ಆಶ್ವಾಸನೆಗಳನ್ನು ಈಡೇರಿಸಲು ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳುವುದು ಖಚಿತ ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆಗೆ ಸಂಬಂಧಿಸಿ ದಂತೆ ಬಿಜೆಪಿ ಪಕ್ಷವು ನನಗೆ ಒಂದಷ್ಟು ಜವಾಬ್ದಾರಿಯನ್ನು ನೀಡಿದ್ದ ಹಿನ್ನೆಲೆಯಲ್ಲಿ ೧೨ ದಿನಗಳವರೆಗೂ ಕ್ಷೇತ್ರದಲ್ಲಿ ಸಂಚರಿಸುವ ಮೂಲಕ ಮತದಾರರನ್ನು ಹಾಗೂ ಕಾಡುಗೊಲ್ಲ ಸಮುದಾಯದ ಸಂಘಟನೆಯಲ್ಲಿ ತೊಡಗಿದ್ದೆನು. ಕಾಡುಗೊಲ್ಲ ಸಮುದಾಯವು ನಿಜಕ್ಕೂ ಪಕ್ಷವನ್ನು ಬೆಂಬಲಿಸಿದ್ದು ನಮಗೆ ಸಂತಸ ತಂದಿದೆ ಎಂದರು. ಕ್ಷೇತ್ರದ ಪ್ರತಿಯೊಂದು ಗೊಲ್ಲರಹಟ್ಟಿಗಳಿಗೆ ನಾನು ಚುನಾವಣಾ ಸಮಯದಲ್ಲಿ ಭೇಟಿ ನೀಡಿದ್ದೇನೆ. ಅನೇಕ ಹಟ್ಟಿಗಳಲ್ಲಿ ರಸ್ತೆ, ಕುಡಿಯುವ ನೀರಿನ ಸಮಸ್ಯೆ ಇರುವುದನ್ನು ಹಾಗೂ ಇನ್ನೂ ಅನೇಕ ಮಂದಿ ಗುಡಿಸಲುಗಳಲ್ಲಿಯೇ ವಾಸಿಸುವುದನ್ನು ಮನಗಂಡಿದ್ದು, ಮನೆಗಳ ಮಂಜೂರಾತಿಗಾಗಿ ಸರ್ಕಾರ ಈಗಾಗಲೇ ಕ್ರಮ ಕೈಗೊಳ್ಳುತ್ತಿದೆ ಎಂದರು.
ನೂತನ ಶಾಸಕ ಡಾ.ಸಿ.ಎಂ.ರಾಜೇಶ್‌ಗೌಡ ಒಬ್ಬ ಯುವಕರಿದ್ದಾರೆ. ಈ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸುವ ಇಚ್ಚಾಶಕ್ತಿ ಅವರಿಗಿದೆ. ಅಪ್ಪರ್ ಭದ್ರಾ ಯೋಜನೆಗೆ ಸಂಬಂಧಿಸಿದಂತೆ ಈವರೆಗೆ ನಿಧಾನಗತಿಯಲ್ಲಿ ನಡೆಯುತ್ತಿದ್ದ ಕಾಮಗಾರಿ ೨೦೧೮ ರಿಂದ ತ್ವರಿತಗತಿಯಲ್ಲಿ ಸಾಗಿದೆ. ಸಿರಾ, ಚಿ.ನಾ.ಹಳ್ಳಿ ಭಾಗಕ್ಕೆ ಭದ್ರಾ ನೀರು ಹರಿಯಲಿದೆ. ಭದ್ರಾದಿಂದ ವಿ.ವಿ. ಸಾಗರಕ್ಕೆ ನೀರು ತರುವ ಕಾಮಗಾರಿ ಶೇ. ೯೦ರಷ್ಟು ಮುಗಿದಿದೆ. ಕಾಮಗಾರಿ ನಿಧಾನಗೊಳ್ಳಲು ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳುವಿಕೆಯಷ್ಟೆ ಕಾರಣವಾಗಿತ್ತು ಎಂದರು.
ವಿ.ವಿ.ಸಾಗರವು ಕಳೆದ ವರ್ಷ ೧೦೨ ಅಡಿಯಷ್ಟು ನೀರಿನಿಂದ ತುಂಬಿತ್ತು. ಈ ವರ್ಷವೂ ಈಗಾಗಲೇ ೧೦೦ ಅಡಿಯಾಗಿದೆ. ಸಿರಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನೀರಾವರಿ ಯೋಜನೆಯನ್ನು ಶಾಶ್ವತವಾಗಿ ಕಲ್ಪಿಸುವ ಇಚ್ಚಾಶಕ್ತಿ ಸರ್ಕಾರಕ್ಕಿದೆ. ಇಲ್ಲಿನ ಮೂಲಭೂತ ಸಮಸ್ಯೆಗಳಿಗೆ ಸರ್ಕಾರ ಪ್ರಾಮಾಣಿಕವಾಗಿ ಸ್ಪಂದಿಸಲಿದೆ. ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಈ ಕ್ಷೇತ್ರದ ಮತದಾರರು ಹಾಗೂ ಕಾರ್ಯಕರ್ತರ ಪರಿಶ್ರಮ ಶ್ಲಾಘನಾರ್ಹವಾದುದು ಎಂದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಮಂಜುನಾಥ್, ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್. ಗೌಡ, ಬಿ.ಜೆ.ಪಿ. ಗ್ರಾಮಾಂತರ ಅಧ್ಯಕ್ಷ ರಂಗಸ್ವಾಮಿ, ಸಿರಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಈರಣ್ಣ, ಕಾಡುಗೊಲ್ಲ ಸಮಾಜದ ಮುಖಂಡರಾದ ಶ್ರೀರಂಗ ಯಾದವ್, ಚಂಗಾವರ ಮಾರಣ್ಣ, ಮಾಗೋಡು ನಾಗರಾಜು, ಮಲ್ಲಯ್ಯ ಮತ್ತಿತರರು ಉಪಸ್ಥಿತರಿದ್ದರು.