
ದಾವಣಗೆರೆ.ಮೇ.೬: ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿದ್ದು, ಸಂವಿಧಾನ ರಕ್ಷಿಸಿ, ಬಹುತ್ವ ಭಾರತ ಉಳಿಸಿ ನಾವೆಲ್ಲಾ ಸೇರಿ ‘ಸೌಹಾರ್ದ ಕರ್ನಾಟಕ’ ಕಟ್ಟೋಣ. ಜನವಿರೋಧಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕು. ಕೊಟ್ಟ ಭರವಸೆ ಈಡೇರಿಸದ ಪಕ್ಷ ತಿರಸ್ಕರಿಸೋಣ. ಕಾಂಗ್ರೆಸ್ ಬೆಂಬಲಿಸೋಣ ಎಂದು ಸಮಾನ ಮನಸ್ಕರ ಒಕ್ಕೂಟ ಹೇಳಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಗತಿಪರ ಚಿಂತಕ ಎ. ಬಿ. ರಾಮಚಂದ್ರಪ್ಪ, ನಿವೃತ್ತ ಕೆಎಎಸ್ ಅಧಿಕಾರಿ ಹನಗವಾಡಿ ರುದ್ರಪ್ಪ ಅವರು ಮಾತನಾಡಿ, ಧರ್ಮದ ಆಧಾರದ ಮೇಲೆ ರಾಜಕಾರಣ ಮಾಡುವುದು ಖಂಡನೀಯ ಎಂದರು.ಜಾತಿ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುವ, ಕೇಸರೀಕರಣ, ಭ್ರಷ್ಟಾಚಾರ, ದ್ವೇಷದ ರಾಜಕಾರಣ ಸೇರಿದಂತೆ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಪಕ್ಷ ಬೆಂಬಲಿಸಬೇಡಿ. ಕಾಂಗ್ರೆಸ್ ಗೆ ಮತ ಹಾಕಿ ಆರೋಗ್ಯಕರ ವಾತಾವರಣ ನಿರ್ಮಾಣ ಮಾಡೋಣ ಎಂದು ಕರೆ ನೀಡಿದರು.ಇತ್ತೀಚಿನ ವರ್ಷಗಳಲ್ಲಿ ರಾಜ್ಯವಾಳಿದ ಸರ್ಕಾರದ ಆಡಳಿತದಿಂದ ರಾಜ್ಯದ ಜನತೆ ತೀವ್ರ ನಿರಾಸೆ ಆಗಿದ್ದಾರೆ. ಜನರ ಬಹುತೇಕ ಸಮಸ್ಯೆಗಳು ಹಾಗೇ ಉಳಿದುಕೊಂಡಿವೆ. ಸರ್ಕಾರದ ಕೆಲವು ನಿಲುವು ಮತ್ತು ನಿರ್ಧಾರಗಳಿಂದ ಜನ ಇನ್ನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜನ ಜಿವನ ದಿನೇದಿನ ದುರ್ಬರವಾಗುತ್ತಿದೆ. ನಿತ್ಯ ಬಳಕೆಯ ವಸ್ತು, ಪರಿಕರಗಳ ದರ ಏರಿಕೆ ಗಗನಮುಖಿಯಾಗಿದ್ದು, ಪ್ರತಿಯೊಬ್ಬರೂ ಬಸವಳಿಯುವಂತಾಗಿದೆ ಎಂದರು.ಜಾತಿ, ಮತಗಳ ನಡುವಿನ ಸಾಮರಸ್ಯಕ್ಕೆ ಧಕ್ಕೆಯುಂಟಾಗಿ ಶಾಂತಿ ನೆಮ್ಮದಿಗೂ ಭಂಗ ಉಂಟಾಗುತ್ತಿದೆ. ಚುನಾವಣೆಯು ಜನರ ಪಾಲಿಗೆ ಮಹತ್ತದ್ದಾಗಿದೆ ಎಂಬ ಕಾರಣಕ್ಕೆ ನಾವು ನಿಮ್ಮ ಮುಂದೆ ಬಂದಿದ್ದೇವೆ. ಸಾಹಿತಿಗಳು, ಕಲಾವಿದರು, ಚಿಂತಕರು, ವಕೀಲರು, ಹೋರಾಟಗಾರರು ಒಗ್ಗೂಡಿ ` ಸಮಾನ ಮನಸ್ಕರ ಒಕ್ಕೂಟ – ಕರ್ನಾಟಕ’ದ ಅಡಿಯಲ್ಲಿ ‘ ಮತದಾರರ ಜಾಗೃತಿಗೆ ಬಂದಿದ್ದೇವೆ. ಮತ್ತೆ ನಾವು ಎಚ್ಚರ ತಪ್ಪುವುದು ಬೇಡ. ನಮ್ಮ ಶಾಂತಿಯ ನೆಲೆವೀಡಾದ ಕರ್ನಾಟಕ’ವನ್ನು ಮರು ಸ್ಥಾಪಿಸಿಕೊಳ್ಳುವ ಜವಾಬ್ದಾರಿ ನಮ್ಮ ಕೈಯಲ್ಲಿದೆ ಎಂದು ಹೇಳಿದರು.ನಿರುದ್ಯೋಗ ಸಮಸ್ಯೆ ತಂದಿತ್ತ ಅಪತ್ತುಗಳು, 2014 ರ ಚುನಾವಣೆ ಪೂರ್ವದಲ್ಲಿ ನರೇಂದ್ರ ಮೋದಿಯವರು ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಭರವಸೆ ನೀಡಿದ್ದರು. ಹೊಸ ಉದ್ಯೋಗ ಸೃಷ್ಟಿಯಿರಲಿ ಕೋಟ್ಯಾಂತರ ಉದ್ಯೋಗ ನಷ್ಟವಾಗಿದೆ. ಆಳುವ ಸರ್ಕಾರಗಳು ಯಾವುದೇ ಪರಿಹಾರ ಮಾರ್ಗಕ್ಕೆ ಪ್ರಯತ್ನಿಸಿಲ್ಲ. ಯುವಕರು ಪಕೋಡ ಮಾರಿ ಜೀವನ ಮಾಡಿ ಎಂದು ಗೇಲಿ ಮಾಡಿಬಿಟ್ಟರು. ವಿದೇಶದಲ್ಲಿ ಕಪ್ಪು ಹಣ ತಂದು ಪ್ರತಿಯೋರ್ವರ ಅಕೌಂಟ್ ಗೆ 15 ಲಕ್ಷ ಪಾಕುತ್ತೇವೆ ಅಂದಿದ್ದನ್ನು ಈಡೇರಿಸಲಿಲ್ಲ. 9 ವರ್ಷಗಳಲ್ಲಿ ವಿದೇಶದಲ್ಲಿರುವ ಯಾವುದೇ ವಂಚಕರನ್ನು ದೇಶಕ್ಕೆ ಕರೆಸಲಲಿಲ್ಲ. ಬಡವರ ಬ್ಯಾಂಕ್ ಖಾತೆಯ ಹಣವನ್ನು ‘ ಮಿನಿಮಮ್ ಬ್ಯಾಲೆನ್ ‘ ಹೆಸರಲ್ಲಿ ಕಸಿಯಲಾಗುತ್ತಿದೆ. ಲಕ್ಷಾಂತರ ಮಧ್ಯಮ ಉದ್ಯಮಗಳನ್ನು ಸಾಲ – ಬಡ್ಡಿ ಶೂಲದ ಹೆಸರಲ್ಲಿ ನಾಶಪಡಿಸಲಾಗಿದೆ ಎಂದು ಆರೋಪಿಸಿದರು.ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಮಲ್ಲಿಕಾರ್ಜುನ್, ಅನಿಶ್ ಪಾಶಾ ಮತ್ತಿತರರು ಹಾಜರಿದ್ದರು.