ಕೊಟ್ಟೂರೇಶ್ವರ ದೇವಸ್ಥಾನದ ಹುಂಡಿ ಪೆಟ್ಟಿಗೆಯ ಹಣ 41,44,651 ರೂ


ಸಂಜೆ ವಾಣಿ ವಾರ್ತೆ
ಕೊಟ್ಟೂರು: ಮಾ,29- ಪಟ್ಟಣದ ಆರಾಧ್ಯ ದೈವ, ಪವಾಡ ಪುರುಷ ಎಂದೇ ಪ್ರಖ್ಯಾತವಾಗಿರುವ  ಶ್ರೀಗುರು ಕೊಟ್ಟೂರೇಶ್ವರ ದೇವಸ್ಥಾನದ ಹುಂಡಿ ಪೆಟ್ಟಿಗೆಯ ಹಣ ಎಣಿಕೆ ಮಾಡಲಾಯಿತು.
ಹುಂಡಿ‌ ಪೆಟ್ಟಿಗೆಯಲ್ಲಿನ ಹಣವನ್ನು ದೇವಸ್ಥಾನದ ಹಿಂಭಾಗದಲ್ಲಿ  ಎಣಿಕೆ ಮಾಡಲಾಗಿದ್ದು 6 ದೊಡ್ಡ,  6 ತಾತ್ಕಾಲಿಕ ಹುಂಡಿಪೆಟ್ಟಿಗೆಯನ್ನು ಎಣಿಕೆ ಮಾಡಲಾಯಿತು. ಎರಡು ತಿಂಗಳ ನಂತರ ಹುಂಡಿ ಪೆಟ್ಟಿಗೆಯನ್ನು ಎಣಿಕೆ ಮಾಡಲಾಗಿದ್ದು ಒಟ್ಟಾರಿಯಾಗಿ 41,44,651 ರೂ ಗಳು ಸಂಗ್ರಹ ವಾಗಿದೆ ಎಂದು ಕಾರ್ಯನಿರ್ವಹಣಾಧಿಕಾರಿಯಾಗಿ ಕೃಷ್ಣಪ್ಪ ತಿಳಿಸಿದರು.
ಈ ಸಂದರ್ಭದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರಾದ ಪ್ರಕಾಶ್ ರಾವ್, ಕಾರ್ಯನಿರ್ವಣಾಧಿಕಾರಿಯಾದ ಕೃಷ್ಣಪ್ಪ , ಸಿಬ್ಬಂದಿ ಹಾಗೂ ಪ್ರಗತಿ ಗ್ರಾಮೀಣ ಬ್ಯಾಂಕಿನ ಮ್ಯಾನೇಜರ್ ಶಿವಕುಮಾರ್, ಸಿಬ್ಬಂದಿ ಇತರರು ಉಪಸ್ಥಿತರಿದ್ದರು.
ಎಣಿಕೆ ಸಂದರ್ಭದಲ್ಲಿ ಕಂಡು ಬಂದ ಚೀಟಿಗಳು:
ನಮ್ಮ ಮನೆಯಲ್ಲಿ ಹಣದ ವಿಷಯವಾಗಿ ತುಂಬಾ ಕಷ್ಟವಿದೆ, ತುಂಬಾ ಸಾಲವಾಗಿದೆ, ಯಾವ ರೀತಿಯಲ್ಲಿ ಸಾಲ ತೀರಿಸುವ ಮಾರ್ಗ ಗೊತ್ತಾಗುತ್ತಿಲ್ಲ ಮುಂದಿನ ವರ್ಷ ನಿನ್ನ ಜಾತ್ರೆಯಲ್ಲಿ ಬರುವುದರ ಒಳಗಾಗಿ ನಮ್ಮ ಕಷ್ಟಗಳನ್ನು ತೀರಿಸಬೇಕು ತಂದೆ, ನಮ್ಮ ಮನೆಯಲ್ಲಿ ಸತೀಶ್ ಎಂಬ ನಾಮ ಇರುವ ವ್ಯಕ್ತಿಯು ಕುಡಿಯುವ ಚಟದಿಂದ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾನೆ, ಕುಡಿತವನ್ನು ಬಿಡುವಂತೆ ಮಾಡಿ ಅದರ ದುಷ್ಟ ಶಕ್ತಿಗೆ ಕಾರಣವಾಗದಂತೆ ನೋಡಿಕೊಳ್ಳಬೇಕು. ಆ ವ್ಯಕ್ತಿಗೆ ಒಂದು ವರ್ಷದ ಒಳಗೆ ಕಂಕಣ ಭಾಗ್ಯ ಕೂಡಿ ಮದುವೆಯಾದರೆ ಕುಟುಂಬ ಸಮೇತ ನಿಮ್ಮ ಸನ್ನಿಧಾನಕ್ಕೆ ಬರುತ್ತೇವೆ ಹಾಗೂ ನಾನು ಉರುಳುಸೇವೆ ಮಾಡುತ್ತೇನೆ ಎಂದು ಬರೆದಿದ್ದಾರೆ.
ಇನ್ನೊಂದು ಅನಾಮಧೇಯ ಚೀಟೆಯಲ್ಲಿ ನಮ್ಮ ಹಿಂದಿನ ಕೋರಿಕೆಯನ್ನು ಈಡೇರಿಸಿ ನಮ್ಮ ಸಂಬಂಧವನ್ನು ಕೊನೆಯವರೆಗೂ ಉಳಿಸಿಕೊಟ್ಟಿದ್ದೀಯಾ, ನಿಮ್ಮನ್ನು ನಂಬಿದ ನಮ್ಮನ್ನು ಸಾರ್ಥಕ ಗೊಳಿಸಿದ್ದೀರಿ ನಿಮಗೆ ನಮ್ಮ ಕಡೆಯಿಂದ ಅನಂತ ಅನಂತ ಪ್ರಣಾಮಗಳು ಕೊನೆ ಉಸಿರಿರುವರೆಗೂ ನಿಮ್ಮ ಭಕ್ತರಾಗಿ ಸೇವೆ ಮಾಡುತ್ತೇನೆ ಜೈ ಕೊಟ್ಟೂರು ಮಹಾರಾಜ್ ಎಂದು ಬರೆದಿದ್ದಾರೆ.
ಒಬ್ಬ ಮಹಿಳೆ  ನನ್ನ ಮಗ ಆರೋಗ್ಯವಂತ, ಬುದ್ದಿವಂತ, ಆದರೆ ನನ್ನ ಮಾತು ಕೇಳುತ್ತಿಲ್ಲ, ಮುಂದಿನ ದಿನಗಳಲ್ಲಿ ನನ್ನ ಮಾತನ್ನು ಕೇಳುವಂತೆ ಮಾಡು ತಂದೆ, ನನ್ನ ಗಂಡ ಚೆನ್ನಾಗಿರಲಿ ನನ್ನ ಕಾಡುವ ಜನರು ನನ್ನಿಂದ ದೂರ ಆಗಲಿ, ಮಗನ ಕಷ್ಟ ದೂರ ಮಾಡು ಭಗವಂತ ಎಂದು  ಚೀಟಿಯಲ್ಲಿ ಬರೆದಿದ್ದಾಳೆ.