ಕೊಟ್ಟೂರು ಉದ್ಯಮಿಯ ಅಪಹರಣ ಪ್ರಕರಣ 7 ಜನ ಬಂಧನ 16.52 ಲಕ್ಷ ರೂ ವಶ


(ಸಂಜೆವಾಣಿ ವಾರ್ತೆ)
ಕೊಟ್ಟೂರು ಜು 22 : ಇಲ್ಲಿನ ಉದ್ಯಮಿಯನ್ನು ಅಪಹರಣ ಮಾಡಿ 20 ಲಕ್ಷರೂ ಪಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 24 ಗಂಟೆಗಳಲ್ಲಿ 7
ಜನ ಅಪಹರಣಕಾರರನ್ನು ಬಂಧಿಸಿ ಅವರಿಂದ 16.52 ಲಕ್ಷ ರೂ ಹಣ ಜಪ್ತಿ ಮಾಡಿದ್ದಾರೆ.

ಮೊನ್ನೆ ಬೆಳಿಗ್ಗೆ 11-30 ಕ್ಕೆ ಕೊಟ್ಟೂರು ಪಟ್ಟಣದಲ್ಲಿ ಟೈಲರಿಂಗ್ ಕೆಲಸ ಮತ್ತು ರಿಯಲ್
ಎಸ್ಟೇಟ್ ವಹಿವಾಟು ನಡೆಸುತ್ತಿದ್ದ ಉದ್ಯಮಿ ಹಾಲೇಶ ಅಂಗಡಿಗೆ ಅಪರಿಚಿತರು, ನಿವೇಶನಗಳನ್ನು ಖರೀದಿಸುವ ನೆಪದಲ್ಲಿ ಬಂದು ನಿವೇಶನ ಖರೀದಿಸುವುದಾಗಿ ನಂಬಿಸಿ,
ಅವರು ತಂದಿದ್ದ ಕಾರಿನಲ್ಲಿ ಕರೆದುಕೊಂಡು ಹೋಗಿ 80 ಲಕ್ಷ ರೂಪಾಯಿಗಳ ಹಣಕ್ಕೆ ಬೇಡಿಕೆ ಇಟ್ಟಿದ್ದರು.

ಅಪಹರಣಕ್ಕೊಳಗಾದ ಹಾಲೇಶ ಪ್ರಾಣ ಬೆದರಿಕೆಗೆ ಹೆದರಿ 20 ಲಕ್ಷ ರೂಪಾಯಿಗಳನ್ನು ಕೊಡುವುದಾಗಿ ಒಪ್ಪಿಕೊಂಡು
ತನ್ನ ಅಳಿಯ ವೀರೇಶ ಅವರಿಗೆ ಫೋನ್ ಮಾಡಿ ಹಣ ಜೋಡಿಸಿಕೊಂಡು ಕೊಟ್ಟೂರು ಪಟ್ಟಣದ ಉಜ್ಜನಿ ರಸ್ತೆಯಲ್ಲಿರುವ ಸಿ.ಪಿ.ಇಡಿ
ಕಾಲೇಜ್ ಬಳಿ ಕರೆಯಿಸಿಕೊಂಡು ಆತನಿಂದ 20 ಲಕ್ಷ ರೂಪಾಯಿಗಳನ್ನು ಪಡೆದು ಅಂದೇ ರಾತ್ರಿ 7-30 ಗಂಟೆಗೆ ಅಪಹೃತನನ್ನು ಬಿಟ್ಟು ಹೋಗಿದ್ದರು.
ಈ ಬಗ್ಗೆ ಕೊಟ್ಟೂರು ಪೊಲೀಸರು ನಿನ್ನೆ ಪ್ರಕರಣ ದಾಖಲಿಸಿಕೊಂಡು. ಪ್ರಕರಣದ ವರದಿಯಾದ 24 ಗಂಟೆಯೊಳಗೆ ಆರೋಪಿಗಳಾದ ದಾವಣಗೆರೆಯ
ಮಂಜು ಅಲಿಯಾಸ್ ಇಡ್ಲಿ ಮಂಜು(26), ಶಾಂತಕುಮಾರ(24), ರಾಕೇಶ (19), ಜಗಳೂರಿನ ಚಿರಾಗ್(19), ರಾಣಿಬೆನ್ನೂರಿನ ಶಿವಕುಮಾರ (21), ರಾಹುಲ್ ಕಂದಗಲ್ಲು(21), ಜಗಳೂರು ಅಲ್ತಾಫ್ (23) ಅವರನ್ನು

ಬಂಧಿಸಿ ಅವರಿಂದ 16.52 ಲಕ್ಷ
ರೂಪಾಯಿಗಳನ್ನು ವಶಪಡಿಸಿಕೊಂಡಿದೆ. ಕೃತ್ಯ ಸಮಯದಲ್ಲಿ ಕಾರ್,‌ ಕೃತ್ಯವೆಸಗಲು ಉಪಯೋಗಿಸಿದ 5 ಮೊಬೈಲ್ ಫೋನ್‌ಗಳು, 2 ಮಚ್ಚು, 2 ಚಾಕುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆಂದು
ಎಸ್ಪಿ ಮತ್ತು ಡಿವೈಎಸ್ಪಿ ತಿಳಿಸಿದ್ದಾರೆ.