ಕೊಟ್ಟೂರು:ಸರಳ ‘ಈದ್ ಉಲ್ ಫಿತ್ರ್’ ಆಚರಣೆ

ಕೊಟ್ಟೂರು ಮೇ 14. ಲಾಕ್‌ಡೌನ್ ಮತ್ತು ಸರ್ಕಾರದ ಆದೇಶದಂತೆ ತಾಲೂಕಿನ ಮುಸ್ಲಿಮರು ಸರಳವಾಗಿ ಈದ್‌ ಉಲ್ ಫಿತ್ರ್ ಆಚರಿಸಿದರು.
ಪ್ರತಿ ವರ್ಷ ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿ, ಸಿಹಿತಿಂಡಿ ತಿಂದು ತಕ್ಬೀರ್‌ನ ಧ್ವನಿ ಮೊಳಗಿಸುತ್ತಾ ಸಾಲಾಗಿ ಮಸೀದಿ ಅಥವಾ ಈದ್ಗಾಗಳಿಗೆ ತೆರಳಿ ‘ಈದ್ ನಮಾಝ್’ ಮಾಡುವುದು ಸಾಮಾನ್ಯ. ಈದ್ ಖುತ್ಬಾ ಆಲಿಸುವುದು, ಪರಸ್ಪರ ಆಲಿಂಗಿಸಿ, ಯೋಗಕ್ಷೇಮ ವಿಚಾರಿಸುವುದು, ಮಾತು ಬಿಟ್ಟವರನ್ನು ಹುಡುಕಿಕೊಂಡು ಹೋಗಿ ಮಾತನಾಡಿಸುವುದು, ಖಬರಸ್ಥಾನಗೆ ಭೇಟಿ ನೀಡುವುದು, ಸಾಮೂಹಿಕ ಝಿಯಾರತ್ ಮಾಡುವುದು, ನೆರೆಮನೆ ಮತ್ತು ಸಂಬಂಧಿಕರ ಮನೆಗೆ ಸೌಹಾರ್ದ ಭೇಟಿ ನೀಡುವುದು, ಸಿಹಿತಿಂಡಿ ಹಂಚುವುದು, ಈದ್ ಹಣ ವಿತರಿಸುವುದು, ಸ್ವದಕಾ ನೀಡುವುದು, ವಿಶೇಷ ಅಡುಗೆ ತಯಾರಿಸಿ ರುಚಿ ಸವಿಯುವುದು ಇತ್ಯಾದಿ ಈ ಹಬ್ಬದ ವಿಶೇಷತೆ.
ಆದರೆ ಕಳೆದ ಬಾರಿಯಂತೆ ಈ ವರ್ಷವೂ ಲಾಕ್‌ಡೌನ್‌ನಿಂದಾಗಿ ಯಾರೂ ಮಸೀದಿ, ಈದ್ಗಾದತ್ತ ತೆರಳಲಿಲ್ಲ, ಖಬರಸ್ಥಾನ ಭೇಟಿ ನೀಡಲಿಲ್ಲ. ಸಾರ್ವಜನಿಕವಾಗಿ ತಕ್ಬೀರ್ ಮೊಳಗಿಸಲಿಲ್ಲ. ಕೆಲವರು ಲಾಕ್‌ಡೌನ್ ಮುಂಚೆಯೇ ಖರೀದಿಸಿದ್ದ ಹೊಸ ಬಟ್ಟೆಯನ್ನು ಧರಿಸಿದ್ದರೆ, ಇನ್ನೂ ಕೆಲವರು ಸಾದಾ ಬಟ್ಟೆ ಧರಿಸಿ ಸರಳತೆ ಮೆರೆದರು. ಬಟ್ಟೆಬರೆಗಾಗಿ ಮೀಸಲಿಟ್ಟ ಹಣವನ್ನು ಸಾರ್ವಜನಿಕರಿಗೆ ಉಪಯುಕ್ತವಾಗುವ ವಸ್ತುಗಳ ಖರೀದಿಗೆ ಹಸ್ತಾಂತರಿಸಿದರು.