ಕೊಟ್ಟೂರಿನಲ್ಲಿ ದಲಿತರೆಂದರೆ ಬಾಡಿಗೆ ಮನೆ ಕೊಡುತ್ತಿಲ್ಲ, ಇನ್ನು ನಿಲ್ಲದ ಅಸ್ಪೃಶ್ಯತೆ

.ಸಂಜೆವಾಣಿ ವಾರ್ತೆಕೂಡ್ಲಿಗಿ. ಆ.29 :- ವೈಜ್ಞಾನಿಕವಾಗಿ ಚಂದ್ರಯಾನ ನಡೆಸಿ ಇಡೀ ಜಗತ್ತಿಗೆ ಮಾದರಿಯಾಗಿರುವ ದೇಶ, ಜಾತ್ಯತೀತ ನೆಲೆಗಟ್ಟಿನಲ್ಲಿ ಸಮಾನತೆ ಕಾಪಾಡಲು ಹೊರಟು ಪಂಚಗಣಾಧೀಶರಲ್ಲಿ  ಒಬ್ಬರಾಗಿರುವ ಶ್ರೀಗುರು ಕೊಟ್ಟೂರೇಶ್ವರ ನೆಲೆಸಿದ ನೆಲೆಬೀಡಾದ ಕೊಟ್ಟೂರು ಪಟ್ಟಣದಲ್ಲಿ ಇನ್ನೂ  ಅಸ್ಪೃಶ್ಯತೆಯ ತಾಂಡವ, ದಲಿತರೆಂದರೆ ಇಲ್ಲಿ ಬಾಡಿಗೆ ಮನೆ ಕೊಡುತ್ತಿಲ್ಲ ಅಲ್ಲದೆ ದಲಿತರು ಮಾರುವ ಸೈಟುಗಳನ್ನು ಸಹ ಖರೀದಿ ಮಾಡುತ್ತಿಲ್ಲ ಇದರಿಂದಾಗಿ ದಲಿತರಿಗೆ ಕಾನೂನು ರೀತಿ ನ್ಯಾಯಸಿಗುವಂತಾಗಬೇಕು ಎಂದು ದಲಿತರು ತಮ್ಮ ಅಳಲನ್ನು ತೋಡಿಕೊಂಡರು.ಕೂಡ್ಲಿಗಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ನಡೆದ ಕೂಡ್ಲಿಗಿ ಡಿವೈಎಸ್ಪಿ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ಠಾಣಾ ವ್ಯಾಪ್ತಿಯ ದಲಿತರ ಸಮಸ್ಯೆ ಆಲಿಸುವ  ದಲಿತರ ಸಭೆಯಲ್ಲಿ ದಲಿತ ಸಂಘಟಕರು ಮಾತನಾಡುತ್ತ ಕೊಟ್ಟೂರು ವಿದ್ಯಾವಂತರ ಪಟ್ಟಣವಾಗಿದ್ದರೂ ಅಲ್ಲಿ ಅಸ್ಪೃಶ್ಯತೆ ಇರುವುದು ವಿಷಾದವೇ ಸರಿ ಇಂತಹ ಸ್ಥಳದಲ್ಲಾಗುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಸಂಘಟಕರಾದ ಹೊನ್ನೂರಪ್ಪ, ಈಶಪ್ಪ, ಕುಮಾರ, ದುರುಗೇಶ ಹಾಗೂ ಇತರರು  ಮನವಿ ಮಾಡಿದರು ಅದಕ್ಕೆ ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ ಮೇಲಾಧಿಕಾರಿಗಳ ಜೊತೆ ಹಾಗೂ ಆ ಠಾಣಾ ವ್ಯಾಪ್ತಿಯಲ್ಲಿ ಸಂಪೂರ್ಣ ವಿವರ ಪಡೆದು ಸಮಸ್ಯೆಯನ್ನು ಸರಿಪಡಿಸುವ ಬಗ್ಗೆ ತಿಳಿಸಿದರು.ಗ್ರಾಮೀಣ ಭಾಗದಲ್ಲಿ ಶಾಲಾ ಕಾಲೇಜಿಗೆ ತೆರಳುವ ಅನೇಕ ದಲಿತರಾಧೀಯಾಗಿ ಹೋಗುವ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಸಾರಿಗೆ ಸಂಸ್ಥೆ ಬಸ್ಸುಗಳು ಸಂಚಾರ ವ್ಯವಸ್ಥೆ ಕಲ್ಪಿಸಲಾಗಿಲ್ಲ ಇದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಇದನ್ನು ಸರಿಪಡಿಸಬೇಕಿದೆ ಎಂದು ಹೊಸಹಳ್ಳಿ ಭಾಗದ ಓಬಣ್ಣ, ಕೂಡ್ಲಿಗಿ ಕಾವಲ್ಲಿ ಶಿವಪ್ಪನಾಯಕ ಸೇರಿದಂತೆ ಇತರರ ಪ್ರಶ್ನೆಗೆ ಕೂಡ್ಲಿಗಿ ಡಿವೈಎಸ್ಪಿ ಬಸ್ಸುಗಳ ಸಮಸ್ಯೆ ಪರಿಹಾರಕ್ಕೆ ತಕ್ಷಣ ಕೂಡ್ಲಿಗಿ ಘಟಕಾಧಿಕಾರಿಗಳನ್ನು ಕರೆಸಿ ಸಮಸ್ಯೆ ಇತ್ಯಾರ್ಥಕ್ಕೆ ಮುಂದಾದರು.ದಲಿತ ಮುಖಂಡ ಬಂಡೆರಾಘವೇಂದ್ರ, ಕಂದಗಲ್ಲು ಪರಶುರಾಮ ಇತರರು ಮಾತನಾಡಿ ಗ್ರಾಮಗಳ ಬೀಟ್ ಪೊಲೀಸರು ಅಲ್ಲಿನ ದಲಿತ ಕಾಲೋನಿಗಳಿಗೆ ಹೋಗಿ ಸಮಸ್ಯೆ ಆಲಿಸಿ ಅಧಿಕಾರಿಗಳ ಗಮನಕ್ಕೆ ತರಬೇಕು ಮತ್ತು ದಲಿತರ ಸಭೆಗಳಿಗೆ ಎಲ್ಲಾ ಇಲಾಖಾ ಅಧಿಕಾರಿಗಳನ್ನು ಸೇರಿಸಿ ಸಭೆ ನಡೆಸಿದಲ್ಲಿ ದಲಿತರ ಅನೇಕ ಸಮಸ್ಯೆಗೆ ಪರಿಹಾರ ಸಿಗಬಲ್ಲದು ಎಂದಾಗ ಮುಂದಿನ ದಿನದಲ್ಲಿ ಈ ರೀತಿ ನಡೆಸುವ ಬಗ್ಗೆ ಡಿವೈಎಸ್ಪಿ ತಿಳಿಸಿದರು.ಉಜ್ಜಿನಿ ಗ್ರಾಮದಲ್ಲಿ ದಲಿತರು ಹಾಗೂ ಅನ್ಯ ಜಾತಿಯರ ನಡುವೆ ಜಗಳ ಶುರುವಾಗಿ ಇನ್ನೇನು ಎಫ್ ಐಆರ್ ಆಗುವ ಮುನ್ಸೂಚನೆ ಅರಿತ ಕೂಡ್ಲಿಗಿ ಶಾಸಕರು ಎರಡು ಸಮುದಾಯಕ್ಕೆ ಬುದ್ದಿಮಾತು ಹೇಳಿ ಸರಿಪಡಿಸಿದ್ದು ಅಲ್ಲದೆ ಕ್ಷೇತ್ರದ ಶಾಸಕರ ಜನಪರ ಕಾಳಜಿ ಎತ್ತಿ ತೋರಿಸಿದೆ ಎಂದು ಉಜ್ಜಿನಿ ಭಾಗದ ದಲಿತ ಮುಖಂಡರು ತಿಳಿಸಿ ಯಾರೋ ಒಂದಿಬ್ಬರು ಮಾಡುವ ಕುತಂತ್ರಕ್ಕೆ ಜಗಳ ಪ್ರಾರಂಭವಾಗುತ್ತಿದ್ದೂ ಅವರನ್ನು ಕರೆಸಿ ಕಾನೂನಾತ್ಮಕವಾಗಿ ಬುದ್ದಿ ಕಲಿಸಬೇಕು ಎಂದು ತಿಳಿಸಿದಾಗ ಅದನ್ನು ಸರಿಮಾಡುವ ಬಗ್ಗೆ ಡಿವೈಎಸ್ಪಿ ತಿಳಿಸಿದರು.ಲೋಕಿಕೆರೆಯಲ್ಲಿ ದಲಿತರ ಜಾಗ ಒತ್ತುವರಿಯಾಗಿದೆ ಅದನ್ನು ಕಾನೂನಾತ್ಮಕವಾಗಿ ಸರಿಪಡಿಸಿಕೊಡುವಂತೆ ಅಲ್ಲಿನ ದಲಿತ ಮುಖಂಡರು ತಿಳಿಸಿದ್ದರಿಂದ ಅದರ ದಾಖಲಾತಿ ನೋಡಿ ನಂತರ ಸರಿಪಡಿಸುವ ಬಗ್ಗೆ ಪೊಲೀಸ್ ಅಧಿಕಾರಿಗಳು ತಿಳಿಸಿದರು. ಕೆಲವು ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ಜೋರಾಗಿದ್ದು ಮಹಿಳೆಯರು ಸಹ ಸೇವನೆಗೆ ಮುಂದಾಗಿದ್ದಾರೆ ಅಕ್ರಮ ಮದ್ಯ ಸಾಗಾಟ ಮಾಡುವವರನ್ನು ವಶಕ್ಕೆ ಪಡೆದು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಂಘಟಕರ ಮನವಿ ಆಲಿಸಿದ ಅಧಿಕಾರಿಗಳು ಸೂಕ್ಷ್ಮವಾಗಿ ನಮ್ಮ ಗಮನಕ್ಕೆ ತಂದಲ್ಲಿ ಅದರ ನಿಯಂತ್ರಣ ಮಾಡುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಡಿ ಹೆಚ್. ದುರುಗೇಶ ಜಗನ್ನಾಥ, ಕಾವಲ್ಲಿ ಶಿವಪ್ಪನಾಯಕ, ಕಂದಗಲ್ಲು ಪರಶುರಾಮ, ಕೂಡ್ಲಿಗಿ ಅಜೇಯ, ಕೆ ಮೂಗಪ್ಪ, ಬಡೇಲಡಕು ದುರುಗೇಶ, ಮಾಕನಡಕು ಕುಮಾರ, ವಸಂತ, ಜೂಮ್ಮೊಬನಹಳ್ಳಿ ಹೊನ್ನೂರಪ್ಪ, ಎಸ್ ಸುರೇಶ, ಈಶಪ್ಪ ಸಿದ್ದಾಪುರ, ಓಬಣ್ಣ, ಬಣವಿಕಲ್ಲು ಚೌಡೇಶ, ಹಿರೇಹೆಗ್ದಾಳ್ ನಾಗರಾಜ, ಚೌಡಪ್ಪ  ಟಿ,   ಕುದುರೆಡವು ಕುಮಾರಸ್ವಾಮಿ, ನಾಗರಹುಣಿಸೆ ದುರುಗೇಶ, ಮರೀಸ್ವಾಮಿ, ಓಬಣ್ಣ ಸೇರಿದಂತೆ ಕೂಡ್ಲಿಗಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ ಹಾಗೂ ಮರಿಯಮ್ಮನಹಳ್ಳಿ ಠಾಣಾ ವ್ಯಾಪ್ತಿಯ ದಲಿತ ಮುಖಂಡರು ಸಭೆಯಲ್ಲಿ ಹಾಜರಿದ್ದು ದಲಿತರ ಸಮಸ್ಯೆ ಕುರಿತಾಗಿ ಪ್ರಶ್ನಿಸಿ ಅದಕ್ಕೆ ಉತ್ತರ ಪಡೆದುಕೊಂಡರು. ದಲಿತರ ಹಿಂದಿನ ಸಭೆಯ ನಡುವಳಿ ಓದಿ ಇತ್ಯಾರ್ಥವಾಗಿರುವ ಕುರಿತು ವಿವರಣೆ ನೀಡಿದರು.ಕೂಡ್ಲಿಗಿ ಡಿವೈ ಎಸ್ ಪಿ ಮಲ್ಲೇಶಪ್ಪ ದಲಿತ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕೂಡ್ಲಿಗಿ ಸಿಪಿಐ ಸುರೇಶ ಎಸ್ ತಳವಾರ ಉಪಸ್ಥಿತರಿದ್ದು ಕೂಡ್ಲಿಗಿ ಪಿಎಸ್ಐ ಧನುಂಜಯ ಸ್ವಾಗತಿಸಿ ವಂದಿಸಿದರು