ಕೊಟ್ಟಿಗೆಗೆ ಬೆಂಕಿ ೨ ಜಾನುವಾರು ಸಜೀವ ದಹನ

ಮಧುಗಿರಿ, ನ. ೯- ನಡುರಾತ್ರಿ ಕೊಟ್ಟಿಗೆಗೆ ಬೆಂಕಿ ಬಿದ್ದು ೨ ಜಾನುವಾರುಗಳು ಸಜೀವ ದಹನವಾಗಿರುವ ಘಟನೆ ತಾಲ್ಲೂಕಿನ ವೀರಣ್ಣನ ತಾಂಡದಲ್ಲಿ ನಡೆದಿದೆ.
ತಾಲ್ಲೂಕಿನ ವೀರಣ್ಣನತಾಂಡದ ಹನುಮಂತರಾಯಪ್ಪ ಎಂಬುವರಿಗೆ ಸೇರಿದ ಮಿಶ್ರತಳಿ ಹಸು ಹಾಗೂ ಎತ್ತು ಬೆಂಕಿಗೆ ಆಹುತಿಯಾಗಿವೆ. ಕೊಟ್ಟಿಗೆಗೆ ಬೆಂಕಿ ಹೇಗೆ ಬಿದ್ದಿತು ಎಂಬ ಬಗ್ಗೆ ಕಾರಣ ತಿಳಿದು ಬಂದಿಲ್ಲ. ಆದರೆ ರಾಸುಗಳಿಗೆ ವಿಮೆ ಮಾಡಿಸಿದ ಕಾರಣ ಹೆಚ್ಚಿನ ಪರಿಹಾರ ಸಿಗುವುದಿಲ್ಲ. ಆದ್ದರಿಂದ ತಾಲ್ಲೂಕಿನಲ್ಲಿನ ಹೈನುಗಾರರು ತಮ್ಮ ರಾಸುಗಳಿಗೆ ಶೀಘ್ರವಾಗಿ ವಿಮೆ ಮಾಡಿಸಬೇಕು ಎಂದು ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ. ನಾಗಭೂಷಣ್ ತಿಳಿಸಿದ್ದಾರೆ.
ತಾಲ್ಲೂಕಿನಲ್ಲಿ ಈಗಾಗಲೇ ೨೦೧೯-೨೦ನೇ ಸಾಲಿನಲ್ಲಿ ೧೫೪ ಡೇರಿಗಳಿಂದ ೯೭೦೦ ಜಾನುವಾರುಗಳಿಗೆ ವಿಮೆ ಮಾಡಿದ್ದು, ೨೦೨೦-೨೧ನೇ ಸಾಲಿನಲ್ಲಿ ೬೩ ಡೇರಿಗಳಿಂದ ೬ ಸಾವಿರ ರಾಸುಗಳಿಗೆ ವಿಮೆ ಸೌಲಭ್ಯವನ್ನು ಕಲ್ಪಿಸಲಾಗಿದೆ. ಪ.ಜಾತಿ, ಪ.ಪಂಗಡದ ರೈತರಿಗೆ ಉಚಿತವಾಗಿ ವಿಮೆ ಮಾಡಿಸಬಹುದಾಗಿದ್ದು, ನೇರವಾಗಿ ಡೇರಿ ಕಾರ್ಯದರ್ಶಿಗಳನ್ನು ಸಂಪರ್ಕಿಸಿ ತಮ್ಮ ರಾಸುಗಳಿಗೆ ವಿಮೆ ಮಾಡಿಸಿಕೊಂಡು ಆಕಸ್ಮಿಕ ಅವಘಡ ಹಾಗೂ ಆರ್ಥಿಕ ನಷ್ಟದಿಂದ ಪಾರಾಗಬಹುದು ಎಂದು ತುಮುಲ್ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ರೈತರಲ್ಲಿ ಮನವಿ ಮಾಡಿದ್ದಾರೆ.