ಕೊಟ್ಟಮಾತನ್ನು ಈಡೇರಿಸಿದ ಬಜೆಟ್: ವೆಂಕಟೇಶ್ ಹೆಗಡೆ


(ಸಂಜೆವಾಣಿ ವಾರ್ತೆ)       
ಬಳ್ಳಾರಿ, ಜು.08:  ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ  ರಾಜ್ಯದ ಬಜೆಟ್ ಅತ್ಯಂತ ವೈಜ್ಞಾನಿಕ, ಆರ್ಥಿಕ ಸುಸ್ಥಿರತೆಯಿಂದ ಕೂಡಿದ್ದು.      ಕಾಂಗ್ರೆಸ್ ಪಕ್ಷ  ಚುನಾವಣೆ ಸಂದರ್ಭದಲ್ಲಿ ನೀಡಿದ ಐದು ಗ್ಯಾರಂಟಿಗಳ ಈಡೇರಿಕೆಗೆ ಅನುದಾನ ಮೀಸಲಿರಿಸುವುದಲ್ಲದೆ,
ಹಲವು ಪ್ರಗತಿ ಪರ ಯೋಜನೆಗಳಿಗೆ ಭರಪೂರ ಅನುದಾನ ಒದಗಿಸಿದೆ ಎಂದು ಕೆಪಿಸಿಸಿ ವಕ್ತಾರ ವೆಂಕಟೇಶ್ ಹೆಗಡೆ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಬಳ್ಳಾರಿ ಜಿಲ್ಲೆಗೆ ಏನನ್ನೂ ನೀಡದಿರುವ ಬಗ್ಗೆ ಪ್ರಸ್ತಾಪಿಸದೆ. ಕೇವಲ ಒಟ್ಟಾರೆ ಬಜೆಟ್ ಬಗ್ಗೆ ಹೇಳಿದ್ದಾರೆ.
.ಪ್ರತೀ ಜಿಲ್ಲಾ, ತಾಲ್ಲೂಕು ಕೇಂದ್ರದಲ್ಲಿ ಡಯಾಲಿಸಿಸ್ ಕೇಂದ್ರ ತೆರೆಯುವುದು. ಸರ್ಕಾರಿ ಶಾಲೆಗಳ ಉನ್ನತಿಗೆ ಬರೋಬ್ಬರಿ 550 ಕೋಟಿ ರೂ.ಗಳನ್ನು ವಿಶೇಷವಾಗಿ ಇರಿಸಿದೆ. ಇದರಲ್ಲಿ ಕೊಠಡಿ ನಿರ್ಮಾಣ, ಶೌಚಾಲಯ ನಿರ್ಮಾಣಕ್ಕೆ ಕ್ರಮ ವಹಿಸಲು ನಿರ್ಧರಿಸಿದೆ.
ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಹೆಸರಲ್ಲಿ ಹಠಾತ್ ಹೃದಯಾಘಾತ ತಡೆಯಲು ಪ್ರತೀ ಆಸ್ಪತ್ರೆಯಲ್ಲಿ ಎಇಡಿ ಕೇಂದ್ರ ತೆರೆಯಲು ಹಣ ಮೀಸಲು ಇಡಲಾಗಿದೆ. ಈ ಹಿಂದೆ ನಿಲ್ಲಿಸಲಾಗಿದ್ದ ವಿದ್ಯಾ ಸಿರಿ ಯೋಜನೆಯನ್ನು ಮತ್ತೆ ಜಾರಿಮಾಡಲಾಗಿದೆ.
ಸ್ವಿಗ್ಗಿ, ಅಮೆಜಾನ್‌ನಂತರ ಇ-ಕಾಮರ್ಸ್ನಲ್ಲಿ ವಸ್ತುಗಳನ್ನು ತಲುಪಿಸುವ ಕೆಲಸಮಾಡುವ ಹುಡಗರಿಗೆ 2 ಲಕ್ಷ ಅಪಘಾತ ವಿಮೆ, 2 ಲಕ್ಷ ರೂ. ಜೀವ ವಿಮೆ ಘೋಷಣೆಮಾಡಲಾಗಿದೆ.
ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಡಿ 118 ಗ್ರಾಮಗಳ 25 ಲಕ್ಷ ಮನೆಗಳಿಗೆ ಕುಡಿಯುವ ನೀರು ಒದಗಿಸಲು ಯೋಜಿಸಲಾಗಿದೆ.
4.42 ಕೋಟಿ ಕುಟುಂಬಗಳಿಗೆ ಈ ಪೈಕಿ ಕೇಂದ್ರ ಸರ್ಕಾರ ತನ್ನ ಪಟ್ಟಿಯಿಂದ ಕೈ ಬಿಟ್ಟ 40 ಲಕ್ಷ ಕುಟುಂಬಗಳಿಗೂ ಸೇರಿ 10 ಕೆಜಿ ಅಕ್ಕಿ ಕೊಡುವ ಭರವಸೆಯನ್ನು ಈಡೇರಿಸಲಾಗಿದೆ. ಬಡ, ಬಗ್ಗರಿಗೆ ಅನ್ನದ ತಾಣವಾಗಿರುವ ಇಂದಿರಾ ಕ್ಯಾಂಟೀನ್‌ಗಳಲ್ಲಿ ಹೊಸ ಮೆನು ಜೊತೆಗೆ ಇನ್ನೂ ಇತರೆ ಭಾಗಗಳಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲು 100 ಕೋಟಿ ರೂ. ಮೀಸಲಿಡಲಾಗಿದೆ.
ಗೃಹಜ್ಯೋತಿ, ಗೃಹ ಲಕ್ಷ್ಮಿ, ಶಕ್ತಿ ಯೋಜನೆ,ಅನ್ನಭಾಗ್ಯ, ಯುವ ನಿಧಿ ಯೋಜನೆಗಳಿಗೆ 52 ಸಾವಿರ ಕೋಟಿ ರೂ.ಗಳನ್ನು ಮೀಸಲು ಇಡುವ ಮೂಲಕ ಬಡ, ಮಧ್ಯಮ ವರ್ಗದ ಜನರಿಗೆ ಆಸರೆಯಾಗಿದ್ದಾರೆ.
ಕೇಂದ್ರ ಜಾರಿ ಮಾಡಿದ್ದ ನೂತನ ಶಿಕ್ಷಣ ನೀತಿ ಹಿಂಪಡೆಯಲಾಗಿದೆ. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಲಾಗಿದೆ. ಕೇಂದ್ರ ರಾಜ್ಯ ಸರ್ಕಾರಗಳು ಜಂಟಿಯಾಗಿ ಕೈಗೊಂಡ ಜಲಜೀವನ್ ಮಿಷನ್ ಯೋಜನೆಯ ಅನುಷ್ಠಾನದಲ್ಲಿ ಆದ ಲೋಪ ತಿಳಿಯಲು ತನಿಖೆ ನಡೆಸಲು ನಿರ್ಧರಿಸಲಾಗಿದೆ. ನೈತಿಕ ಪೊಲೀಸ್ ಗಿರಿ ಹೆಸರಲ್ಲಿ ಗುಂಡಾಗಿರಿ ಮಾಡುತ್ತಿದ್ದವರ ಮೇಲೆ ಕ್ರಮ ವಹಿಸಲು ಕಾನೂನು ತರುವ ಘೋಷಣೆ ಮಾಡಲಾಗಿದೆ.
ಕೃಷಿ ಭಾಗ್ಯ, ಹಾಸ್ಟೆಲ್ ಮಕ್ಕಳ ಕಿಟ್ ಭಾಗ್ಯ, ಮೊಟ್ಟೆ, ಚಿಕ್ಕಿ, ಬಾಳೆ ಹಣ್ಣು ನೀಡಿಕೆಗೆ ಮತ್ತೆ ಚಾಲನೆನೀಡುವ ಭರವಸೆ ನೀಡಲಾಗಿದೆ.
ಸಮಗ್ರ ಬೆಂಗಳೂರು ಅಭಿವೃದ್ಧಿಗೆ ಬರೋಬ್ಬರಿ 75 ಸಾವಿರ ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಇದೇ ರೀತಿ ಹೊಸ ತಾಲ್ಲೂಕುಗಳಲ್ಲಿ ಆಡಳಿತ ಭವನ ನಿರ್ಮಾಣ ಮಾಡಲು ಸಹ ಹಣ ಕೊಡಲಾಗಿದೆ.
ಯುವ ಪದವೀಧರರು, ಡಿಪ್ಲೊಮ ಪದವೀಧರರಿಗೆ ಕ್ರಮವಾಗಿ 3 ಸಾವಿರ, 1.5 ಸಾವಿ ರೂ. ಮಾಸಾಶನ ನೀಡಲು ನಿರ್ಧರಿಸಲಾಗಿದೆ.
ಹೀಗೆ ಸಾಲು ಸಾಲು ಉತ್ತಮ ಅಂಶಗಳನ್ನು ಈ ಬಜೆಟ್‌ನಲ್ಲಿ ಘೋಷಿಸಲಾಗಿದೆ. ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಬಜೆಟ್ ಸಂಪೂರ್ಣ ಸಹಕಾರಿ ಆಗಲಿದೆ ಎಂದಿದ್ದಾರೆ.