ಕೊಚ್ಚಿ ಹೋದ ಬೆಳೆ


ಲಕ್ಷ್ಮೇಶ್ವರ,ಸೆ.7: ತಾಲೂಕಿನಾದ್ಯಂತ ಸೋಮವಾರ ಸಂಜೆ ಸುರಿದ ಧಾರಾಕಾರ ಮಳೆ ಅನೇಕ ಅವಾಂತರಗಳನ್ನು ಸೃಷ್ಟಿಸಿದ್ದು ಮತ್ತೆ ರೈತ ಕಣ್ಣೀರು ಸುರಿಸುವಂತೆ ಮಾಡಿದೆ.
ತಾಲೂಕಿನ ಉಳ್ಳಟ್ಟಿ ಗ್ರಾಮದ ರೈತ ಬಸವಣ್ಣಪ್ಪ ಹಂಚಿನಾಳ ತಮ್ಮ ಎರಡು ಎಕರೆ ಹೊಲದಲ್ಲಿ ಬಿತ್ತಿ ಬೆಳೆದಿದ್ದ ಶೇಂಗಾ ಫಸಲನ್ನು ಜಮೀನಿನಲ್ಲಿ ಸಂಗ್ರಹಿಸಿಟ್ಟಿದ್ದರು ಆದರೆ ಸೋಮವಾರ ಸಂಜೆ ರಣಮಳೆಗೆ ಭಾರಿ ಪ್ರಮಾಣದಲ್ಲಿ ಹಳ್ಳದ ನೀರು ಹೊಲದಲ್ಲಿ ನುಗ್ಗಿ ಬೆಳೆಯನ್ನು ಸ್ವಾಹಾ ಮಾಡಿದೆ.
ಶೇಂಗಾ ಫಸಲು ಹಳ್ಳದ ನೀರಿನಲ್ಲಿ ಕೊಚ್ಚಿ ಹೋಗಿ ಅಲ್ಲಲ್ಲಿ ಕಂಠಿಗಳಲ್ಲಿ ಸಿಕ್ಕಿಕೊಂಡಿದೆ. ಕಣ್ಣೆದುರೇ ಬೆಳೆದ ಬೆಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿರುವುದನ್ನು ಕಂಡು ರೈತ ಕಣ್ಣೀರು ಹಾಕಿದ್ದಾನೆ.
ಈ ಕುರಿತು ತಾಲೂಕ ಕಿಸಾನ್ ಸಂಘದ ಅಧ್ಯಕ್ಷರಾದ ಟಾಕಪ್ಪ ಸಾತಪೂತೆ ಅವರು ಮಾತನಾಡಿ ರೈತನಿಗಾಗಿರುವ ಈ ಹಾನಿಯನ್ನು ಕೃಷಿ ಇಲಾಖೆಯವರು ವಿಶೇಷ ಪ್ರಕರಣವೆಂದು ಪರಿಗಣಿಸಿ ಹೆಚ್ಚಿನ ಪ್ರಮಾಣದಲ್ಲಿ ಪರಿಹಾರ ನೀಡಬೇಕು ಎಂದು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.