ಕೊಚ್ಚಿಹೋದ ಸೇತುವೆ ದುರಸ್ತಿ ಮಾಡಿ

ಕಮಲನಗರ:ಎ.27: ತಾಲ್ಲೂಕು ಸಮೀಪದ ದಾಬಕಾ(ಸಿ) ಹೋಬಳಿ ವ್ಯಾಪ್ತಿಯಲ್ಲಿ ಬರುವ ಚಿಕ್ಲಿ(ಯು) ಗ್ರಾಮದಿಂದ ಚೋಂಡಿ ಮುಖ್ಖೇಡ ಗ್ರಾಮದ ಮಧ್ಯೆ ಬರುವ ಸೇತುವೆ ಅಧಿಕ ಮಳೆ ನೀರು ಮತ್ತು ಹಳ್ಳದ ನೀರು ಹರಿದು ಬಂದ ಪರಿಣಾಮ ಕೊಚ್ಚಿಕೊಂಡು ಹೋಗಿದೆ.

ಸೇತುವೆಯಲ್ಲಿ ದೊಡ್ಡ ದೊಡ್ಡ ತಗ್ಗುಗಳು ಸೃಷ್ಟಿಯಾಗಿ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಚೋಂಡಿ ಮುಖ್ಖೇಡ ಗ್ರಾಮದ ಯುವಕನೊಬ್ಬ ಕಳೆದ ಕೆಲ ದಿನಗಳ ಹಿಂದೆ ಬೈಕ್‍ನಿಂದ ಬಿದ್ದು ಮೃತಪ‌ಟ್ಟಿದ್ದಾರೆ. ರಾತ್ರಿ ಹೊತ್ತು ಈ ರಸ್ತೆಯಲ್ಲಿ ಸಂಚರಿಸುವುದು ಅಪಾಯ.

ಚೋಂಡಿ ಮುಖ್ಖೇಡ ಬೀದರ್ ಜಿಲ್ಲೆ ಕಮಲನಗರ ತಾಲ್ಲೂಕಿನ ಶ್ರೀಲಂಕಾ ಎಂದೇ ಹೆಸರುವಾಸಿಯಾಗಿದ್ದ ಗ್ರಾಮ. ಇಲ್ಲಿ ಈಗಲೂ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿವೆ. ಕಳೆದ ಕೆಲ ವರ್ಷಗಳ ಹಿಂದಷ್ಟೇ ಡಾಂಬರೀಕರಣ ಕಂಡಿದ್ದ ರಸ್ತೆ ಸಂಪೂರ್ಣ ಹದಗೆಟ್ಟಿದೆ.ಅರ್ಧ ಮಹಾರಾಷ್ಟ್ರ ಮತ್ತು ಅರ್ಧ ಕರ್ನಾಟಕದಲ್ಲಿ ಬರುತ್ತದೆ ಎಂದು ಗ್ರಾಮವನ್ನು ಕಡೆಗಣಿಸಲಾಗುತ್ತಿದೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಚೋಂಡಿ ಮುಖ್ಖೇಡ ಈ ಸೇತುವೆ ಕೊಚ್ಚಿಕೊಂಡು ಹೋದ ಮಣ್ಣಿನಿಂದಾಗಿ ತಗ್ಗು ಬಿದ್ದು 6 ತಿಂಗಳಾಯಿತು. ಈ ಕುರಿತು ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೂ ಯಾರು ಬಂದಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
ಹಗಲು ಹೊತ್ತಿನಲ್ಲಿಯೇ ಈ ರಸ್ತೆಯ ಮೂಲಕ ವೇಗದಿಂದ ಬಂದ ವಾಹನ ತಗ್ಗಿನಲ್ಲಿ ಬೀಳುವ ಸಾಧ್ಯತೆ ಹೆಚ್ಚು. ರಾತ್ರಿ ಹೊತ್ತಿನಲ್ಲಿ ವಾಹನ ಸವಾರರ ಕಷ್ಟ ಹೇಳತೀರದಾಗಿದೆ ಎನ್ನುತ್ತಾರೆ ಗ್ರಾ.ಪಂ ಸದಸ್ಯ ಸಂತೋಷ ಜಾಧವ.

ಇಲಾಖೆ ಅಧಿಕಾರಿಗಳು ತಕ್ಷಣ ದುರಸ್ತಿ ಮಾಡಬೇಕು. ವಿಳಂಬ ಮಾಡಿದರೆ ರಸ್ತೆಗಿಳಿದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಚೋಂಡಿ ಮುಖ್ಖೇಡ ಗ್ರಾಮಸ್ಥರು ಹಾಗೂ ದಾಬಕಾ ಗ್ರಾಮ ಪಂಚಾಯಿತಿ ಸದಸ್ಯ ಸಂತೋಷ ಜಾಧವ ಎಚ್ಚರಿಸಿದ್ದಾರೆ.