ಕೊಕೇನ್ ಸಾಗಾಣೆ ಪ್ರಕರಣ: ಒಲಿಂಪಿಯನ್ ಸಹಿತ ಇಬ್ಬರು ದೋಷಿ

ಬ್ರಿಸ್ಬೇನ್, ಎ.೨- ಬರೊಬ್ಬರಿ ೧೫೦ ಮಿಲಿಯನ್ ಡಾಲರ್ ಮೌಲ್ಯದ ಕೊಕೇನ್ ಸಾಗಾಟ ಪ್ರಕರಣದಲ್ಲಿ ಆಸ್ಟ್ರೇಲಿಯಾ ಒಲಿಂಪಿಯನ್ ನ್ಯಾಥನ್ ಬ್ಯಾಗೆಲಿ ಸಹಿತ ಇಬ್ಬರನ್ನು ದೋಷಿಗಳೆಂದು ನಿನ್ನೆ ಆಸ್ಟ್ರೇಲಿಯಾದ ಕೋರ್ಟ್ ತೀರ್ಪು ನೀಡಿದೆ. ತಪ್ಪಿತಸ್ಥರ ವಿರುದ್ಧ ಶಿಕ್ಷೆಯ ಪ್ರಮಾಣ ಸದ್ಯದಲ್ಲೇ ಪ್ರಕಟಗೊಳ್ಳಲಿದೆ ಎನ್ನಲಾಗಿದೆ.
೨೦೧೮ರಲ್ಲಿ ನಡೆದ ಪ್ರಕರಣದಲ್ಲಿ ಸಿನಿಮೀಯ ರೀತಿಯಲ್ಲಿ ಚೆಸ್ ಮಾಡಿ ನ್ಯಾಥನ್ ಸಹೋದರ ಡ್ರ್ಯು ಹಾಗೂ ಆಂಟನಿ ಡ್ರ್ಯಾಪರ್ ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದರು. ಮುಖ್ಯವಾಗಿ ಕಾರ್ಯಾಚರಣೆಯಲ್ಲಿ ನೌಕಾಪಡೆ ಹಾಗೂ ವಾಯುಪಡೆ ಭಾಗಿಯಾಗಿತ್ತು. ಡ್ರ್ಯು ಹಾಗೂ ಆಂಟನಿ ಇಬ್ಬರು ೧೧ ಗಂಟೆಗಳ ಪ್ರಯಾಣ ನಡೆಸಿ ಕೊಕೇನ್ ಅನ್ನು ವಿದೇಶಿ ಹಡಗಿಗೆ ಸರಬರಾಜು ಮಾಡುವ ಯತ್ನದಲ್ಲಿದ್ದರು. ಆದರೆ ಕ್ವೀನ್ಸ್‌ಲ್ಯಾಂಡ್ ಪೊಲೀಸರ ಕಣ್ಣಿಗೆ ಬಿದ್ದ ನಂತರ ಇವರನ್ನು ಚೇಸ್ ಮಾಡಿ ಬಂಧಿಸಲಾಗಿತ್ತು. ಅದರಲ್ಲೂ ಆಸ್ಟ್ರೇಲಿಯನ್ ಒಲಿಂಪಿಯನ್ ನ್ಯಾಥನ್ ಈ ಅಪರಾಧ ಕೃತ್ಯಕ್ಕಾಗಿಯೇ ಬೋಟ್‌ವೊಂದನ್ನು ಖರೀದಿಸಿದ್ದ. ಇದೀಗ ಆರೋಪಿಗಳ ವಿರುದ್ದದ ಆರೋಪ ಸಾಬೀತಾಗಿದ್ದು, ದೋಷಿಗಳೆಂದು ತೀರ್ಪು ನೀಡಲಾಗಿದೆ. ೨೦೦೪ರ ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ ನ್ಯಾಥನ್ ಬೆಳ್ಳಿಯ ಪದಕ ಗೆದ್ದುಕೊಂಡಿದ್ದ. ಅಲ್ಲದೆ ಮೂರು ಬಾರಿ ವಿಶ್ವ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದ.