ಕೊಂಬಾರು ಪತ್ರಕರ್ತರ ಗ್ರಾಮ ವಾಸ್ತವ್ಯದಿಂದ ಬಂತು ಮನೆಗೆ ವಿದ್ಯುತ್ ಬೆಳಕು

ಕಡಬ, ಮೇ ೨೭- ಕಡಬ ತಾಲೂಕು ಕೊಂಬಾರು ಗ್ರಾಮದಲ್ಲಿ ಈವರೆಗೆ ವಿದ್ಯುತ್ ಸಂಪರ್ಕವಿಲ್ಲದೆ ಬೆಳಕು ಕಾಣದ ಮನೆಯೊಂದಕ್ಕೆ ಇದೀಗ ವಿದ್ಯುತ್ ಭಾಗ್ಯ ಲಭಿಸಿದೆ. ಇದು ಪತ್ರಕರ್ತರ ಗ್ರಾಮ ವಾಸ್ತವ್ಯದ ಫಲಶ್ರುತಿ.
ಕೊಂಬಾರು ಗ್ರಾಮದ ಕೊಡೆಂಕಿರಿ ನಿವಾಸಿ ಶಿವರಾಮ ಗೌಡ ಎಂಬವರು ಇದೀಗ ವಿದ್ಯುತ್ ಸಂಪರ್ಕ ಕಂಡು ಸಂತೃಪ್ತರಾಗಿದ್ದಾರೆ. ಕಳೆದ ಏಳು ವರ್ಷಗಳಿಂದ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಿ ಎಂದು ಮೆಸ್ಕಾಂಗೆ ಮನವಿ ಮಾಡಿದ್ದರೂ ಕಾರಣಾಂತರಗಳಿಂದ ಅಲ್ಲಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಾಗಿರಲಿಲ್ಲ. ಗ್ರಾಮದ ಒಂದು ಮೂಲೆಯಲ್ಲಿರುವ ಈ ಒಂಟಿ ಮನೆಗೆ ಹಾದು ಹೋಗುವ ರಸ್ತೆಗೆ ಸಂಬಂಧಪಟ್ಟ ವಿವಾದ ಹೀಗೆ ಹತ್ತು ಹಲವು ಸಮಸ್ಯೆಗಳಿಂದ ಶಿವರಾಮ ಗೌಡ ಅವರ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಈವರೆಗೆ ಸಾಧ್ಯವಾಗಿಯೇ ಇರಲಿಲ್ಲ. ಇದರಿಂದ ತೀರಾ ನೊಂದಿದ್ದ ಅವರು ಕಳೆದ ಜನವರಿಯಲ್ಲಿ ಕಡಬ ತಾಲೂಕು ಪತ್ರಕರ್ತರ ಸಂಘದ ಆತಿಥ್ಯದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ದ.ಕ ಜಿಲ್ಲೆ ಇದರ ಸಹಯೋಗದಲ್ಲಿ ಕೊಂಬಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪತ್ರಕರ್ತರ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ನನ್ನ ಸಮಸ್ಯೆ ಪರಿಹರಿಸುವಂತೆ ಮನವಿ ಸಲ್ಲಿಸಿದ್ದರು. ಈ ಸಮಾರಂಭಕ್ಕೆ ಆಗಮಿಸಿದ್ದ ಮೆಸ್ಕಾಂ ಜಿಲ್ಲಾ ಅಧೀಕ್ಷ ಮಂಜಪ್ಪ ಅವರು ಈ ಸಮಸ್ಯೆ ಸೇರಿದಂತೆ ಗ್ರಾಮದಿಂದ ಬಂದ ಒಟ್ಟು ಮೂರು ಮೆಸ್ಕಾಂ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿದ್ದರು. ಅದರಂತೆ ಕಡಬ ಮೆಸ್ಕಾಂ ಅಧಿಕಾರಿಗಳಿಗೆ ಸಮಸ್ಯೆ ಪರಿಹರಿಸುವಂತೆ ಆದೇಶ ನೀಡಿದ್ದರು.
ಕಾರ್ಯಪ್ರವೃತ್ತರಾದ ಕಡಬ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸಜಿಕುಮಾರ್ ಅವರು ತಮ್ಮ ಸಹಾಯಕ ಅಧಿಕಾರಿಗಳೊಂದಿಗೆ ಕೊಡೆಂಕಿರಿಯ ಶಿವರಾಂ ಅವರಿಗೆ ವಿದ್ಯುತ್ ಸಂಪರ್ಕ ಕೊಡಿಸುವ ವಿಚಾರದಲ್ಲಿ ಮುತವರ್ಜಿ ವಹಿಸಿದರು. ಆದರೆ ಇಲ್ಲಿ ಕಂಬ ಹಾಕಿ ಲೈನ್ ಎಳೆಯಲು ಮತ್ತೆ ಭೂವಿವಾದ ಹುಟ್ಟಿಕೊಂಡಿತು. ಆಕ್ಷೇಪ , ಬರಹ ರೂಪಕ್ಕೆ ಬಂದು ತಕರಾರು ಜೀವಂತ ಉಳಿಯಿತು. ಇಲ್ಲಿ ರಾಜಕೀಯ ಒಳಬೇಗುದಿ ಕೂಡಾ ಸ್ವಲ್ಪ ಕೆಲಸ ಮಾಡಿತು. ಆದರೆ ದಕ್ಷ ಹಾಗೂ ಚಾಣಾಕ್ಷ ಅಧಿಕಾರಿ ಎಂದು ಸಾರ್ವಜನಿಕ ವಲಯದಲ್ಲಿ ಹೆಸರು ಮಾಡಿರುವ ಎಇಇ ಸಜಿಕುಮಾರ್ ಇತ್ತಂಡಗಳನ್ನು ಒಟ್ಟು ಸೇರಿಸಿ ರಾಜಿ ಪಂಚಾಯಿತಿಕೆ ನಡೆಸಿ ಪ್ರಕರಣವನ್ನು ಸೌಹಾರ್ದಯುತವಾಗಿ ಮಗಿಸುವಲ್ಲಿ ಯಶಸ್ವಿಯಾದರು. ಆರು ಕಂಬಗಳನ್ನು ಹಾಕಿ ಸುಮಾರು ೮೮.೦೦೦ ರೂ ವೆಚ್ಚದಲ್ಲಿ ವಿದ್ಯುತ್ ಸಂಪರ್ಕ ಮಾಡಿಕೊಟ್ಟಿದ್ದಾರೆ. ಸಮಸ್ಯೆಗಳನ್ನು ಬಗೆಹರಸಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಟ್ಟಿರುವ ಕಡಬ ಮೆಸ್ಕಾಂ ಅಧಿಕಾರಿಗಳ ಬಗ್ಗೆ ಕೊಂಬಾರು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದು. ಇನ್ನು ಮೆಸ್ಕಾಂಗೆ ಸಂಬಂಧಪಟ್ಟ ಎರಡು ಪ್ರಕರಣಗಳ ಬಗ್ಗೆ ಪತ್ರಕರ್ತರ ಗ್ರಾಮ ವಾಸ್ತವ್ಯದಲ್ಲಿ ಮನವಿ ಸಲ್ಲಿಸಲಾಗಿದೆ, ಅವುಗಳನ್ನೂ ತಕ್ಷಣ
ಬಗೆಹರಿಸಬೇಕು ಎಂದು ಅಗ್ರಹಿಸಿದ್ದಾರೆ.