ಕೊಂಬಳಿ ಗ್ರಾ.ಪಂ. ಕಚೇರಿಗೆ ಬೀಗ


ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಮಾ.14: ತಾಲೂಕಿನ ಕೊಂಬಳಿ ಗ್ರಾಮಸ್ಥರು ಪಿಡಿಓ ಬದಲಾವಣೆಗೆ ಆಗ್ರಹಿಸಿ ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸಿದರು.
ಕಳೆದ ಅನೇಕ ವರ್ಷಗಳಿಂದ ಈ ಪಂಚಾಯಿತಿಯಲ್ಲಿ ಪಿಡಿಓ ಆಗಿದ್ದ ಪ್ರಕಾಶ್ ಅವರನ್ನು 2022ರ ನವೆಂಬರ್‍ನಲ್ಲಿ ಬದಲಾಯಿಸಿ ಜ್ಯೋತಿ ದೊಡ್ಡಮನಿ ಅವರನ್ನು ನಿಯೋಜಿಸಲಾಗಿತ್ತು. ಆದರೆ, ಈಗ ಮತ್ತೆ ರಾಜಕೀಯ ಒತ್ತಡದಿಂದ ಪ್ರಕಾಶ್ ಅವರನ್ನು ಪಂಚಾಯಿತಿಗೆ ನಿಯೋಜಿಸಿರುವುದು ಸರಿಯಲ್ಲ. ಜ್ಯೋತಿ ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಅವರನ್ನೇ ಮುಂದುವರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಗ್ರಾಮಕ್ಕೆ ತಾ.ಪಂ. ಇಒ ಎಸ್.ಎಸ್.ಪ್ರಕಾಶ್ ಭೇಟಿ ನೀಡಿ ಸಮಸ್ಯೆ ಆಲಿಸಿದರು. ಎರಡು ದಿನಗಳಲ್ಲಿ ಬೇರೊಬ್ಬ ಪಿಡಿಒ ನಿಯೋಜಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು. ಆಗ ಗ್ರಾಮಸ್ಥರು ಕಚೇರಿಯ ಬೀಗ ತೆರೆದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಗಡ್ಡಿ ಶ್ರೀಧರ, ಗಡ್ಡಿ ಗುಡ್ಡಪ್ಪ, ಮಂಜುನಾಥ, ರಾಟಿ ಬಸವರಾಜಪ್ಪ, ಅಕ್ಕಿ ವೀರಣ್ಣ ಇತರರು ಇದ್ದರು.