ಕೊಂಡಾಪುರ: ನೂರಾರೂ ಭಕ್ತರ ಮಧ್ಯೆ ಸಾಗಿದ ಅದ್ಧೂರಿ ಬಸವೇಶ್ವರ ರಥೋತ್ಸವ

oppo_2

ಸೈದಾಪುರ:ಮೇ.12:ಸಮೀಪದ ಕೊಂಡಾಪುರ ಗ್ರಾಮದ ಆರಾಧ್ಯ ದೇವರೆನಿಸಿದ ಬಸವೇಶ್ವರ ಜಾತ್ರಾ ಮಹೋತ್ಸವವು ನೂರಾರೂ ಭಕ್ತರ ಮಧ್ಯೆ ಸಡಗರ ಸಂಭ್ರಮದೊಂದಿಗೆ ಶುಕ್ರವಾರ ಸಂಜೆ ಅದ್ಧೂರಿಯಾಗಿ ನೆರವೇರಿತು.
ಸಮೀಪದ ಗೂಡೂರ ಗ್ರಾಮದ ಭೀಮಾ ನದಿಯಲ್ಲಿ ಗಂಗಸ್ನಾನ ಮಾಡಿಕೊಂಡು ಬಂದು, ಶುಕ್ರವಾರ ವಿಶೇಷವಾದ ರುದ್ರಾಭಿಷೇಕ ಪೂಜೆ ಮತ್ತು ಗಣರಾಧನೆಯನ್ನು ನೆರವೇರಿಸಲಾಯಿತು. ಸಂಜೆ ನಂದಿಕೋಲು ಸೇವೆಯನ್ನು ನೆರವೇರಿಸಿ, ನಂತರ ಬಸವೇಶ್ವರ ಮೂರ್ತಿಯನ್ನು ರಥದಲ್ಲಿಟ್ಟು ವೈಭವದ ರಥೋತ್ಸವಕ್ಕೆ ಅದ್ದೂರಿಯಾಗಿ ಚಾಲನೆ ನೀಡಲಾಯಿತು. ವಿದ್ಯುತ್ ದ್ವೀಪಗಳು ಹಾಗೂ ಹೂ ಮಾಲೆಗಳಿಂದ ಶೃಂಗರಿಸಲ್ಪಟ್ಟಿದ್ದ ರಥದ ಹಗ್ಗವನ್ನಿಡಿದ ಭಕ್ತರು ಜೈ ಘೋಷಗಳನ್ನು ಮೊಳಗಿಸಿ ಎಳೆದರು. ದೇವಸ್ಥಾನದಿಂದ ಹೊರಟ ರಥೋತ್ಸವವವು ದೇವರ ಪಾದಗಟ್ಟೆಯನ್ನು ತಲುಪಿ ವಿಶೇಷ ಪೂಜೆ ಸಲ್ಲಿಸಿ ಹಿಂತುರಿಗಿ ಮೂಲಸ್ಥಾನಕ್ಕೆ ತಂದು ನಿಲ್ಲಿಸಲಾಯಿತು. ಯುವ ಸಮೂಹವು ರಥೋತ್ಸವ ಯುದ್ಧಕ್ಕೂ ಪಟಾಕಿ ಸಿಡಿಸಿ ಸಂಭ್ರಮಿಸಿದರೆ, ಮಹಿಳೆಯರು ಕಳಸವನ್ನು ಹಿಡಿದು ರಥದಯಿಂದೆ ಹೆಜ್ಜೆ ಹಾಕಿದರು. ನೆರೆಯ ಸೈದಾಪುರ, ಬಾಡಿಯಾಲ, ಗೂಡೂರ, ಸಂಗ್ವಾರ, ಮುನಗಲ್ ಯಾದಗಿರಿ ನಗರ ಸೇರಿದಂತೆ ನಾನಾ ಗ್ರಾಮಗಳ ನೂರಾರು ಭಕ್ತರು ಆಗಮಿಸಿ ದೇವರದರ್ಶನ ಪಡೆದು ಪುನಿತರಾದರು.