
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.09: ಜಿಲ್ಲೆಯ ಹಿರಿಯ ರಾಜಕಾರಣಿ, ಮಾಜಿ ಸಂಸದ ಕೆ.ಸಿ.ಕೊಂಡಯ್ಯ, ವಿಜಯನಗರ ಜಿಲ್ಲೆಯ ಪಕ್ಷದ ಜಿಲ್ಲಾಧ್ಯಕ್ಷ, ಎಸ್. ಸಿರಾಜ್ ಷೇಕ್ ಅವರು ಪಕ್ಷ ವಿರೋಧಿ ಚಟುವಟಿ ನಡೆಸಿದ್ದು ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುಂವಂತೆ ಕೆಎಂಎಫ್ ಅಧ್ಯಕ್ಷ, ಹಗರಿಬೊಮ್ಮನಹಳ್ಳಿಯ ಮಾಜಿ ಶಾಸಕ ಭೀಮಾನಾಯ್ಕ ಪಕ್ಷದ ಮುಖಂಡರಿಗೆ ಪತ್ರ ಬರೆದಿದ್ದಾರೆ.
ಕಳೆದ ಜುಲೈ 31 ರಂದು ಪತ್ರ ಬರೆದಿದ್ದರೂ ಈ ಬಗ್ಗೆ ಎಲ್ಲೂ ಚರ್ಚೆಯಾಗದ ಕಾರಣ ಈಗ ಮಾಧ್ಯಗಳಿಗೆ ಈ ದೂರನ್ನು ಬಿಡುಗಡೆ ಮಾಡಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಉಸ್ತುವಾರಿ ಸುರ್ಜಿವಾಲ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಹಾಗು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಕಾರ್ಯಾಧ್ಯಕ್ಷರುಗಳಿಗೆ ಈ ಪತ್ರ ಕಳಿಸಿದ್ದಾರಂತೆ.
ಕಳೆದ 2023 ರ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕೆ. ಸಿ. ಕೊಂಡಯ್ಯ ಹಾಗೂ ಎಸ್. ಸಿರಾಜ್‌ಷೇಕ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನನ್ನ ಗೆಲುವಿಗೆ ಶ್ರಮಿಸದೆ ಒಳಗೊಳಗೆ ಜೆಡಿಎಸ್ ಪಕ್ಷದ ಅಭ್ಯರ್ಥಿ ಪರವಾಗಿ ಕೆಲಸ ಮಾಡಿರುತ್ತಾರೆ.
ಕಾಂಗ್ರೆಸ್ ಪಕ್ಷದ ಒಬ್ಬ ಜವಾಬ್ದಾರಿಯುತ ವ್ಯಕ್ತಿಯಾಗಿ
ಕೆ ಸಿ ಕೊಂಡಯ್ಯ ಅವರು ಚುನಾವಣಾ ಪ್ರಚಾರದ ಅವಧಿಯಲ್ಲಿ ಹಗರಿಬೊಮ್ಮನಹಳ್ಳಿ ಜೆಡಿಎಸ್ ಅಭ್ಯರ್ಥಿಯ ಮನೆಗೆ ಭೇಟಿ ನೀಡಿ, ಅವರಿಗೆ ಹಣದ ಸಹಾಯವೂ ಒದಗಿಸಿರುವುದಾಗಿ ತಿಳಿದುಬಂದಿದ್ದು, ಇದಕ್ಕೆ ಪೂರಕವಾಗಿ ಈ ಬಾರಿಯ ಚುನಾವಣೆಯಲ್ಲಿ ಭೀಮನಾಯ್ಕರನ್ನು ಸೋಲಿಸುವುದೆ ನನ್ನ ಗುರಿ ಎಂದು ಹೇಳಿರುವ ವಿಡಿಯೋ ತುಣುಕೂ ಸಹ ಇದೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ನನ್ನ ಸೋಲಿಗೆ ಕೆ ಸಿ ಕೊಂಡಯ್ಯರವರು ನೇರವಾಗಿ ಕಾರಣವಾಗಿರುತ್ತಾರೆ.
ಇನ್ನು ಇವರುಗಳ ಜೊತೆಯಲ್ಲಿ ವಿಜಯನಗರ ಜಿಲ್ಲಾ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್. ಸಿರಾಜ್ ಷೇಕ್ ಇವರೂ ಸಹ ತಮ್ಮ ಈ ಹಿಂದಿನ ಹಳೆಯ ಚಾಳಿಯನ್ನೇ ಮುಂದುವರೆಸಿದ್ದು, ನೋಡುಗರ ಕಣ್ಣಿಗೆ ಕಾಂಗ್ರೆಸ್ ಪಕ್ಷದ ಕೆಲಸ ಮಾಡುವಂತೆ ನಟಿಸಿ, ಒಳಗೊಳಗೆ ಇವರು ಹಾಗೂ ಇವರ ಮಗ ಇಬ್ಬರೂ ತಮ್ಮ ತೋಟದ ಮನೆಗೆ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರನ್ನು ಕರೆಯಿಸಿಕೊಂಡು, ಈ ಬಾರಿಯ ಚುನಾವಣೆಯಲ್ಲಿ ಭೀಮನಾಯ್ಕ ಯಾವುದೇ ಕಾರಣಕ್ಕೂ ಗೆಲ್ಲಬಾರದು, ನೀವೆಲ್ಲರೂ ಜೆಡಿಎಸ್ ಅಭ್ಯರ್ಥಿಗೆ ಮತ ಹಾಕುವಂತೆ ಕರೆ ನೀಡಿರುವುದಾಗಿ ತಿಳಿದುಬಂದಿದೆ.
`ಇವರು ಪಕ್ಷ ವಿರೋಧಿ ಚಟುವಟಿಕೆ ಬಗ್ಗೆ ಈ ಹಿಂದೆಯೂ ನಾನು ಕಾಂಗ್ರೆಸ್ ಪಕ್ಷದ ನಾಯಕರುಗಳಿಗೆ ದೂರು ಸಲ್ಲಿಸಿದ್ದು, ಪಕ್ಷ ಯಾವುದೇ ಕ್ರಮ ಜರುಗಿಸದ ಕಾರಣ ಇವರ ಪಕ್ಷ ವಿರೋಧಿ ಚಟುವಟಿಕೆ 2023 ರ ಚುನಾವಣೆಯಲ್ಲಿಯೂ ಸಹ ಮುಂದಿವರೆದಿದ್ದು, ಈ ಬಾರಿಯ ನನ್ನ ಚುನಾವಣಾ ಸೋಲಿಗೆ ಇವರೂ ಸಹ ನೇರವಾಗಿ ಕಾರಣರಾಗಿರುತ್ತಾರೆ. ಚುನಾವಣಾ ಸಂದರ್ಭದಲ್ಲಿ ಇವರ ನಿಷ್ಠೆ ಯಾವ ಪಕ್ಷದ ಪರವಾಗಿ ಇರುತ್ತೆ ಎನ್ನುವುದು ತಿಳಿಯುವುದಿಲ್ಲ.
ಆದ್ದರಿಂದ ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಮತ್ತೊಬ್ಬರ ರಾಜಕೀಯ ಭವಿಷ್ಯ ಮತ್ತು ಪಕ್ಷವನ್ನೇ ಬಲಿ ಕೊಡುವ ಇವರ ವಿರುದ್ಧ ಸೂಕ್ತ ವಿಚಾರಣೆಯನ್ನು ನಡೆಸಿ, ಇವರಿಬ್ಬರ ವಿರುದ್ಧ ಸೂಕ್ತ ಶಿಸ್ತುಕ್ರಮ ಜರುಗಿಸಬೇಕು ಎಂದಿದ್ದಾರೆ.