ಕೊಂಗಳಿ ಏತ ನೀರಾವರಿ ಯೋಜನೆ ತ್ವರಿತವಾಗಿ ಪೂರ್ಣಗೊಳಿಸಿ: ಸಲಗಾರ

ಹುಲಸೂರ:ಮೇ.31: ಎರಡು ವರ್ಷ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕಾಗಿದ್ದ ಕೊಂಗಳಿ ಏತ ನೀರಾವರಿ ಯೋಜನೆಯ ಕಾಮಗಾರಿ ಇನ್ನೂ ಆಗದಿರುವುದಕ್ಕೆ ಶಾಸಕ ಶರಣು ಸಲಗರ ಗುತ್ತಿಗೆದಾರನ ವಿರುದ್ಧ ಕಿಡಿಕಾರಿದ್ದಾರೆ.

ಕರ್ನಾಟಕ ನೀರಾವರಿ ನಿಗಮ ಲಿ. ಅಡಿಯಲ್ಲಿ ತಾಲ್ಲೂಕಿನ ಗೋವರ್ಧನ ತಾಂಡಾ ಸನಿಹ ನಿರ್ಮಾಣಗೊಳ್ಳುತ್ತಿರುವ ಕೊಂಗಳಿ ಏತ ನೀರಾವರಿ ಯೋಜನೆಯ ಕಾಮಗಾರಿ ಸ್ಥಳಕ್ಕೆ ಸೋಮವಾರ ಶಾಸಕರು ಭೇಟಿ ನೀಡಿ ಕೆಲಸದ ಸ್ಥಿತಿಗತಿಯನ್ನು ಪರಿಶೀಲಿಸಿದರು.

ಯೋಜನೆ ನಿರ್ಮಿಸುವ ಟೆಂಡರ್ ಕೈಗೆತ್ತಿಕೊಂಡಿರುವ ಮಂಗಳೂರಿನ ಒಶಿಯನ್ ಕನಸ್ಟ್ರಕ್ಶನ್ ಕಂಪನಿಯ ಗುತ್ತಿಗೆದಾರರೊಂದಿಗೆ ಶಾಸಕರು ಫೋನ್ ಮೂಲಕ ಮಾತನಾಡಲೇತ್ನಿಸಿದರು. ಆದರೆ, ಅದು ಫಲ ನೀಡಲಿಲ್ಲ. ಬಳಿಕ ಸ್ಥಳದಲ್ಲಿದ್ದ ಸಹಾಯಕ ಅಭಿಯಂತರ ಹೆಚ್.ಡಿ. ಪಾಟೀಲ್ ಹಾಗೂ ಯೋಜನೆಗೆ ಸಂಬಂಧಿಸಿದ ಇನ್ನಿತರ ಸಿಬ್ಬಂದಿಯವರೊಂದಿಗೆ ಈ ವೇಳೆ ಮಾತನಾಡಿದ ಶಾಸಕರು, ಎರಡು ವರ್ಷ ಕಾಲಾವಧಿಯಲ್ಲಿ ಅಂದರೆ 2020 ಮಾರ್ಚ್ 26ಕ್ಕೆ ಮುಗಿಯಬೇಕಿದ್ದ ಈ ಯೋಜನೆ ಹೆಚ್ಚುವರಿ 14 ತಿಂಗಳು ಉರುಳಿದರೂ ಇನ್ನೂ ಮುಗಿದಿಲ್ಲ. ಸಾವಿರಾರು ಕೋ.ರೂ. ವೆಚ್ಚದ ಎಂಥೆಂಥ ಬೃಹತ್ ನೀರಾವರಿ ಯೋಜನೆಗಳು ಎರಡು ವರ್ಷದೊಳಗೆ ಪೂರ್ಣಗೊಳ್ಳುತ್ತವೆ. ಆದರೆ, ಇದು ಯ್ಯಾಕೆ ಆಗಿಲ್ಲ. ನಿರಾಸಕ್ತಿ ಎದ್ದು ಕಾಣುತ್ತಿದೆ. ಗುತ್ತಿಗೆದಾರ ಯಾರೇ ಇರಲಿ. ಕಾಮಗಾರಿ ಸ್ಥಳದಲ್ಲೇ ಅವರು ಠಿಕಾಣಿ ಹೂಡಿ ಹಗಲು-ರಾತ್ರಿ ಕೆಲಸ ಮಾಡ್ಬೇಕು ಎಂದು ಎಚ್ಚರಿಕೆ ನೀಡಿದರು.

ಬತ್ತಿ ಹೋಗಿರುವ ಹತ್ತಾರು ಕೆರೆಗಳು ಹಾಗೂ ಸಾವಿರಾರು ರೈತರು ಈ ಯೋಜನೆಯನ್ನೇ ನಂಬಿ ಕಾದು ಕುಳಿತಿದ್ದಾರೆ. ರೈತರ ಹಾಗೂ ಜನಸಾಮಾನ್ಯರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಈ ಯೋಜನೆ ರೂಪಿಸಿದೆ. ಇದರೊಂದಿಗೆ ಹುಡುಗಾಟಿಕೆ, ಸೋಮಾರಿತನ ಮಾಡುವುದು ನಾನು ಸಹಿಸಲ್ಲ. ಇಂದಿನಿಂದ ಅತ್ಯಂತ ಶರವೇಗದಲ್ಲಿ ಕಾಮಗಾರಿ ಕೆಲಸಗಳು ನಡೆಯಬೇಕು. ವಾರಕ್ಕೊಮ್ಮೆ ನಾನು ಇಲ್ಲಿ ಬಂದು ಕೆಲಸದ ಪ್ರಗತಿ ಪರಿಶೀಲಿಸುವೆ ಎಂದು ತಾಕೀತು ಮಾಡಿದರು.

ಕೊಂಗಳಿ ಏತ ನೀರಾವರಿ ಯೋಜನೆ ಕಾಮಗಾರಿಗೆ ಮೂರು ಎಕರೆ ಜಮೀನು ನೀಡಿರುವ ಬಾಬು ರುಪ್ಲಾ ಜಾಧವ ಅವರು ಈ ವೇಳೆ ಶಾಸಕರೊಂದಿಗೆ ಮಾತನಾಡಿ, ಜಮೀನು ನೀಡಿದಕ್ಕೆ ಇದುವರೆಗೆ ಇಲಾಖೆಯವರು ನನಗೆ ಒಂದು ನಯಾಪೈಸೆಯೂ ಕೊಟ್ಟಿಲ್ಲ. ಜಮೀನಿನ ಹಣ ಶೀಘ್ರವೇ ಬಿಡುಗಡೆ ಮಾಡಿ ಎಂದು ತಮ್ಮ ಗೋಳು ತೊಡಿಕೊಂಡರು. ಅತೀ ಶೀಘ್ರದಲ್ಲೇ ಬಡ್ಡಿ ಸಹಿತ ನಿಮ್ಮ ಹಣ ನಿಮಗೆ ಸಿಗುವಂತೆ ವ್ಯವಸ್ಥೆ ಮಾಡುತ್ತೇನೆ ಎಂದು ಶಾಸಕರು ಬಾಬು ಅವರಿಗೆ ಭರವಸೆ ನೀಡಿದರು.

ಅಧೀಕ್ಷಕ ಅಭಿಯಂತರ ವಿಲಾಸ ಮಾಶಟ್ಟೆ, ಎಇಇ ವಿಜಯಕುಮಾರ ಶಿಂಧೆ, ಸೆಕ್ಷನ್ ಅಧಿಕಾರಿ ರಾಮಶೆಟ್ಟಿ ಜಾಧವ, ಸಂತೋಷ್ ವಾಡೇಕರ್, ಶಿವಕುಮಾರ ಲಾತೂರೆ, ರಾಮ, ಜೆಇ ಸಲ್ಮಾನ್, ಹುಲಸೂರ ತಾಪಂ ಮಾಜಿ ಅಧ್ಯಕ್ಷ ಸಿದ್ರಾಮ ಕಾಮಣ್ಣ, ಶಿವಕುಮಾರ ಶೇಟಗಾರ, ಸದಾನಂದ ಪಾಟೀಲ್ ಇನ್ನಿತರರಿದ್ದರು.