ಕೊಂಗಳಿ ಏತ ನೀರಾವರಿ ಯೋಜನೆ ಘಟಕಕ್ಕೆ ಭೇಟಿ-ಪರಿಶೀಲನೆನ.30ಕ್ಕೆ ನೀರಾವರಿ ಯೋಜನೆ ಲೋಕಾರ್ಪಣೆ: ಶಾಸಕ ಸಲಗರ ಭರವಸೆ

ಹುಲಸೂರ:ನ.11: ಕೊಂಗಳಿ ಏತ ನೀರಾವರಿ ಹೊಸ ಯೋಜನೆಯ ಮುಕ್ತಾಯ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ನ.30 ರೊಳಗಾಗಿ ಇದನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ಶಾಸಕ ಶರಣು ಸಲಗರ ಹೇಳಿದರು.

ಪಟ್ಟಣದ ಕೊಂಗಳಿ ರಸ್ತೆಗೆ ಹೊಂದಿಕೊಂಡು ಹೊಸದಾಗಿ ತಲೆ ಎತ್ತಿ ನಿಂತಿರುವ ಕೊಂಗಳಿ ಏತ ನೀರಾವರಿ ಬೃಹತ್ ಯೋಜನೆ ಘಟಕದ ಕಾರ್ಯ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿದ ಶಾಸಕರು ಯೋಜನೆಯ ಕಾರ್ಯ ಪ್ರಗತಿಯನ್ನು ಕೂಲಂಕುಷವಾಗಿ ಪರಿಶೀಲಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಲಸೂರ ಹಾಗೂ ಬಸವಕಲ್ಯಾಣ ತಾಲ್ಲೂಕಿನ ಒಟ್ಟು 15 ಕೆರೆಗಳನ್ನು ತುಂಬಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದ್ದು ಇದರಿಂದ ಸಾವಿರಾರು ಕೃಷಿಕರ ಜಮೀನುಗಳು ನೀರುಣಲಿವೆ. ಬೇಲೂರ ಕೆರೆವರೆಗೆ ಪೈಪ್‍ಲೈನ್ ಕಾರ್ಯ ಮುಗಿದಿದೆ ಎಂದರು.

ಉತ್ತಮ ಕಾರ್ಯ: 251 ಕೋಟಿ ರೂ. ಬಜೆಟ್‍ನ ಯೋಜನೆ ಇದಾಗಿದ್ದು ನೀರಾವರಿ ಘಟಕದ ಬ್ಯಾರೆಜ್ ನಿರ್ಮಾಣ, ವಿದ್ಯುತ್ ಸಬ್ ಸ್ಟೇಷನ್ ಈ ಕಾಮಗಾರಿಗಳು ಪೂರ್ಣಗೊಂಡಿವೆ. ಪಂಪ್ ಹೌಸ್ ಕಾರ್ಯ ಅಲ್ಪಾಂಶ ಉಳಿದಿದೆ. ಕಾರ್ಯ ಚೆನ್ನಾಗಿ ಆಗಿದ್ದು, ಪ್ರಸ್ತುತ ಘಟಕದಲ್ಲಿ ಬೃಹತ್ ಪ್ರಮಾಣದ ನೀರು ಸಂಗ್ರಹಣೆ ಆಗಿರುವುದು ಸಂತಸ ಸಂಗತಿ ಎಂದು ಶಾಸಕ ಸಲಗರ ಮೆಚ್ಚುಗೆ ವ್ಯಕ್ತಪಡಿಸಿದರು.

ಬಿಜೆಪಿ ತಾಲ್ಲೂಕಾಧ್ಯಕ್ಷ ಅಶೋಕ್ ವಕಾರೆ, ನಗರಾಧ್ಯಕ್ಷ ಅರವಿಂದ್ ಮುತ್ತೆ, ಜಿಪಂ ಮಾಜಿ ಅಧ್ಯಕ್ಷ ಸುಧೀರ್ ಕಾಡಾದಿ, ಕೆಎನ್‍ಎನ್‍ಎಲ್ ಎಇಇ ರಾಜಶೇಖರ್ ಸಜ್ಜನಶೆಟ್ಟಿ, ಪಿಕೆಪಿಎಸ್ ಅಧ್ಯಕ್ಷ ಓಂಕಾರ್ ಪಟ್ನೆ, ತಾಪಂ ಮಾಜಿ ಅಧ್ಯಕ್ಷ ಸಿದ್ರಾಮ ಕಾಮಣ್ಣ, ರಂಜಿತ್ ಗಾಯಕವಾಡ್, ವಿದ್ಯಾಸಾಗರ್ ಬನ್ಸೂಡೆ, ದೇವಿಂದ್ರ ಭೋಪಳೆ, ಸಂಗಮೇಶ ಭೋಪಳೆ, ಸೋಮನಾಥ ನಂದಗೆ, ಸಂಗಮೇಶ ಕುಡುಂಬ್ಲೆ, ಗ್ರಾಪಂ ಸದಸ್ಯ ಜಗನ್ನಾಥ ದೇಟ್ನೆ, ಪಿಎಸ್‍ಐ ನಿಂಗಪ್ಪ ಮಣ್ಣೂರ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ಕೊಂಗಳಿ ಏತ ನೀರಾವರಿ ಯೋಜನೆಯ ಲೋಕಾರ್ಪಣೆ ಹಾಗೂ ಯಶಸ್ವಿ ಅನುಷ್ಠಾನ ಕುರಿತಂತೆ ನ.12ರಂದು ನೀರಾವರಿ ಘಟಕ (ಕೊಂಗಳಿ ಡ್ಯಾಮ್)ದ ಸ್ಥಳದಲ್ಲೇ ಕೆಎನ್‍ಎನ್‍ಎಲ್‍ನ ಸೂಪರಿಡೆಂಟ್ ಎಂಜಿನಿಯರ್, ಮುಖ್ಯ ಎಂಜಿನಿಯರ್, ಕಾರ್ಯನಿರ್ವಾಹಕ ಎಂಜಿನಿಯರ್, ಎಇಇ ಹಾಗೂ ಇನ್ನಿತರ ಅಧಿಕಾರಿಗಳು ಒಳಗೊಂಡ ಸಭೆ ನಡೆಸಲಾಗುವುದು.

-ಶರಣು ಸಲಗರ

ಶಾಸಕರು, ಬಸವಕಲ್ಯಾಣ.