ಕೈ ಹಿಡಿಯಲು ಮಧು ಸಿದ್ಧತೆ ಶಿವಮೊಗ್ಗದಲ್ಲಿ ಹೊಸ ಲೆಕ್ಕಾಚಾರ

ಶಿವಮೊಗ್ಗ, ಮಾ. ೨೩: ಮತ್ತೊಂದು ‘ಮಹಾ ಪಕ್ಷಾಂತರ’ಕ್ಕೆ, ಶಿವಮೊಗ್ಗ ರಾಜಕಾರಣ ವೇದಿಕೆಯಾಗುತ್ತಿದೆ. ಮಾಜಿ ಸಿಎಂ, ದಿವಂಗತ ಎಸ್.ಬಂಗಾರಪ್ಪ ಪುತ್ರ ಮಧು ಬಂಗಾರಪ್ಪರವರು, ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ. ‘ಕೈ’ ಮೂಲಕ, ‘ಮಧು’ಕರ ರಾಜಕೀಯ ಮಾರ್ಗ ಕಂಡುಕೊಳ್ಳಲು ಮುಂದಾಗಿದ್ದಾರೆ.
ಕಳೆದ ಒಂದೂವರೆ ವರ್ಷದಿಂದ, ಮಧು ಬಂಗಾರಪ್ಪ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆಂಬ ಮಾತುಗಳು ಕೇಳಿಬರುತ್ತಿದ್ದವು. ಜೆಡಿಎಸ್ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದರು. ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗುತ್ತಿದ್ದಂತೆ, ಮಧು ಕಾಂಗ್ರೆಸ್ ಸೇರ್ಪಡೆ ಖಚಿತವಾಗಿತ್ತು. ಇದೀಗ ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವ ವಿಷಯವನ್ನು, ಅವರೇ ಅಧಿಕೃತವಾಗಿ ಸ್ಪಷ್ಟಪಡಿಸಿದ್ದಾರೆ.
ಸತ್ವ ಪರೀಕ್ಷೆ: ಒಂದಾನೊಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಶಿವಮೊಗ್ಗ ಜಿಲ್ಲೆಯು, ಕಳೆದೊಂದು ದಶಕದಿಂದಿಚೇಗೆ ಬಿಜೆಪಿ ಭದ್ರಕೋಟೆಯಾಗಿ ಪರಿವರ್ತನೆಯಾಗಿದೆ. ಎಸ್.ಬಂಗಾರಪ್ಪ ಕಾಂಗ್ರೆಸ್ ತೊರೆದ ನಂತರ, ಪ್ರಬಲ ನಾಯಕತ್ವದ ಕೊರತೆ ಆ ಪಕ್ಷಕ್ಕೆ ಕಾಡುತ್ತಿರುವುದು ಸುಳ್ಳಲ್ಲ.
ತಂದೆ ಬಂಗಾರಪ್ಪರ ನೆರಳಲ್ಲಿ ರಾಜಕೀಯ ರಂಗದಲ್ಲಿ ಬೆಳೆದು ಬಂದಿರುವ ಮಧುರವರು, ಕಾಂಗ್ರೆಸ್ ಸೇರುವ ಮೂಲಕ ತಮ್ಮ ರಾಜಕೀಯ ಜೀವನದಲ್ಲಿ ಹೊಸ ಬದಲಾವಣೆ ನಿರೀಕ್ಷೆಯಲ್ಲಿದ್ದಾರೆ. ಆ ಪಕ್ಷದ ಹಿರಿಯ ನಾಯಕರಾದ ಕಾಗೋಡು ತಿಮ್ಮಪ್ಪ ಸೇರಿದಂತೆ ಹಲವು ನಾಯಕರ ಜೊತೆ ಮೊದಲಿನಿಂದಲೂ ಉತ್ತಮ ಒಡನಾಟ ಹೊಂದಿರುವುದು, ಅವರ ಬೆಳವಣಿಗೆಗೆ ಸಾಕಷ್ಟು ಸಹಕಾರಿಯಾಗುವ ಸಾಧ್ಯತೆಯಿದೆ.
ಆದರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಬಲವರ್ಧನೆಗೆ ಯಾವ ರೀತಿಯಲ್ಲಿ ನೆರವಾಗುತ್ತಾರೆ? ಅವರ ಮುಂದಿನ ನಡೆ ಯಾವ ರೀತಿಯಲ್ಲಿರಲಿದೆ? ರಾಜಕೀಯವಾಗಿ ಅವರ ಬೆಳವಣಿಗೆ ಹೇಗಿರಲಿದೆ? ಪಕ್ಷದಲ್ಲಿ ಅವರ ಸ್ಥಾನಮಾನವೇನು? ಎಂಬಿತ್ಯಾದಿ ಹಲವು ಪ್ರಶ್ನೆಗಳಿಗೆ ಇನ್ನಷ್ಟೆ ಸ್ಪಷ್ಟ ಉತ್ತರ ಸಿಗಬೇಕಾಗಿದೆ.
ಇದೇ ಮೊದಲಲ್ಲ: ಪಕ್ಷಾಂತರ ರಾಜಕಾರಣದಲ್ಲಿ ಎಸ್.ಬಂಗಾರಪ್ಪ ಇತಿಹಾಸ ಸೃಷ್ಟಿಸಿದ್ದರು. ತಂದೆಯ ಹಾದಿಯಲ್ಲಿ ಮಧು ಕೂಡ ಹಲವು ಪಕ್ಷ ಸುತ್ತಿ ಬಂದಿದ್ದಾರೆ. ಇದೀಗ ಕಾಂಗ್ರೆಸ್ ತೆಕ್ಕೆಗೆ ಬಂದಿದ್ದಾರೆ. ೨೦೦೪ ರಲ್ಲಿ ನಡೆದ ವಿಧಾನಸಭೆ ಚುನಾವಣೆ ವೇಳೆ ಮೊದಲ ಬಾರಿಗೆ ಸೊರಬ ಕ್ಷೇತ್ರದಲ್ಲಿ ಬಿಜೆಪಿಯಿಂದ ಕಣಕ್ಕಿಳಿದು, ಪರಾಭವಗೊಂಡಿದ್ದರು.
ನಂತರ ೨೦೦೮ ರ ಚುನಾವಣೆಯಲ್ಲಿ, ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋಲನುಭವಿಸಿದ್ದರು. ೨೦೧೩ ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯ ಸಾಧಿಸುವಲ್ಲಿ ಸಫಲರಾಗಿದ್ದರು. ೨೦೧೮ ರ ಚುನಾವಣೆಯಲ್ಲಿ ಅದೇ ಪಕ್ಷದಿಂದ ಕಣಕ್ಕಿಳಿದು ಪರಾಭವಗೊಂಡಿದ್ದರು.
೨೦೧೮ರಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಮಧು ಬಂಗಾರಪ್ಪ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರಗೆ ಉತ್ತಮ ಪೈಪೋಟಿ ನೀಡಿದ್ದರಾದರೂ, ಜಯ ಸಾಧ್ಯವಾಗಿರಲಿಲ್ಲ. ೨೦೧೯ ರಲ್ಲಿ ನಡೆದ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿಯೂ ಮತ್ತೆ ಮಧು ಕಣಕ್ಕಿಳಿದಿದ್ದರು. ಆದರೆ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಎದುರು ಮತ್ತೆ ಸೋಲನುಭವಿಸಿದ್ದರು.
ಹಳಸಿದ ಸಂಬಂಧ: ಕಳೆದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದದ ಅವಧಿಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದ ವೇಳೆ, ವಿಧಾನ ಪರಿಷತ್ ಅಥವಾ ಸರ್ಕಾರದ ಮಟ್ಟದಲ್ಲಿ ಸೂಕ್ತ ಸ್ಥಾನಮಾನ ಲಭ್ಯವಾಗುವ ನಿರೀಕ್ಷೆ ಮಧುರವರದ್ದಾಗಿತ್ತು. ಆದರೆ ಹೆಚ್.ಡಿ.ಕುಮಾರಸ್ವಾಮಿಯವರು ಯಾವುದೇ ಸ್ಥಾನಮಾನ ಕಲ್ಪಿಸಿರಲಿಲ್ಲ. ಇದರಿಂದ ಮುನಿಸಿಕೊಂಡಿದ್ದ ಮಧು, ಜೆಡಿಎಸ್ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದರು.

ಗೀತಾ ಶಿವರಾಜ್ಕುಮಾರ್ ಕುತೂಹಲ?
ಬಂಗಾರಪ್ಪ ಪುತ್ರಿ, ಚಿತ್ರನಟ ಶಿವರಾಜ್‌ಕುಮಾರ್ ಪತ್ನಿ ಗೀತಾರವರು ಸಹೋದರ ಮಧು ಬಂಗಾರಪ್ಪ ಜೊತೆ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರಾ ಎಂಬ ಕುತೂಹಲ ಮನೆ ಮಾಡಿದೆ. ಈಗಾಗಲೇ ಮಧುರವರು, ಸಹೋದರಿ ಗೀತಾರವರು ಕೂಡ ಕಾಂಗ್ರೆಸ್‌ಗೆ ಬರಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ನಡುವೆ ನಟ ಶಿವರಾಜ್‌ಕುಮಾರ್‌ರವರು, ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್‌ರವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಆದರೆ ಪತ್ನಿ ಕಾಂಗ್ರೆಸ್ ಸೇರ್ಪಡೆ ಕುರಿತಂತೆ ಯಾವುದೇ ಹೇಳಿಕೆ ನೀಡಿಲ್ಲ. ಹಾಗೆಯೇ ಡಿ.ಕೆ.ಶಿವಕುಮಾರ್ ರವರು ಕೂಡ, ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಇದರಿಂದ ಗೀತಾರವರು, ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರಾ? ಇಲ್ಲವೇ? ಎಂಬುವುದು ಇನ್ನಷ್ಟೆ ಸ್ಪಷ್ಟವಾಗಬೇಕಾಗಿದೆ.
ಪರಾಭವ: ಅನಿರೀಕ್ಷಿತವಾಗಿ ರಾಜಕಾರಣ ಪ್ರವೇಶಿಸಿದ್ದ ಗೀತಾ ಶಿವರಾಜ್‌ಕುಮಾರ್‌ರವರು ೨೦೧೪ ರಲ್ಲಿ ನಡೆದ ಲೋಕಸಭೆ ಚುನಾವಣೆ ವೇಳೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಿ.ಎಸ್.ಯಡಿಯೂರಪ್ಪ, ಕಾಂಗ್ರೆಸ್ ಅಭ್ಯರ್ಥಿಯಾಗಿ ಮಂಜುನಾಥ ಭಂಡಾರಿ ಸ್ಪರ್ಧಿಸಿದ್ದರು.