ಕೈ ಹಿಡಿದ ಮಾಲೀಕಯ್ಯ ಗುತ್ತೇದಾರ್

ಮಾಜಿ ಸಚಿವ, ಬಿಜೆಪಿ ಮುಖಂಡ ಮಾಲೀಕಯ್ಯ ಗುತ್ತೇದಾರ್ ಅವರು ಇಂದು ಕೆಪಿಸಿಸಿ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಹಾಗೂ ಪಕ್ಷದ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಸಚಿವರಾದ ಪ್ರಿಯಾಂಕ್ ಖರ್ಗೆ, ಕೆ.ಎನ್. ರಾಜಣ್ಣ, ಸಿಎಂ ರಾಜಕೀಯ ಕಾರ್ಯದರ್ಶಿ ಗೋವಿಂದ ರಾಜು, ಎಂಎಲ್‌ಸಿ ನಾಗರಾಜ್ ಯಾದವ್, ಮತ್ತಿತರರು ಇದ್ದಾರೆ.

ಬೆಂಗಳೂರು, ಏ. ೧೯- ರಾಜ್ಯದ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಇಂದು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.
ಕೆಪಿಸಿಸಿ ಕಚೇರಿಯಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಮಾಲೀಕಯ್ಯ ಗುತ್ತೇದಾರ್ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು.ಈ ಸಂದರ್ಭದಲ್ಲಿ ಸಚಿವರಾದ ಪ್ರಿಯಾಂಕಖರ್ಗೆ, ಕೆ.ಎನ್. ರಾಜಣ್ಣ ಇವರೆಲ್ಲಾ ಉಪಸ್ಥಿತರಿದ್ದರು. ಮಾಲೀಕಯ್ಯ ಗುತ್ತೇದಾರ್ ಅವರಿಗೆ ಕಾಂಗ್ರೆಸ್ ಪಕ್ಷದ ಧ್ವಜ ಕೊಟ್ಟು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು.
ಶಾರದಾ ಮೋಹನ್ ಶೆಟ್ಟಿ ಸೇರ್ಪಡೆ
ಇದೇ ಸಂದರ್ಭದಲ್ಲಿ ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಸಹ ಕಾಂಗ್ರೆಸ್‌ಗೆ ಸೇರ್ಪಡೆಯಾದರು.ಡಿಕೆಶಿ ಮಾತು ಪಕ್ಷ ಸೇರ್ಪಡೆ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಲೀಕಯ್ಯ ಗುತ್ತೇದಾರ್ ಅವರು ಈ ಹಿಂದೆ ನಮ್ಮ ಜತೆ ಇದ್ದವರು. ಅನಿವಾರ್ಯ ಕಾರಣಗಳಿಂದ ಹೊರ ಹೋಗಿದ್ದರು. ಅವರು ಇಂದು ಪಕ್ಷಕ್ಕೆ ವಾಪಸ್ಸಾಗಿದ್ದಾರೆ. ಅವರ ಜತೆ ಅವರ ಬೆಂಬಲಿಗರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ ಎಂದರು
ಇಂದು ಪಕ್ಷ ಸೇರಿರುವ ಶಾರದಾ ಮೋಹನ್ ಶೆಟ್ಟಿ ಅವರು ಶಾಸಕರಾಗಿದ್ದವರು ಈಗ ಮತ್ತೆ ಅವರು ಪಕ್ಷಕ್ಕೆ ಬಂದಿದ್ದಾರೆ ಎಲ್ಲರಿಗೂ ಸ್ವಾಗತ ಎಂದರು.
ಹಲವರು ಬಿಜೆಪಿ-ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ. ಜನರ ಬದುಕನ್ನು ಗಮನದಲ್ಲಿಟ್ಟುಕೊಂಡು ಪಕ್ಷಕ್ಕೆ ಬರುತ್ತಿದ್ದಾರೆ. ಪಕ್ಷದ ಸಿದ್ಧಾಂತ ಒಪ್ಪಿ ಬರುವ ಎಲ್ಲರನ್ನು ಪಕ್ಷಕ್ಕೆ ಸೇರಿಸಿಕೊಳ್ಳಿ ಎಂದು ಸ್ಥಳೀಯ ನಾಯಕರಿಗೂ ಸೂಚನೆ ಕೊಟ್ಟಿದ್ದೇನೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು
ಸಿಎಂ ಮಾತು
ಈ ಹಿಂದೆಯೇ ಮಾಲೀಕಯ್ಯ ಗುತ್ತೇದಾರ್ ಅವರಿಗೆ ನಾನು ಪಕ್ಷ ಬಿಡಬೇಡ ಎಂದು ಹೇಳಿದ್ದೆ ಮೊನ್ನೆ ಗುಲ್ಬರ್ಗಕ್ಕೆ ಹೋದಾಗ ಪಕ್ಷಕ್ಕೆ ಬರುವಂತೆ ಹೇಳಿದ್ದೆ. ಅವರ ಪಕ್ಷ ಸೇರ್ಪಡೆಯಿಂದ ನಮಗೆ ಶಕ್ತಿ ಬಂದಿದೆ. ಹಾಗೆಯೇ ಶಾರದಾ ಮೋಹನ್ ಶೆಟ್ಟಿ ಅವರು ನಮ್ಮಲ್ಲೇ ಇದ್ದವರು ಅವರೆಲ್ಲಾ ವಾಪಸ್ ಬಂದಿದ್ದಾರೆ ಎಲ್ಲರಿಗೂ ಸ್ವಾಗತ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ಮಾಲೀಕಯ್ಯ ಗುತ್ತೇದಾರ ಹೇಳಿಕೆ
ಕಾಂಗ್ರೆಸ್ ಪಕ್ಷ ಸೇರಿದ ಮಾತನಾಡಿದ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಅವರು ಈ ಹಿಂದೆ ನಾನು ಕಾಂಗ್ರೆಸ್‌ನಲ್ಲಿದ್ದ ಕಾರಣ ಬೇರೆ ಪಕ್ಷಕ್ಕೆ ಹೋಗಿದ್ದೆ. ಈಗ ಮತ್ತೆ ಕಾಂಗ್ರೆಸ್‌ಗೆ ಸೇರಿದ್ದೇನೆ. ಕಲುಬುರುಗಿಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ತುರುತ್ತೇನೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ ಅವರ ಜತೆಯೂ ಮಾತನಾಡಿದ್ದೇನೆ. ಅಫ್ಜಲ್ ಪುರದಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಅವರಿಗೆ ನೋವಾಗದಂತೆ ನಡೆದುಕೊಳ್ಳುತ್ತೇನೆ ಎಂದು ಹೇಳಿದರು.
ಪ್ರಿಯಾಂಕ ಖರ್ಗೆ ಮಾತು
ಮಾಲೀಕಯ್ಯ ಗುತ್ತೇದಾರ್ ಅವರ ಪಕ್ಷ ಸೇರ್ಪಡೆಯಿಂದ ಕಾಂಗ್ರೆಸ್‌ಗೆ ಆನೆ ಬಲ ಬಂದಂತಾಗಿದೆ. ಬಿಜೆಪಿ ಸಮಾಜವನಷ್ಟೇ ಅಲ್ಲ ಕುಟುಂಬಗಳನ್ನು ಒಡೆಯುತ್ತಿದೆ. ಹೋರಾಟದಿಂದ ಬಂದವರಿಗೆ ಬಿಜೆಪಿಯಲ್ಲಿ ನ್ಯಾಯ ಸಿಗುತ್ತಿಲ್ಲ ಎಂದು ಆ ಪಕ್ಷದ ಕಾರ್ಯಕರ್ತರೆ ಹೇಳುತ್ತಿದ್ದಾರೆ. ಸತ್‌ಜಿತ್ ಸೂರತ್‌ಕಲ್ ಆರ್ ಎಸ್‌ಎಸ್‌ನಿಂದ ಬಂದವರು ಅವರಿಗೆ ಬಿಜೆಪಿಯಲ್ಲಿ ಸರಿಯಾಗಿ ನಡೆಸಿಕೊಂಡಿಲ್ಲ. ಶೂದ್ರರಾಗಿ ಹುಟ್ಟಿದರೆ ಬಿಜೆಪಿಯಲ್ಲಿ ಜಾಗವಿಲ್ಲ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್‌ನಲ್ಲಿ ಸಾಮಾಜಿಕ ನ್ಯಾಯವಿದೆ ಹಾಗಾಗಿ ಎಲ್ಲರೂ ಪಕ್ಷ ಸೇರುತ್ತಿದ್ದಾರೆ ಎಂದು ಸಚಿವ ಪ್ರಿಯಾಂಕ ಖರ್ಗೆ ಹೇಳಿದರು.