ಕೈ ಹಿಡಿದ ಚಿಂಚನಸೂರ್

ಬೆಂಗಳೂರು,ಮಾ.೨೩:ಎರಡು ದಿನಗಳ ಹಿಂದೆ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಯುಗಾದಿ ಹಬ್ಬದ ದಿನವಾದ ನಿನ್ನೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ನಿವಾಸದಲ್ಲಿ ಚಿಂಚನಸೂರ್ ಕಾಂಗ್ರೆಸ್‌ಗೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಈಗಾಗಲೇ ಹಳ್ಳಿಯಿಂದ ರಾಜ್ಯಮಟ್ಟದವರೆಗೂ ಅನ್ಯ ಪಕ್ಷಗಳ ನೂರಾರು ನಾಯಕರುಗಳು ಕಾಂಗ್ರೆಸ್ ಸೇರಿದ್ದಾರೆ. ಪರಿಷತ್ ಅವಧಿ ಒಂದೂವರೆ ವರ್ಷ ಬಾಕಿ ಇದ್ದರೂ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದರೂ ಬಾಬುರಾವ್ ಚಿಂಚನಸೂರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದಾರೆ. ನಾನು ಅವರ ಜತೆಯಲ್ಲಿ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು. ಬಡವರ ಕಲ್ಯಾಣವಾಗಬೇಕು ಎಂಬ ಉದ್ದೇಶದಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅನುಯಾಯಿಯಾಗಿ ಚಿಂಚನಸೂರ್ ಪಕ್ಷ ಸೇರಿದ್ದಾರೆ. ಅವರನ್ನು ಸಂತೋಷದಿಂದ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದೇವೆ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ನಮ್ಮ ಗ್ಯಾರಂಟಿ ಕಾರ್ಡ್‌ನ್ನು ಬೋಗಸ್ ಕಾರ್ಡ್ ಎಂದಿದ್ದಾರೆ. ನಾನು ಕೆಲ ದಿನಗಳಲ್ಲೇ ಅವರ ಪ್ರಣಾಳಿಕೆ ಮುಂದಿಟ್ಟು ಯಾರದು ಬೋಗಸ್ ಎಂದು ಹೇಳುತ್ತೇನೆ. ನಾನು ಈ ಬಗ್ಗೆ ಬಹಿರಂಗ ಚರ್ಚೆಗೂ ಸಿದ್ಧ ಎಂದರು.
ಕಾಂಗ್ರೆಸ್ ಪಕ್ಷ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತದೆ. ನಾವು ಕೊಟ್ಟಿರುವ ಭರವಸೆಯನ್ನು ಈಡೇರಿಸುವುದು ನಿಶ್ಚಿತ. ಬಿಜೆಪಿಯವರಂತೆ ಜನರ ಖಾತೆಗೆ ೧೫ ಲಕ್ಷ ಹಾಕುತ್ತೇವೆ ಎಂದು ಹೇಳಿ ಮತ ಪಡೆದು ಮೋಸ ಮಾಡುವುದಿಲ್ಲ ಎಂದರು.
ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯರವರನ್ನು ಸೋಲಿಸಲು ಷಡ್ಯಂತ್ರ ನಡೆದಿದೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯರವರ ಬಗ್ಗೆ ಕುಮಾರಸ್ವಾಮಿ ಪ್ರೀತಿ ತೋರುವ ಅಗತ್ಯವಿಲ್ಲ. ಸಿದ್ದರಾಮಯ್ಯರವರು
ಎಲ್ಲಿಂದ ಬೇಕಾದರೂ ಸ್ಪರ್ಧಿಸಬಹುದು. ತೀರ್ಮಾನವನ್ನು ಸಿದ್ದರಾಮಯ್ಯರವರಿಗೆ ಬಿಡಲಾಗಿದೆ. ಸಿದ್ದರಾಮಯ್ಯ ಎಲ್ಲಿ
ಸ್ಪರ್ಧಿಸುತ್ತಾರೋ ಅಲ್ಲಿ ನಾವೆಲ್ಲ ಬೆಂಬಲವಾಗಿ ನಿಲ್ಲುತ್ತೇವೆ ಎಂದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಡಾ. ಶರಣ್‌ಪ್ರಕಾಶ್ ಪಾಟೀಲ್ ಉಪಸ್ಥಿತರಿದ್ದರು.