ಕೈ ಹಿಡಿದ ಗೀತಾ ಶಿವರಾಜ್‌ಕುಮಾರ್

ಬೆಂಗಳೂರು,ಏ.೨೮-ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹಿರೋ ಡಾ. ಶಿವರಾಜ್‌ಕುಮಾರ್ ಪತ್ನಿ ಇಂದು ವಿದ್ಯುಕ್ತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಗೀತಾ ಶಿವರಾಜ್‌ಕುಮಾರ್‌ಗೆ ಕಾಂಗ್ರೆಸ್ ಬಾವುಟ ನೀಡಿ ಆತ್ಮೀಯವಾಗಿ ಬರ ಮಾಡಿಕೊಂಡರು. ಪಕ್ಷಕ್ಕೆ ಸೇರ್ಪಡೆಯಾದ ಬಳಿಕ ಗೀತಾ ಅವರು, ಡಿಕೆಶಿಯವರ ಕಾಲಿಗೆ ಬಿದ್ದು ಆರ್ಶೀವಾದ ಪಡೆದರು.
ಸಹೋದರ ಮಧು ಬಂಗಾರಪ್ಪ ಸೊರಬ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಈ ಹಿಂದೆ ಮಧು ಬಂಗಾರಪ್ಪ ಅವರು ಜೆಡಿಎಸ್‌ನಲ್ಲಿದ್ದರು, ಚುನಾವಣೆ ಹಿನ್ನೆಲೆಯಲ್ಲಿ ನಾಳೆಯಿಂದ ಸಹೋದರನ ಪರವಾಗಿ ಪ್ರಚಾರ ನಡೆಸಲಿದ್ದಾರೆ.
ಇದೇ ವೇಳೆ ಪ್ರತಿಕ್ರಿಯೆ ನೀಡಿರುವ ನಟ ಶಿವರಾಜ್ ಕುಮಾರ್ ಬಂಗಾರಪ್ಪ ಮಕ್ಕಳಾದ ಮಧು ಮತ್ತು ಗೀತಾ ಅವರಿಗೆ ರಾಜಕೀಯ ಪಾಠ ಹೇಳಿಕೊಡುವುದು ಬೇಡ ತಾಯಿ ನಿಧನದ ಬಳಿಕ ೨ ವರ್ಷದಿಂದ ಶಕ್ತಿಧಾಮದ ಅಧ್ಯಕ್ಷರಾಗಿದ್ದಾರೆ. ಮಕ್ಕಳಿಗೆ ಕೌಶಲ್ಯ ತರಬೇತಿ ನೀಡುತ್ತಿದ್ದಾರೆ. ಇದರ ಜೊತೆಗೆ ಬೇಕರಿ ಶಿಬಿರ ನಡೆಸುತ್ತಿದ್ದಾರೆ ಎಂದರು. ತಾವು ಕೂಡ ಗೀತಾ ಜೊತೆ ಪ್ರಚಾರ ನಡೆಸುವುದಾಗಿ ಹೇಳಿದ ಅವರು, ಮಧು ಬಂಗಾರಪ್ಪ ಮಾವ ಭೀಮನಾಯಕ್ ಶಿರಸಿಯಿಂದ ಸ್ಪರ್ಧಿಸಿದ್ದಾರೆ. ಇಬ್ಬರು ಗೆಲ್ಲಲಿ ಎಂದು ಶುಭ ಹಾರೈಸಿದರು.
ಪ್ರತಿಬಾರಿಯೂ ಮಧು ಬಂಗಾರಪ್ಪ ಅವರನ್ನು ಗೀತಾ ಅವರು ಸ್ಪರ್ಧಿಸುತ್ತಾ ಬಂದಿದ್ದಾರೆ. ಈ ಬಾರಿ ಸಹೋದರರನ್ನು ಗೆಲ್ಲಿಸಬೇಕು ಎಂಬ ಕಾರಣಕ್ಕೆ ಕಾಂಗ್ರೆಸ್‌ಗೆ ಸೇರ್ಪಡೆಯಾಗುವ ಮೂಲಕ ಸಹೋದರ ಬಿಜೆಪಿ ವಿರುದ್ಧ ಸ್ಪರ್ಧಿಸಿರುವ ಕುಮಾರ್ ಬಂಗಾರಪ್ಪ ವಿರುದ್ಧವೇ ಪ್ರಚಾರ ಮಾಡಲಿದ್ದಾರೆ.
ಗೀತಾ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಕುರಿತು ಮಾತುಕತೆ ನಡೆದಿತ್ತು. ಆ ಬಳಿಕ ಗೀತಾ ಅವರು ಇಂದು ವಿದ್ಯುಕ್ತವಾಗಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ.