ಕೈ ಹಿಡಿದ ಕೆ.ಪಿ. ನಂಜುಂಡಿ

ಬೆಂಗಳೂರು,ಏ.೨೪:ವಿಧಾನ ಪರಿಷತ್ತಿನ ಸದಸ್ಯತ್ವಕ್ಕೆ ನಿನ್ನೆಯಷ್ಟೇ ರಾಜೀನಾಮೆ ನೀಡಿದ್ದ ಕೆ.ಪಿ ನಂಜುಂಡಿ ಅವರು ಬಿಜೆಪಿ ತೊರೆದು ಇಂದು ಕಾಂಗ್ರೆಸ್‌ಗೆ ಸೇರ್ಪಡೆಯಾದರು.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆ.ಪಿ ನಂಜುಂಡಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.
ಸುರ್ಜೇವಾಲಾ ಹೇಳಿಕೆ
ಇದೇ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಅವರು ಭಾರತದ ಸಂವಿಧಾನ ದಾಳಿಗೊಳಗಾಗುತ್ತಿರುವ ಸಂದರ್ಭದಲ್ಲಿ ನಾವೆಲ್ಲರೂ ಒಂದಾಗಿ ಹೋರಾಟ ಮಾಡಬೇಕಿದೆ. ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ವ್ಯವಸ್ಥಿತವಾಗಿ ನಾಶ ಮಾಡಲಾಗುತ್ತಿದೆ. ಕೆಲ ಬಿಜೆಪಿ ನಾಯಕರು ಬಹಿರಂಗವಾಗಿಯೇ ಸಂವಿಧಾನ ಬದಲಾವಣೆ ಮಾಡಲಿದ್ದೇವೆ ಎಂದು ಹೇಳುತ್ತಿದ್ದಾರೆ ಎಂದರು.
ಕೇಂದ್ರ ಸರ್ಕಾರದಲ್ಲಿ ಈಗಾಗಲೇ ಪರಿಶಿಷ್ಟ ಜಾತಿ, ಪಂಗಡ ಹಿಂದುಳಿದ ವರ್ಗಗಳ ಅಧಿಕಾರಿಗಳು ಸರ್ಕಾರದ ಕಾರ್ಯದರ್ಶಿಯಾಗುತ್ತಿಲ್ಲ. ಜಂಟಿ ಕಾರ್ಯದರ್ಶಿ ಸೇರಿದಂತೆ ಉನ್ನತ ಸ್ಥಾನಗಳನ್ನು ಈ ಸಮುದಾಯದವರಿಗೆ ನೀಡಲಾಗುತ್ತಿಲ್ಲ. ಕೇಂದ್ರ ಸರ್ಕಾರದಲ್ಲಿ ಕೇವಲ ಒಬ್ಬ ಓಬಿಸಿ ಸಮುದಾಯದ ಅಧಿಕಾರಿ ಕಾರ್ಯದರ್ಶಿ ಹುದ್ದೆಯಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹಿಂದುಳಿದ ಸಮಾಜದವರ ರಕ್ಷಣೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಹಿಂದುಳಿದ ವರ್ಗಗಳ ಆದಾಯ ಮಿತಿಯನ್ನು ಪರಿಶೀಲನೆ ಮಾಡಿ ಹೆಚ್ಚಳ ಮಾಡಿಲ್ಲ. ಭಾರತ ಸರ್ಕಾರದ ವ್ಯಾಪ್ತಿಯಲ್ಲಿ ೩೦ ಲಕ್ಷ ಹುದ್ದೆಗಳು ಖಾಲಿ ಇದ್ದು, ಇದರಲ್ಲಿ ೮ ಲಕ್ಷ ಹುದ್ದೆಗಳು ಹಿಂದುಳಿದ ವರ್ಗಗಳಿಗೆ ಸೇರಬೇಕು ಎಂದು ಹೇಳಿದರು.
ಜೂ. ೪ರ ನಂತರ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾದ ಬಳಿಕ ದೇಶದಲ್ಲಿ ಜಾತಿ ಗಣತಿ ಮಾಡಿ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಅವರು ಹೇಳಿದರು.
ಬಿಜೆಪಿಯಲ್ಲಿ ನನ್ನನ್ನು ನಿರ್ಲಕ್ಷ್ಯ ಮಾಡಿದ್ದರು. ನಮ್ಮ ಹೋರಾಟಕ್ಕೆ ಬೆಲೆ ಇಲ್ಲವಾಗಿತ್ತು. ಹಾಗಾಗಿ ಬಿಜೆಪಿಗೆ ರಾಜೀನಾಮೆ ನೀಡುವಂತೆ ಕಳೆದ ೨ ವರ್ಷಗಳಿಂದ ನಮ್ಮ ಸಮಾಜದ ಒತ್ತಡ ನನ್ನ ಮೇಲಿತ್ತು. ನಿನ್ನೆ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ಗೆ ಸೇರಿದ್ದೇನೆ ಎಂದು ಇದೇ ಸಂದಭದಲ್ಲಿ ಕೆ.ಪಿ ನಂಜುಂಡಿ ಹೇಳಿದರು.