ಕೈ ಸೇರಲ್ಲ ಬೈರತಿ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಆ.೨೫:ನಾನು ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ, ಒಂದು ವೇಳೆ ಬಿಜೆಪಿ ಬಿಡುವ ಪರಿಸ್ಥಿತಿ ಬಂದರೆ ರಾಜಕೀಯ ನಿವೃತ್ತಿ ಪಡೆಯುವೇ ಹೊರತು ಕಾಂಗ್ರೆಸ್ ಪಕ್ಷ ಸೇರಲ್ಲ ಎಂದು ಮಾಜಿ ಸಚಿವ ಭೈರತಿ ಬಸವರಾಜ್ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತೇನೆ ಎಂಬ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ. ನಾನು ಯಾವ ಕಾರಣಕ್ಕೂ ಬಿಜೆಪಿ ಬಿಡಲ್ಲ ಎಂದರು.
ನನಗೆ ಕಾಂಗ್ರೆಸ್ ಪಕ್ಷ ಸೇರುವಂತೆ ಯಾರಿಂದಲೂ ಆಹ್ವಾನ ಬಂದಿಲ್ಲ, ಕಾಂಗ್ರೆಸ್ ನಾಯಕರು ನನ್ನನ್ನು ಸಂಪರ್ಕಿಸಿಲ್ಲ. ನಾನೂ ಕೂಡ ಕಾಂಗ್ರೆಸ್ ಸೇರುವೆ ಎಂದು ಯಾವುದೇ ನಾಯಕರನ್ನು ಸಂಪರ್ಕಿಸಿಲ್ಲ. ಹೀಗಿದ್ದರೂ ನಾನು ಬಿಜೆಪಿ ಬಿಡುತ್ತೇನೆ ಎಂದು ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ನನಗೆ ಅಧಿಕಾರ, ಸ್ಥಾನಮಾನ, ಗೌರವ ಎಲ್ಲ ಕೊಟ್ಟಿದೆ. ಹೀಗಿರುವಾಗ ನಾನು ಬಿಜೆಪಿಯಲ್ಲಿ ಇರುತ್ತೇನೆಯೇ ಹೊರತು ಪಕ್ಷ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ ಎಂದರು. ಒಂದು ವೇಳೆ ಬಿಜೆಪಿ ಬಿಡುವ ಪರಿಸ್ಥಿತಿ ರೂಪುಗೊಂಡರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆಯೇ ಹೊರತು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ಸೇರಲ್ಲ ಎಂದು ಭೈರತಿ ಬಸವರಾಜ್ ಹೇಳಿದರು.