ಕೈ ಸುಡುವ ಪಟಾಕಿ ದರ : ಅಗತ್ಯ ವಸ್ತುಗಳ ಬೆಲೆ ಏರಿಕೆ ಬಿಸಿ!

ಶಿವಮೊಗ್ಗ, ನ. 3: ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಹಬ್ಬದ
ಪ್ರಮುಖ ಆಕರ್ಷಣೆಯಾದ ಪಟಾಕಿ ಖರೀದಿ ಭರಾಟೆಯೂ ಜೋರಾಗಿದೆ. ಆದರೆ ಪಟಾಕಿ ಬೆಲೆ ಹೆಚ್ಚಳ
ನಾಗರೀಕರ ಕೈ ಸುಡುತ್ತಿದೆ! ಕಳೆದ ವರ್ಷಕ್ಕೆ ಹೋಲಿಸಿದರೆ, ಪ್ರಸ್ತುತ ವರ್ಷದ ಪಟಾಕಿ
ಬೆಲೆಯಲ್ಲಿ ಶೇ. 20 ರಿಂದ 30 ರಷ್ಟು ಹೆಚ್ಚಳ ಕಂಡುಬಂದಿದೆ.
ಇದನ್ನು ಸ್ವತಃ ಕೆಲ ಪಟಾಕಿ ಮಾರಾಟಗಾರರೇ ಒಪ್ಪಿಕೊಳ್ಳುತ್ತಾರೆ. ತೈಲ ಬೆಲೆ ಏರಿಕೆ
ಹಾಗೂ ಪಟಾಕಿ ತಯಾರಿಕೆಗೆ ಬಳಸುವ ಕಚ್ಚಾ ವಸ್ತು ದರ ಹೆಚ್ಚಳದಿಂದ, ಪಟಾಕಿ ಬೆಲೆ
ಏರಿಕೆಯಾಗಿದೆ ಎಂದು ಹೇಳುತ್ತಾರೆ. ದರ ಹೆಚ್ಚಳ ಕಾರಣದಿಂದಲೇ ಪಟಾಕಿ ಮಾರಾಟ ಪ್ರಮಾಣವು
ತಗ್ಗಿದೆ ಎಂದು ಕೆಲ ವರ್ತರಕು ಅಳಲು ತೋಡಿಕೊಳ್ಳುತ್ತಾರೆ.
ಈ ನಡುವೆ ಪರಿಸರ ಮಾಲಿನ್ಯ ಮಂಡಳಿಯು ಪರಿಸರ ಸ್ನೇಹಿ ದೀಪಾವಳಿ ಆಚರಿಸುವಂತೆ ಮನವಿ
ಮಾಡಿದೆ. ಹಸಿರು ಪಟಾಕಿಗಳನ್ನು ಮಾತ್ರ ಬಳಸುವಂತೆ ಸೂಚಿಸಿದೆ. ಯಾವುದೇ ಕಾರಣಕ್ಕೂ
ಇತರೆ ಪಟಾಕಿಗಳ ಮಾರಾಟ ಮಾಡದಂತೆ ವರ್ತಕರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಆದರೆ ಯಾವುದು ಹಸಿರು ಪಟಾಕಿ? ಅಲ್ಲ? ಎಂಬುವುದರ ಬಗ್ಗೆ ನಾಗರೀಕರಿಗೆ ಸಮರ್ಪಕ
ಮಾಹಿತಿಯೇ ಇಲ್ಲವಾಗಿದೆ. ಕೆಲ ವರ್ತಕರು ಎಲ್ಲ ರೀತಿಯ ಪಟಾಕಿಗಳನ್ನು ಮಾರಾಟ
ಮಾಡುತ್ತಿರುವುದು ಕಂಡುಬರುತ್ತಿದೆ.
ಬೆಲೆ ಏರಿಕೆ: ಅತ್ಯಂತ ಸಡಗರ-ಸಂಭ್ರಮದಿಂದ ಆಚರಣೆ ಮಾಡುವ ಹಬ್ಬಕ್ಕೆ, ಅಗತ್ಯ ವಸ್ತುಗಳ
ಬೆಲೆ ಏರಿಕೆಯು ದೊಡ್ಡ ತಡೆಯಾಗಿ ಪರಿಣಮಿಸಿದೆ! ಬೆಲೆ ಹೆಚ್ಚಳದ ಹೊರತಾಗಿಯೂ ನಾಗರೀಕರು
ಹಬ್ಬದ ತಯಾರಿಯಲ್ಲಿ ತಲ್ಲೀನವಾಗಿದ್ದಾರೆ.
ತರಕಾರಿ, ಹೂವು, ಹಣ್ಣುಗಳ ಬೆಲೆ ಗಗನಕ್ಕೇರಿದೆ. 1 ಕೆಜಿ ಟೊಮೊಟೊ ಬಲೆ 40 ರಿಂದ 50
ರೂ., ಬೀನ್ಸ್ 60 ರೂ., ಕ್ಯಾರೆಟ್ 60 ರೂ. ಇದೆ. ಹಾಗೆಯೇ ಕೊತಂಬರಿ ಮತ್ತೀತರ
ಸೊಪ್ಪುಗಳ ಬೆಲೆಯಲ್ಲಿಯೂ ದರ ಏರಿಕೆಯಾಗಿದೆ.
ಉಳಿದಂತೆ ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಹಬ್ಬಕ್ಕೆ ಅಗತ್ಯವಾದ ವಸ್ತುಗಳ ಮಾರಾಟ
ಜೋರಾಗಿದೆ. ಮಾವಿನ ಸೊಪ್ಪು, ಹೂವು, ಬಾಳೆಕಂದು, ಬಾಳೆ ಎಲೆ, ಹಣ್ಣುಹಂಪಲು ಹಾಗೂ
ಜಾನುವಾರುಗಳ ಪೂಜೆಗೆ ಸಂಬಂಧಿಸಿದ ವಸ್ತುಗಳ ಮಾರಾಟ ಜೋರಾಗಿರುದೆ.
ಹಳ್ಳಿಗಳಲ್ಲಿ ಸಿದ್ದತೆ: ಮಲೆನಾಡಿನ ಗ್ರಾಮೀಣ ಭಾಗದಲ್ಲಿ ದೀಪಾವಳಿ ಹಬ್ಬದ ಸಡಗರ,
ಸಂಭ್ರಮದ ವಾತಾವರಣ ಮನೆ ಮಾಡಿದೆ. ಗೋ ಪೂಜೆ, ಹೋರಿಗಳ ಮೆರವಣಿಗೆ, ಬೇಸಾಯದ
ಉಪಕರಣಗಳಿಗೆ ಪೂಜೆ ಈ ಹಬ್ಬದ ವಿಶೇಷವಾಗಿದೆ. ಮಾರುಕಟ್ಟೆಯಲ್ಲಿ ಗೋವುಗಳನ್ನು
ಶೃಂಗರಿಸುವ ವಿವಿಧ ವಸ್ತುಗಳನ್ನು ಜಾನುವಾರು ಸಾಕಾಣೆದಾರರು ಖರೀದಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಲಕ್ಷ್ಮೀ ಪೂಜೆಗೂ ಸಕಲ ಸಿದ್ದತೆಗಳು ನಡೆಯುತ್ತಿವೆ.
ಅಂಗಡಿ-ಮುಂಗಟ್ಟುಗಳನ್ನು ವಿಶೇಷವಾಗಿ ಸಿಂಗರಿಸಲಾಗುತ್ತಿದೆ.
ಆಗಮನ: ಪರ ಊರುಗಳಲ್ಲಿ ನೆಲೆಸಿರುವವರು ಹಾಗು ಇಲ್ಲಿ ವಾಸಿಸುತ್ತಿರುವ ಪರ ಸ್ಥಳದವರು,
ಹಬ್ಬಕ್ಕೆಂದು ತಮ್ಮ ಊರುಗಳಿಗೆ ಆಗಮಿಸುವ ಹಾಗೂ ತೆರಳುವರ ಸಂಖ್ಯೆ ಹೆಚ್ಚಾಗಿದೆ.
ಇದರಿಂದ ಶಿವಮೊಗ್ಗ ನಗರದ ಸರ್ಕಾರಿ, ಖಾಸಗಿ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣದಲ್ಲಿ ಬುಧವಾರ ಜನಜಂಗುಳಿ ಹೆಚ್ಚಿರುವುದು ಕಂಡುಬಂದಿತು.