ಕೈ ಸಾರಥ್ಯ ಕುತೂಹಲಕ್ಕೆಡೆ

ಬೆಂಗಳೂರು,ಮೇ೧೫:ನೂತನ ಮುಖ್ಯಮಂತ್ರಿ ಆಯ್ಕೆಯ ಚೆಂಡು ಈಗ ಹೈಕಮಾಂಡ್‌ನ ಅಂಗಳದಲ್ಲಿರುವುದರಿಂದ ಹೈಕಮಾಂಡ್ ಯಾರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುತ್ತದೆ ಎಂಬ ಕುತೂಹಲ ಮೂಡಿದ್ದು, ಎಲ್ಲರ ಚಿತ್ತ ಈಗ ಹೈಕಮಾಂಡ್‌ನತ್ತ ನೆಟ್ಟಿದೆ. ಹೈಕಮಾಂಡ್‌ನ ಆಯ್ಕೆ ಸಿದ್ದರಾಮಯ್ಯರವರೋ ಇಲ್ಲ ಡಿ.ಕೆ. ಶಿವಕುಮಾರ್‌ರವರೋ ಎಂಬುದು ಚರ್ಚೆಗೆ ಗ್ರಾಸವಾಗಿದೆ. ಮುಖ್ಯಮಂತ್ರಿ ಹುದ್ದೆಯ ರೇಸ್‌ನಲ್ಲಿರುವ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಇಬ್ಬರೂ ಹೈಕಮಾಂಡ್ ದೆಹಲಿಗೆ ಬರುವಂತೆ ಸೂಚಿಸಿದೆ.
ಹೈಕಮಾಂಡ್‌ನ ಬುಲಾವ್ ಮೇರೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಧ್ಯಾಹ್ನವೇ ದೆಹಲಿಗೆ ತೆರಳಿದ್ದು, ಸಂಜೆಯ ನಂತರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ರವರು ದೆಹಲಿಗೆ ತೆರಳುವರು.ಮುಖ್ಯಮಂತ್ರಿ ಹುದ್ದೆಗೆ ಪಟ್ಟು ಹಿಡಿದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೈಕಮಾಂಡ್ ಇಂದು ದೆಹಲಿಗೆ ಕರೆಸಿಕೊಂಡು, ಇಬ್ಬರ ಜತೆ ಚರ್ಚಿಸಿ, ಸಮನ್ವಯ ಮೂಡಿಸಿ ಗೊಂದಲ,
ಅಪಸ್ವರಗಳಿಗೆ ಅವಕಾಶವಾಗದಂತೆ ಮುಂದಿನ ಮುಖ್ಯಮಂತ್ರಿ ಯಾರು ಎಂಬುದನ್ನು ಪ್ರಕಟಿಸಲಿದೆ.
ಇಂದು ಇಲ್ಲ ನಾಳೆ ನಿರ್ಧಾರ
ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರು ಎಂಬುದನ್ನು ಹೈಕಮಾಂಡ್ ಇಂದು ಇಲ್ಲ ನಾಳೆ ಪ್ರಕಟಿಸಲಿದೆ. ಹಿಮಾಚಲ ಪ್ರದೇಶದ ಪ್ರವಾಸದಲ್ಲಿರುವ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷರುಗಳಾದ ಸೋನಿಯಾಗಾಂಧಿ, ಮತ್ತು ರಾಹುಲ್‌ಗಾಂಧಿ ಇಂದು ಸಂಜೆ ದೆಹಲಿಗೆ ಬರಲಿದ್ದು, ಅವರ ಜತೆ ಎಐಸಿಸಿ ಅಧ್ಯಕ್ಷ ಖರ್ಗೆ ಅವರು ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬ ಬಗ್ಗೆಯೂ ಚರ್ಚಿಸಲಿದ್ದಾರೆ.
ವೀಕ್ಷಕರಿಂದ ಹೈ ಕಮಾಂಡ್‌ಗೆ ವರದಿ
ನಿನ್ನೆ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಂದಿನ ಮುಖ್ಯಮಂತ್ರಿ ಆಯ್ಕೆಂii ಹೊಣೆಯನ್ನು ಎಐಸಿಸಿ ಅಧ್ಯಕ್ಷರಿಗೆ ಬಿಡುವ ನಿರ್ಧಾರವನ್ನು ಕೈಗೊಳ್ಳುವ ಜತೆಗೆ ಎಐಸಿಸಿ ವೀಕ್ಷಕರು ಬ್ಯಾಲೆಟ್ ಮೂಲಕ ಶಾಸಕರ ಅಭಿಪ್ರಾಯವನ್ನು ಸಂಗ್ರಹಿಸಿದ್ದಾರೆ.
ಶಾಸಕಾಂಗ ಪಕ್ಷದ ಸಭೆಯಲ್ಲಿ ಎಐಸಿಸಿ ವೀಕ್ಷಕರಾಗಿ ಭಾಗಿಯಾಗಿದ್ದ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್‌ಕುಮಾರ್ ಶಿಂಧೆ, ಹಿರಿಯ ನಾಯಕರಾದ ಜಿತೇಂದ್ರ ಪ್ರಸಾದ್, ದೀಪಕ್ ಬಬಾರಿಯಾ ಇವರುಗಳು ನಿನ್ನೆ ಶಾಸಕರ ಅಭಿಪ್ರಾಯಗಳನ್ನು ಬ್ಯಾಲೆಟ್ ಮೂಲಕ ಸಂಗ್ರಹಿಸಿದ್ದಾರೆ. ಈ ಬ್ಯಾಲೆಟ್ ಬಾಕ್ಸನ್ನು ಎಐಸಿಸಿ ಅಧ್ಯಕ್ಷ ಖರ್ಗೆ ಅವರಿಗೆ ನೀಡಿ ಅವರ ಸಮ್ಮುಖದಲ್ಲೇ ಬ್ಯಾಲೆಟ್ ಬಾಕ್ಸನ್ನು ತೆರೆದು ಶಾಸಕರ ಅಭಿಪ್ರಾಯ ಏನಿದೆ ಎಂಬ ವರದಿಯನ್ನು ನೀಡುವರು.
ಶಾಸಕರ ಅಭಿಪ್ರಾಯ, ವೀಕ್ಷಕರ ವರದಿ ಈ ಎಲ್ಲವನ್ನೂ ಪರಿಗಣನೆಗೆ ತೆಗೆದುಕೊಂಡು ದೆಹಲಿಗೆ ಬಂದಿರುವ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ಜತೆ ಮಾತನಾಡಿ, ಮುಂದಿನ ಮುಖ್ಯಮಂತ್ರಿ ಯಾಗುವವರ ಹೆಸರನ್ನು ಅಂತಿಮಗೊಳಿಸುವರು.
ಶಾಸಕರುಗಳ ಭೇಟಿ-ಸಮಾಲೋಚನೆ
ಕಾಂಗ್ರೆಸ್‌ನ ಹಲವು ಶಾಸಕರು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ನಿವಾಸಕ್ಕೆ ತೆರಳಿ ಸಮಾಲೋಚನೆ ನಡೆಸಿದರು. ಇಬ್ಬರ ನಿವಾಸಕ್ಕೆ ಶಾಸಕರುಗಳು ಇಂದು ಬೆಳಿಗ್ಗೆಯಿಂದಲೇ ನಿರಂತರ ಭೇಟಿ ನೀಡುತ್ತಿದ್ದು, ಇಬ್ಬರ ನಿವಾಸವೂ ರಾಜಕೀಯ ಚಟುವಟಿಕೆಗಳ ಕೇಂದ್ರವಾಗಿದೆ.
ಸಿದ್ದರಾಮಯ್ಯರವರ ನಿವಾಸಕ್ಕೆ ಶಾಸಕರುಗಳಾದ ಕೆ.ಎಂ. ರಾಜಣ್ಣ, ಡಾ. ಎಸ್.ಸಿ. ಮಹದೇವಪ್ಪ, ವಿಜಯಾನಂದ ಕಾಶಪ್ಪನವರ್, ಜಮೀರ್‌ಅಹ್ಮದ್. ವಿನಯ್ ಕುಲಕರ್ಣಿ, ನಂಜೇಗೌಡ, ಶಿವಲಿಂಗೇಗೌಡ, ರುದ್ರಪ್ಪ ಲಮಾಣಿ ಸೇರಿದಂತೆ ಹಲವು ಶಾಸಕರುಗಳು ಭೇಟಿ ನೀಡಿದ್ದರು.

ರಾಜಿ ಸೂತ್ರ ಸಿದ್ಧ
ಮುಖ್ಯಮಂತ್ರಿ ಹುದ್ದೆಗಾಗಿ ಪಟ್ಟು ಹಿಡಿದಿರುವ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಇಬ್ಬರಿಗೂ ಸಮ್ಮತವಾಗುವ ರಾಜಿ ಸೂತ್ರವನ್ನು ಹೈಕಮಾಂಡ್ ಸಿದ್ಧಪಡಿಸಿದೆ. ಇಬ್ಬರು ನಾಯಕರಿಗೂ ಎರಡೂವರೆ ವರ್ಷಗಳ ಕಾಲ ಅಧಿಕಾರ ಹಂಚಿಕೆ ಮಾಡುವ ರಾಜಿ ಸೂತ್ರ ಇದಾಗಿದೆ. ಇಂದು ಖರ್ಗೆ ಅವರು ಈ ರಾಜಿ ಸೂತ್ರವನ್ನು ಈ ಇಬ್ಬರು ನಾಯಕರ ಮುಂದಿಡುವರು ಎಂದು ಹೇಳಲಾಗಿದೆ. ಈ ರಾಜಿ ಸೂತ್ರಕ್ಕೆ ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಇಬ್ಬರು ಒಪ್ಪುವ ಸಾಧ್ಯತೆಗಳು ಹೆಚ್ಚಿವೆ.