ಕೈ ಸರ್ಕಾರ ದಿವಾಳಿ: ಜೋಶಿ ಕಿಡಿ

ಹುಬ್ಬಳ್ಳಿ, ಫೆ. ೨೩: ರಾಜ್ಯ ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ಆರ್ಥಿಕವಾಗಿ ದಿವಾಳಿಯಾಗಿದೆ. ಈ ನಿಟ್ಟಿನಲ್ಲಿ ಹಿಂದೂಗಳ ದೇವಸ್ಥಾನದ ಹುಂಡಿಗೆ ಕಣ್ಣು ಹಾಕುತ್ತಿದೆ. ಇದನ್ನು ಬಿಜೆಪಿ ತೀವ್ರವಾಗಿ ವಿರೋಧಿಸುತ್ತದೆ. ಈ ಬಗ್ಗೆ ಜನಜಾಗೃತಿ ಮಾಡುತ್ತೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಎಂಬುದನ್ನು ಹೆಜ್ಜೆ ಹೆಜ್ಜೆಗೆ ರುಜುವಾತು ಮಾಡುತ್ತಿದೆ. ತಮ್ಮ ವಿಫಲತೆಯನ್ನು ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದ ಕಡೆಗೆ ಬೆರಳು ತೋರಿಸಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಹರಿಹಾಯ್ದರು.
ಕಾಂಗ್ರೆಸ್ ಯಾವ ರಾಜ್ಯದಲ್ಲಿ ಅಧಿಕಾರದಲ್ಲಿದೆಯೋ ಅಲ್ಲಿ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ. ಮತಬ್ಯಾಂಕ ರಾಜಕೀಯಕ್ಕೆ ಉತ್ತೇಜನ ಕೊಡುತ್ತದೆ. ಆದರೆ ನಾವು ಅದನ್ನು ವಿರೋಧಿಸುತ್ತೇವೆ ಎಂದು ಹೇಳಿದರು.
ಈ ಹಿಂದೆ ಕೆಲವು ಕಿಡಿಗೇಡಿಗಳು ಹಳೇಹುಬ್ಬಳ್ಳಿ ಪೋಲಿಸ್ ಠಾಣೆಗೆ ಮುತ್ತಿಗೆ ಹಾಕಿ ಅಧಿಕಾರಿಗಳನ್ನು ಕೊಲೆ ಮಾಡಲು ಮುಂದಾಗಿದ್ದರು. ಪತ್ರ ಬರೆದು ಅವರನ್ನು ಬಿಡುಗಡೆಗೊಳಿಸುವ ಕೆಲಸ ಮಾಡಿದ್ದಾರೆ. ಇದರಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಇದೆ, ಏನು ಬೇಕಾದದ್ದು ಮಾಡಿದರೂ ನಡೆಯುತ್ತದೆ ಎಂಬ ಭಾವನೆ ಅಪರಾಧಿಗಳಲ್ಲಿದ್ದು ಇದಕ್ಕೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದರು.
ರಾಹುಲ್ ಗಾಂಧಿ ಅಪ್ರಬುದ್ದ ರಾಜಕಾರಣಿ, ಹೀಗಾಗಿ ಯಾರೂ ಕಾಂಗ್ರೆಸ್ ಸೇರ್ಪಡೆಯಾಗಲು ಮುಂದಾಗುತ್ತಿಲ್ಲ. ಇಂಡಿಯಾ ಅವಕಾಶವಾದಿಗಳ ಕೂಟ, ಈ ಒಗ್ಗಟ್ಟು ಫೋಟೋ ಶೂಟ್ ಗೆ ಅಷ್ಟೇ ಸೀಮಿತವಾಗುತ್ತದೆ ಎಂದು ಹೇಳಿದ್ದೆ, ಹಾಗೇ ಆಗಲಿದೆ ಎಂದವರು ನುಡಿದರು.