`ಕೈ’ ಸದಸ್ಯರು ಗೈರು: ಬಿಜೆಪಿ ಸದಸ್ಯರಿಗೆ ಮಾತ್ರ ಸೀಮಿತಗೊಂಡ ಕಂಪ್ಲಿ ಪುರಸಭೆ ಬಜೆಟ್ ಸಭೆ

ಕಂಪ್ಲಿ, ಮಾ.26- ಪಟ್ಟಣದ ನೀರು ಶುದ್ಧೀಕರಣ ಘಟಕ ಆವರಣದಲ್ಲಿ ಬುಧವಾರದಂದು 2021-22ನೇ ಸಾಲಿನ ಕಂಪ್ಲಿ ಪುರಸಭೆಯ ಬಜೆಟ್ ಮಂಡನೆ ಸಭೆ ಜರುಗಿತು.
ಕಂಪ್ಲಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ವಿ.ಸುದರ್ಶನ್ ರೆಡ್ಡಿ ಪ್ರಸಕ್ತ ಸಾಲಿನ ಆಯವ್ಯಯ ಮಂಡಿಸಿ ಮಾತನಾಡಿ, 2021-22ನೇ ಸಾಲಿನ ಪುರಸಭೆಯ ಬಜೆಟ್‍ನ ಒಟ್ಟು ಗಾತ್ರ 51 ಕೋಟಿ 51 ಲಕ್ಷ 25 ಸಾವಿರ ರೂ.ಗಳ ಪ್ರಮಾಣದ್ದಾಗಿದೆ. ನಿರೀಕ್ಷಿತ ಆದಾಯಗಳ ಪೈಕಿ ಮನೆ ತೆರಿಗೆ, ನೀರಿನ ಶುಲ್ಕ, ಬಾಡಿಗೆಗಳು, ಮಾರುಕಟ್ಟೆ , ಕಟ್ಟಡ ಕಾಯಿದೆ ಯೋಜನೆಗೆ ಸಂಬಂಧಿಸಿದ ಶುಲ್ಕ, ಅಭಿವೃದ್ಧಿ ಹಾಗು ಇತರೆ ಶುಲ್ಕ, ವ್ಯಾಪಾರ ಪರವಾನಿಗೆ ಶುಲ್ಕ ಸೇರಿ ಇನ್ನಿತರೆ ಮೂಲಗಳಿಂದ ಒಟ್ಟು 7 ಕೋಟಿ 64 ಲಕ್ಷದ 65 ಸಾವಿರದ 492 ರೂ.ಗಳಷ್ಟು ಪ್ರಮಾಣದ ಆದಾಯವನ್ನು ನಿರೀಕ್ಷಿಸಲಾಗಿದೆ. ಇನ್ನು 15ನೇ ಹಣಕಾಸು ಆಯೋಗ, ಸಂಸತ್ ಮತ್ತು ವಿಧಾನಸಭೆ ಸದಸ್ಯರ ಪ್ರದೇಶಾಭಿವೃದ್ಧಿ ಅನುದಾನ, ಪ್ರಕೃತಿ ವಿಕೋಪ ಪರಿಹಾರ ನಿಧಿ, ನಗರೋತ್ಥಾನ ಯೋಜನೆ, 24*7 ನೀರು ಸರಬರಾಜು ಯೋಜನೆ, ಕೆ.ಯು.ಐ.ಡಿ.ಎಫ್.ಸಿ ಸೇರಿದಂತೆ ವಿವಿಧ ಅನುದಾನಗಳು ಹಾಗು ವಿಶೇಷ ಸಾಲ ಮತ್ತು ಅಮಾನತ್ ಖಾತೆಗಳಿಂದ 4 ಕೋಟಿ 96 ಲಕ್ಷ 45 ಸಾವಿರ ರೂ.ಗಳ ನಿರೀಕ್ಷಿತ ಆದಾಯ ಸೇರಿ ಒಟ್ಟು 2021-22ನೇ ಸಾಲಿನಲ್ಲಿ ಒಟ್ಟು 51 ಕೋಟಿ 73 ಲಕ್ಷ 60 ಸಾವಿರ 492 ರೂ.ಗಳ ಒಟ್ಟು ಆದಾಯದ ನಿರೀಕ್ಷೆಯಿದೆ.
ನಿರೀಕ್ಷಿತ ಖರ್ಚುಗಳ ಪೈಕಿ ಸಾಮಾನ್ಯ ಆಡಳಿತ ಮತ್ತು ಸಿಬ್ಬಂದಿ ವೇತನಕ್ಕಾಗಿ ಖರ್ಚು, ಸಾರ್ವಜನಿಕ ವಿದ್ಯುತ್ ಮತ್ತು ಬೀದಿ ದೀಪಗಳ ನಿರ್ವಹಣೆ, ಸಾರ್ವಜನಿಕ ಆರೋಗ್ಯಕ್ಕಾಗಿ, ನೀರು ಸರಬರಾಜು ನಿರ್ವಹಣೆ ಸೇರಿದಂತೆ ವಿವಿಧ ನಿರ್ವಹಣೆಗಾಗಿ ಒಟ್ಟು 51 ಕೋಟಿ 51 ಲಕ್ಷ 25 ಸಾವಿರ ರೂ.ಗಳಷ್ಟು ಖರ್ಚುಗಳನ್ನು ನಿರೀಕ್ಷಿಸಲಾಗಿದೆ. ಅಂತಿಮವಾಗಿ ಈ ಬಾರಿ 22 ಲಕ್ಷ 35 ಸಾವಿರ 492 ರೂ.ಗಳ ಉಳಿತಾಯ ಬಜೆಟ್‍ನ್ನು ಮಂಡಿಸಿ ಸದಸ್ಯರ ಅನುಮೋದನೆ ಪಡೆದರು.
ಬಜೆಟ್ ಸಭೆಗೆ ಕಾಂಗ್ರೆಸ್‍ನ 10 ಸದಸ್ಯರು ಗೈರು, ಬಿಜೆಪಿ ಸದಸ್ಯರಿಗೆ ಸೀಮಿತಗೊಂಡ ಸಭೆ:
ಪುರಸಭೆಯ ಒಟ್ಟು 23 ಸದಸ್ಯರ ಪೈಕಿ ಬಜೆಟ್ ಸಭೆಯಲ್ಲಿ ಕಾಂಗ್ರೆಸ್‍ನ 10 ಸದಸ್ಯರು ಗೈರಾಗಿದ್ದರು. ಇನ್ನು ಬಿಜೆಪಿಯ 13 ಸದಸ್ಯರ ಪೈಕಿ ಓರ್ವ ಸದಸ್ಯ ಡಾ.ವಿ.ಎಲ್.ಬಾಬು ಅನಾರೋಗ್ಯ ಕಾರಣ ಗೈರಾಗಿದ್ದರು. ಆದರೆ ಬಿಜೆಪಿ ಸದಸ್ಯರ ಕೋರಂ ಇದ್ದ ಕಾರಣ ಬಜೆಟ್ ಸಭೆಯನ್ನು ಮುಂದುವರೆಸಿ ಬಜೆಟ್ ಮಂಡಿಸಲಾಯಿತು. ಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಗೈರಾಗಿದ್ದರೂ ಬಜೆಟ್ ಮಂಡಿಸಿದ್ದು ಕೇವಲ ಬಿಜೆಪಿ ಸದಸ್ಯರಿಗೆ ಮಾತ್ರ ಸಭೆ ಸೀಮಿತಗೊಂಡಂತೆ ಭಾಸವಾಗಿತ್ತು.
ಸಭೆಯಲ್ಲಿ ಪುರಸಭೆ ಅಧ್ಯಕ್ಷೆ ಶಾಂತಲಾ ವಿ ವಿದ್ಯಾಧರ್, ಮುಖ್ಯಾಧಿಕಾರಿ ರಮೇಶ್ ಬಡಿಗೇರ್, ಪುರಸಭೆ ಉಪಾಧ್ಯಕ್ಷೆ ನಿರ್ಮಲಾ ಕೆ, ಸದಸ್ಯರಾದ ಎಸ್.ಎಂ.ನಾಗರಾಜ್, ಸಿ ಆರ್ ಹನುಮಂತ, ಎನ್.ರಾಮಾಂಜನೇಯಲು, ಗಂಗಮ್ಮ ಉಡೇಗೋಳ್, ಪಾರ್ವತಿ, ತಿಮ್ಮಕ್ಕ, ಹೆಚ್.ಹೇಮಾವತಿ, ಆರ್.ಆಂಜನೇಯ, ರಮೇಶ್ ಹೂಗಾರ್, ಪುರಸಭೆ ಕಚೇರಿ ಲೆಕ್ಕಿಗ ರಮೇಶ್ ಬೆಳಂಕರ್ ಸೇರಿದಂತೆ ಸಿಬ್ಬಂದಿ ಅನೇಕರು ಹಾಜರಿದ್ದರು.