ಬೆಂಗಳೂರು,ಜೂ.೧೯- ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಹಿಡಿದು ಒಂದು ತಿಂಗಳು ಪೂರೈಸುತ್ತಿರುವಾಗಲೇ ಎಲ್ಲ ಸಚಿವರಿಗೂ ನೀತಿ ಪಾಠ ಹೇಳಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದ್ದು, ಅದರಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಎಲ್ಲ ಸಚಿವರು ಈ ತಿಂಗಳ ೨೧ ರಂದು ದೆಹಲಿಯಲ್ಲಿ ವರಿಷ್ಠರ ನೀತಿ ಪಾಠಕ್ಕೆ ಕಿವಿಗೊಡಲಿದ್ದಾರೆ.ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಕಾರಣವಾದ ಐದು ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನದ ಬಗ್ಗೆ ಗಮನಹರಿಸಿರುವ ಕಾಂಗ್ರೆಸ್ ಹೈಕಮಾಂಡ್, ಈ ಗ್ಯಾರಂಟಿಗಳ ಅನುಷ್ಠಾನದಲ್ಲಿ ಯಾವುದೇ ಲೋಪವಾಗದಂತೆ ಎಚ್ಚರವಹಿಸಿ ಯಶಸ್ವಿಯಾಗಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಎಲ್ಲ ಸಚಿವರಿಗೆ ಸೂಕ್ತ ಮಾರ್ಗದರ್ಶನ ಮಾಡುವ ಜತೆಗೆ ನೀತಿಪಾಠವನ್ನು ಹೇಳಲಿದೆ.ಅನ್ನಭಾಗ್ಯ ಯೋಜನೆಯಡಿ ೧೦ ಕೆಜಿ ಅಕ್ಕಿ ನೀಡಲು ಅಗತ್ಯವಾದ ಹೆಚ್ಚುವರಿ ಅಕ್ಕಿಯನ್ನು ಕೇಂದ್ರ ಕೊಡಲು ಒಪ್ಪದಿರುವುದನ್ನು ಖಂಡಿಸಿ ನಾಳೆ ಕಾಂಗ್ರೆಸ್ ಪಕ್ಷ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಆಯಾ ಜಿಲ್ಲಾ ಉಸ್ತುವಾರಿ ಸಚಿವರುಗಳು ನೇತೃತ್ವದಲ್ಲಿ ಪ್ರತಿಭಟನೆ, ಧರಣಿ ನಡೆಸಲಿದೆ. ಈ ಪ್ರತಿಭಟನಾ ಧರಣಿ ಮುಗಿಸಿಕೊಂಡು ಎಲ್ಲ ಸಚಿವರುಗಳು ದೆಹಲಿಯ ವಿಮಾನ ಏರಲಿದ್ದಾರೆ. ನಾಡಿದ್ದು ಜೂ. ೨೧ ರಂದು ವರಿಷ್ಠರ ನೀತಿಪಾಠ ಸಭೆಯಲ್ಲಿ ಪಾಲ್ಗೊಂಳ್ಳುವರು.ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಹ ನಾಳೆ ಸಂಜೆಯೇ ದೆಹಲಿಗೆ ತೆರಳುವರು. ದೆಹಲಿಯಲ್ಲಿ ವರಿಷ್ಠರ ಸಭೆ ಜೂ. ೨೧ ರಂದು ನಡೆಯಲಿದ್ದು, ಅದನ್ನು ಮುಗಿಸಿಕೊಂಡು ಎಲ್ಲ ಸಚಿವರುಗಳು ಜೂ. ೨೨ ರಂದು ರಾಜ್ಯಕ್ಕೆ ವಾಪಸ್ಸಾಗುವರು.ವರಿಷ್ಠರ ನೀತಿಪಾಠದ ಸಭೆ ದೆಹಲಿಯಲ್ಲಿ ಈ ತಿಂಗಳ ೨೧ ರಂದು ನಿಗದಿಯಾಗಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ, ಕಾಂಗ್ರೆಸ್‌ನ ಯುವರಾಜ ರಾಹುಲ್‌ಗಾಂಧಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಈ ಸಭೆಯಲ್ಲಿ ರಾಜ್ಯದ ಎಲ್ಲ ಸಚಿವರುಗಳಿಗೆ ಆಡಳಿತದ ಸೂಕ್ತ ಮಾರ್ಗದರ್ಶನ ಹಾಗೂ ನೀತಿಪಾಠವನ್ನು ಹೇಳುವರು.
ಲೋಕಸಭಾ ಚುನಾವಣೆ:ಕರ್ನಾಟಕ ಮಾಡಲ್ ಚರ್ಚೆ
ವರಿಷ್ಠರು ಈ ಸಭೆಯಲ್ಲಿ ಮುಂದಿನ ಲೋಕಸಭಾ ಚುನಾವಣೆಯ ಸಿದ್ಧತೆಗಳ ಬಗ್ಗೆಯೂ ಚರ್ಚೆಗಳು ನಡೆಯಲಿದ್ದು, ಕರ್ನಾಟಕದಲ್ಲಿ ಜಾರಿ ಮಾಡಿರುವ ಗ್ಯಾರಂಟಿ ಯೋಜನೆಯ ಮಾದರಿಯನ್ನು ಬೇರೆ ರಾಜ್ಯಗಳಲ್ಲೂ ಅನುಷ್ಠಾನಗೊಳಿಸುವ ಬಗ್ಗೆಯೂ ಈ ಸಭೆಯಲ್ಲಿ ಚರ್ಚೆ ನಡೆಯಲಿದ್ದು, ಕರ್ನಾಟಕ ಮಾದರಿಯನ್ನು ಇಡೀ ದೇಶಕ್ಕೆ ವಿಸ್ತರಿಸಿ ಅಧಿಕಾರದ ಗದ್ದುಗೆ ಏರಲು ವರಿಷ್ಠರು ಚಿಂತನೆ ನಡೆಸಿದ್ದು, ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಆಸಕ್ತಿ ತೋರಿದ್ದಾರೆ. ಹಾಗಾಗಿಯೇ ಗ್ಯಾರಂಟಿ ಯೋಜನೆಯ ಯಶಸ್ವಿ ಅನುಷ್ಠಾನದ ಬಗ್ಗೆಯೂ ಈ ಸಭೆಯಲ್ಲಿ ಸಚಿವರುಗಳಿಗೆ ಹೈಕಮಾಂಡ್ ಕೆಲವು ಸಲಹೆ- ಸೂಚನೆಗಳನ್ನು ನೀಡಲಿದೆ ಎಂದು ಕಾಂಗ್ರೆಸ್‌ನ ಉನ್ನತ ಮೂಲಗಳು ಹೇಳಿವೆ.