ಕೈ ಶಾಸಕರಿಂದ ಪ್ರಜಾಪ್ರಭುತ್ವಕ್ಕೆ ಅವಮಾನ ಈಶ್ವರಪ್ಪ ಕಿಡಿ

ಮೈಸೂರು, ಸೆ. ೧೬-ವಿಧಾನ ಪರಿಷತ್‌ನಲ್ಲಿ ಮತಾಂತರ ಕಾಯ್ದೆ ಮಸೂದೆ ಕುರಿತು ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಮಸೂದೆಗಳ ಪ್ರತಿಗಳನ್ನು ಹರಿದು ಹಾಕಿ ಕಾಂಗ್ರೆಸ್ ನಾಯಕರು ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿದ್ದಾರೆಂದು ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಕಿಡಿಕಾರಿದ್ದಾರೆ.
ಮೈಸೂರಿನಲ್ಲಿಂದು ಸುದ್ದಿಗಾರರಿಗೆ ಮಾತನಾಡಿದ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ, ರಾಹುಲ್ ಗಾಂಧಿಯವರನ್ನು ಸಂತೃಪ್ತಿ ಪಡಿಸಲು ಮಸೂದೆಯ ಪ್ರತಿಯನ್ನು ಕಾಂಗ್ರೆಸ್ ನಾಯಕರು ಹರಿದು ಹಾಕಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.
ಹಿಂದುಳಿದ, ದಲಿತ ಬಡವರಿಗೆ ಆಮಿಷವೊಡ್ಡಿ ಮತಾಂತರ ನಡೆಯುತ್ತಿದೆ. ದೇಶದ ಮತದಾನ ಸಮೇಕ್ಷೆಯಲ್ಲಿ ಮತಾಂತರವಾಗುತ್ತಿರುವುದು ಗೊತ್ತಾಗುತ್ತಿದೆ. ಕಡುಬಡವರಿಗೆ ಆಮಿಷ ತೋರಿಸಿ ಮತಾಂತರ ನಡೆಸುತ್ತಿದ್ದಾರೆ ಎಂದು ಹೇಳಿದರು.
ಸ್ವಯಂಪ್ರೇರಿತವಾಗಿ ಮತಾಂತರವಾದರೆ ತಪ್ಪು ಇಲ್ಲ. ಆದರೆ ಬಲವಂತವಾಗಿ ಮತಾಂತರ ಮಾಡಬಾರದು. ನಿನ್ನೆ ಮೇಲ್ಮನೆಯಲ್ಲಿ ಈ ಮಸೂದೆ ಅಂಗೀಕಾರವಾಗಿದ್ದು ಚಾರಿತ್ರಿಕ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ. ಈ ಮೂಲಕ ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ಚಿಕ್ಕ ಜಯ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ಗೆ ಇಡಿ ಸಮನ್ಸ್ ಜಾರಿ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಭಾರತ್ ಜೋಡೋ ಯಾತ್ರೆಯ ಸಿದ್ದತೆಯಲ್ಲಿರುವ ವೇಳೆ, ವಿಧಾನ ಮಂಡಲ ಅಧಿವೇಶನ ನಡೆಯುತ್ತಿರುವಾಗ ಇಡಿ ನೀಡಿರುವ ಸಮನ್ಸ್‌ಗೆ ಆಕ್ಷೇಪ ವ್ಯಕ್ತಪಡಿಸಲು ಸರಿಯಲ್ಲ. ಡಿ.ಕೆ. ಶಿವಕುಮಾರ್ ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಂದಿದ್ದಾರೆ. ಅವರು ನಿರಪರಾಧಿ ಸಾಬೀತಾಗುವವರೆಗೆ ಇಂತಹ ಹೇಳಿಕೆ ನೀಡಬಾರದು ಎಂದು ತಾಕೀತು ಮಾಡಿದರು.
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ತಮಗೆ ಕ್ಲೀನ್ ಚಿಟ್ ಸಿಕ್ಕಿದೆ. ಹೀಗಾಗಿ ತಮಗೆ ವೃತ್ತಿ ಸ್ಥಾನ ನೀಡಬೇಕಾಗಿತ್ತು. ಆದರೆ ಇನ್ನು ನೀಡಿಲ್ಲ. ಇದು ಸಹಜವಾಗಿಯೇ ಸಮಾಧಾನವಾಗಿದೆ ಎಂದು ಈಶ್ವರಪ್ಪ ಹೇಳಿದರು.